☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

PAKISTAN: ಸಿಂಧೂ ನೀರು ತಡೆದರೆ ಯುದ್ಧ ನಿಶ್ಚಿತ – ಯುಎನ್ ಜಿಎ ವೇದಿಕೆಯಲ್ಲಿ ಪಾಕ್ ಪ್ರಧಾನಿ ಮೊಂಡಾಟ

“ಸಿಂಧೂ ನದಿ ನೀರು ತಡೆದರೆ ಯುದ್ಧಕ್ಕೆ ಸಮಾನ” ಎಂದು ಪಾಕಿಸ್ತಾನ (Pakistan) ಪ್ರಧಾನಿ ಶಹಬಾಜ್ ಷರೀಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಯುಎನ್ ಜಿಎ ಅಧಿವೇಶನದಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಭಾರತದ ವಿರುದ್ಧ ಹರಿಹಾಯ್ದು ಕಾಶ್ಮೀರ ವಿಚಾರವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ನ್ಯಾಯಸಮ್ಮತ ಪರಿಹಾರ ಅಗತ್ಯವಿದ್ದು, ವಿಶ್ವಸಂಸ್ಥೆಯ ನಿರ್ಣಯದಂತೆ ಅಲ್ಲಿನ ಜನರಿಗೆ ಜನಮತ ಸಂಗ್ರಹದ ಹಕ್ಕು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾಶ್ಮೀರಿಗಳು ಹಲವು ದಶಕಗಳಿಂದ ಸೇನಾ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ದಮನ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿರುವುದನ್ನು ಖಂಡಿಸಿದರು. ಪಾಕಿಸ್ತಾನಕ್ಕೆ ಹರಿದು ಬರುವ ನದಿ ನೀರನ್ನು ತಡೆದರೆ ಅಥವಾ ದಿಕ್ಕು ಬದಲಿಸಿದರೆ ಅದನ್ನು ಯುದ್ಧದ ಕ್ರಮವೆಂದೇ ಪರಿಗಣಿಸಲಾಗುವುದು, ನೀರನ್ನು ಎಂದಿಗೂ ಅಸ್ತ್ರವಾಗಿ ಬಳಸಬಾರದು ಎಂದು ಅವರು ಹೇಳಿದರು.

ಇದನ್ನೂ ಓದಿ : ದೀನ್‌ದಯಾಳ್ ಜಯಂತಿಯಲ್ಲಿ ಭಜನ್ ಕ್ಲಬ್ಬಿಂಗ್: ಜೆನ್ ಝೀ ಜೊತೆ ಮೋದಿ ಭಕ್ತಿ ಸಂಭ್ರಮ

ಕಳೆದ ವರ್ಷ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತ ಸರ್ಕಾರ 1960ರ ಸಿಂಧೂ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ಕ್ರಮವನ್ನು ಪ್ರಸ್ತಾಪಿಸಿದ ಷರೀಫ್, ಭಾರತದ ನಿರ್ಧಾರಕ್ಕೆ ಕಾನೂನುಬದ್ಧತೆ ಇಲ್ಲ ಎಂದು ವಾದಿಸಿದರು. ಪಾಕಿಸ್ತಾನದ ಈ ಹೇಳಿಕೆಗಳಿಗೆ ಈ ಹಿಂದೆಯೇ ಭಾರತ ಹಲವು ಬಾರಿ ತಿರುಗೇಟು ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿದೆ, ಭಯೋತ್ಪಾದನೆ ನಡೆಯುತ್ತಿರುವಾಗ ಮಾತುಕತೆಗೆ ಅವಕಾಶವಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದೆ.

ಯುದ್ಧಕ್ಕೆ ಸಿದ್ಧ..!

ಈ ವಿವಾದವನ್ನು ಕೇವಲ ನೀರಿನ ಹಂಚಿಕೆಯ ಸಮಸ್ಯೆಯಾಗಿ ನೋಡಲು ಸಾಧ್ಯವಿಲ್ಲ. ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಜಾರಿಗೆ ಬಂದ ಸಿಂಧೂ ಒಪ್ಪಂದ ಎರಡು ದೇಶಗಳ ನಡುವೆ ಮೂರು ಯುದ್ಧಗಳು ನಡೆದರೂ ಉಳಿದುಕೊಂಡಿದ್ದ ಅಪರೂಪದ ರಾಜತಾಂತ್ರಿಕ ಒಪ್ಪಂದವಾಗಿತ್ತು. ಪಾಕಿಸ್ತಾನದ ಒಟ್ಟು ಕೃಷಿ ಭೂಮಿಯ ಶೇಕಡ 80ಕ್ಕಿಂತ ಹೆಚ್ಚು ಮತ್ತು ಕುಡಿಯುವ ನೀರಿನ ದೊಡ್ಡ ಪಾಲು ಸಿಂಧೂ ಮತ್ತು ಅದರ ಉಪನದಿಗಳನ್ನೇ ಅವಲಂಬಿಸಿದೆ. ಹೀಗಾಗಿ ನೀರಿನ ಹರಿವಿಗೆ ಅಡ್ಡಿಯಾದರೆ ಅದು ಅಲ್ಲಿನ ಆಹಾರ ಭದ್ರತೆ ಮತ್ತು ಆರ್ಥಿಕತೆಗೆ ನೇರ ಹೊಡೆತವಾಗುತ್ತದೆ. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ ಒಪ್ಪಂದವನ್ನು ಅಸ್ತ್ರವಾಗಿ ಬಳಸಿದ್ದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವಂತೆ ಇಸ್ಲಾಮಾಬಾದ್ ಮೇಲೆ ಒತ್ತಡ ಹೇರುವ ಕಾರ್ಯತಂತ್ರದ ಭಾಗವಾಗಿದೆ.

ಒಪ್ಪಂದದಲ್ಲಿ ಏಕಪಕ್ಷೀಯವಾಗಿ ಹೊರಬರಲು ಅವಕಾಶವಿಲ್ಲ ಎಂಬುದು ಪಾಕಿಸ್ತಾನದ ಕಾನೂನು ವಾದವಾದರೆ, ರಾಷ್ಟ್ರೀಯ ಭದ್ರತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಂತಹ ಅಸಾಧಾರಣ ಸಂದರ್ಭದಲ್ಲಿ ತಾತ್ಕಾಲಿಕ ಸ್ಥಗಿತಕ್ಕೆ ಅವಕಾಶವಿದೆ ಎಂಬುದು ಭಾರತದ ಲೆಕ್ಕಾಚಾರ. ವಿಶ್ವಸಂಸ್ಥೆಯಲ್ಲಿ ಜನಮತಗಣನೆಯ ಮಾತು ಇಂದು ಕಾಲಮಿತಿ ಮೀರಿದ ವಾದವಾಗಿದೆ, ಏಕೆಂದರೆ ಶಿಮ್ಲಾ ಒಪ್ಪಂದದ ನಂತರ ಕಾಶ್ಮೀರ ವಿಚಾರ ದ್ವಿಪಕ್ಷೀಯ ವಿಚಾರವಾಗಿ ಉಳಿದಿದೆ ಮತ್ತು 370ನೇ ವಿಧಿ ರದ್ದತಿಯ ನಂತರ ಆಂತರಿಕ ವಿಚಾರವಾಗಿದೆ.

ಷರೀಫ್ ಯುದ್ಧದ ಮಾತುಗಳು ಅಂತರರಾಷ್ಟ್ರೀಯ ಸಮುದಾಯದ ಅನುಕಂಪ ಗಳಿಸುವ ಮತ್ತು ದೇಶದೊಳಗಿನ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನದಂತೆ ಕಾಣುತ್ತದೆ. ಜೊತೆಗೆ ಹವಾಮಾನ ಬದಲಾವಣೆ, ಹಿಮನದಿಗಳ ಕರಗುವಿಕೆ ಮತ್ತು ಭವಿಷ್ಯದ ನೀರಿನ ಕೊರತೆಯ ಸಂದರ್ಭದಲ್ಲಿ ಇಂತಹ ಬೆದರಿಕೆಗಳು ದಕ್ಷಿಣ ಏಷ್ಯಾದ ಇಬ್ಬರು ಪರಮಾಣು ಶಕ್ತಿಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿ ಇಡೀ ಪ್ರದೇಶದ ಸ್ಥಿರತೆಗೆ ಅಪಾಯ ತಂದೊಡ್ಡುತ್ತವೆ.