ನವದೆಹಲಿ : ಜನಪಥ್‌ನಲ್ಲಿ ವಿಪಕ್ಷ ‘ಇಂಡಿಯಾ’ ಮೈತ್ರಿಕೂಟ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರ ಮೇಲೆ ಮಹಿಳಾ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಂತರ್ ಮಂತರ್ ಕಡೆಗೆ ಮೆರವಣಿಗೆ ಸಾಗುತ್ತಿದ್ದ ಸಂಸದರು ಮತ್ತು ನಾಯಕರನ್ನು ಅಶೋಕ ರಸ್ತೆಯ ಬಳಿ ದೆಹಲಿ ಪೊಲೀಸರು ತಡೆದು ವಶಕ್ಕೆ ಪಡೆಯಲು ಯತ್ನಿಸಿದರು. ಈ ವೇಳೆ ರಸ್ತೆಯಲ್ಲೇ ಕುಳಿತು ಧರಣಿ ನಡೆಸುತ್ತಿದ್ದ ಪ್ರಿಯಾಂಕಾ ಅವರನ್ನು ಬಲವಂತವಾಗಿ ತೆರವುಗೊಳಿಸಲುತ್ನಿಸಿದಾಗ, ಮಹಿಳಾ ಸಿಬ್ಬಂದಿ ತಮ್ಮನ್ನು ನೆಲಕ್ಕೆ ತಳ್ಳಿ, ದೇಹದಾದ್ಯಂತ ಪರಚಿ ಗಾಯಗೊಳಿಸಿದ್ದಾರೆ ಎಂದು ಪ್ರಿಯಾಂಕಾ ದೂರಿದ್ದಾರೆ.
ಇದನ್ನೂ ಓದಿ : ಪ್ರೊಟೆಸ್ಟ್ ವೇಳೆ ರಾಗಾ ಪೊಲೀಸರ ವಶಕ್ಕೆ – ಬರ್ಲಿನ್ ನಿಂದಲೇ ತರೂರ್ ಕಿಡಿ
ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ವಿಪಕ್ಷಗಳ ಒಕ್ಕೂಟದ ನಾಯಕರು ರಸ್ತೆಗಿಳಿದಿದ್ದರು. ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ಸಂಸದರು ಮತ್ತು ಪ್ರಮುಖ ನಾಯಕರನ್ನು ಪೊಲೀಸರು ತಡೆದು ವಶಕ್ಕೆ ಪಡೆದ ನಂತರ ಪ್ರತಿಭಟನೆ ಮತ್ತಷ್ಟು ಉಗ್ರರೂಪ ತಾಳಿತು. ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿದ್ದ ಧರಣಿಯನ್ನು ಹದ್ದುಬಸ್ತಿಗೆ ತರಲು ಭದ್ರತಾ ಪಡೆಗಳು ಅನುಸರಿಸಿದ ಕಠಿಣ ಹಾದಿ ಮತ್ತು ಮಹಿಳಾ ಜನಪ್ರತಿನಿಧಿಯೊಬ್ಬರಿಗೆ ಎಸಗಲಾದ ದೈಹಿಕ ದೌರ್ಜನ್ಯವು ರಾಜಧಾನಿಯಲ್ಲಿ ತೀವ್ರ ಉದ್ವಿಗ್ನತೆಯನ್ನು ಸೃಷ್ಟಿಸಿತು.
ಪ್ರಜಾಪ್ರಭುತ್ವದ ಹಕ್ಕಿನ ದಮನ..!
ವಿಪಕ್ಷಗಳು ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭೂತ ಹಕ್ಕಾಗಿದೆ. ಆದರೆ, ಪ್ರತಿಭಟನಾ ನಿರತ ಮಹಿಳಾ ನಾಯಕಿಯರನ್ನು ನಿಯಂತ್ರಿಸುವಾಗ ಮತ್ತು ವಶಕ್ಕೆ ಪಡೆಯುವಾಗ ತೀವ್ರ ಬಲಪ್ರಯೋಗ ಮಾಡುವುದು, ನೂಕಾಟ-ತಳ್ಳಾಟ ನಡೆಸುವುದು ಪೊಲೀಸ್ ಇಲಾಖೆಯ ವೃತ್ತಿಪರತೆಗೆ ಕಳಂಕ ತರುತ್ತದೆ. ಪ್ರಮುಖ ರಾಜಕೀಯ ನಾಯಕರ ವಿರುದ್ಧವೇ ಇಂತಹ ಘಟನೆಗಳು ಜರುಗಿದಾಗ, ಸಾರ್ವಜನಿಕ ಪ್ರತಿಭಟನಾಕಾರರ ಭದ್ರತೆಯ ಕುರಿತು ಕಳವಳ ಜೊತೆಗೆ ರಾಜಕೀಯ ಸಮಾರಾ ಕೂಡ ಜೋರಾಗುತ್ತದೆ. ಇಂತಹ ಘಟನೆಗಳು ರಾಜಕೀಯ ವಾಕ್ಸಮರಕ್ಕೆ ರಹದಾರಿ ಮಾಡಿಕೊಡುವುದಲ್ಲದೆ, ಪ್ರಜಾಸತ್ತಾತ್ಮಕ ಚಳವಳಿಗಳ ಮೂಲ ಆಶಯವನ್ನು ಬದಿಗಿಟ್ಟು ಬಲಪ್ರಯೋಗದ ವಿವಾದಗಳಿಗೆ ಹೆಚ್ಚು ಆದ್ಯತೆ ಸಿಗುವಂತೆ ಮಾಡುತ್ತವೆ.




