ಬೆಂಗಳೂರು : ಸ್ಟಿಂಗ್ ಆಪರೇಷನ್ (Sting operation) ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಯಲ್ಲೇ ವಿಡಿಯೋ ಅಪ್ಲೋಡ್ ಮಾಡಲಾಗಿದೆ ಮತ್ತು 29 ಲಕ್ಷ ರೂಪಾಯಿ ಹಣಕಾಸು ವಹಿವಾಟು ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಗಂಭೀರ ಆರೋಪ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಕಿಂಗ್ ನ ಪೆನ್ ಡ್ರೈವ್ ಬ್ರದರ್ ಎಂಬ ಫಲಕ ಪ್ರದರ್ಶಿಸಿ ಸುದ್ದಿಗೋಷ್ಠಿ ನಡೆಸಿದ ಅವರು, 2026ರ ಆಗಸ್ಟ್ 27ರಂದು ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸ್ಟಿಂಗ್ ವಿಡಿಯೋ ತೋರಿಸಿ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಬಳಸಲು ಅನುಮತಿ ಕೇಳಿದ್ದರು ಮತ್ತು ಮೋದಿ ಅವರು ಗೋ ಅಹೆಡ್ ಎಂದಿದ್ದರು ಎಂದು ಹೇಳಿದ್ದಾರೆ. ಈ ಮಾತನ್ನು ಕುಮಾರಸ್ವಾಮಿಯವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ ಆಡಿಯೋ ಸಾಕ್ಷಿ ತಮ್ಮ ಬಳಿ ಇದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಕುಮಾರಸ್ವಾಮಿ ಸಮ್ಮುಖದಲ್ಲೇ ವಿಡಿಯೋ ಅಪ್ಲೋಡ್
ಕುಮಾರಸ್ವಾಮಿ ಅವರು ಸ್ಟಿಂಗ್ ಕೆಲಸಕ್ಕಾಗಿ ಪ್ರಜ್ವಲ್ ಪ್ರಸಾದ್, ರಿತೇಶ್ ಹಾಗೂ ವಿನೋದ್ ಅವರನ್ನು ನೇಮಿಸಿಕೊಂಡಿದ್ದರು ಮತ್ತು ಅವರಿಗೆ ತಿಂಗಳಿಗೆ ಒಂದು ಲಕ್ಷದಿಂದ ಎರಡು ಲಕ್ಷ ರೂಪಾಯಿವರೆಗೆ ಸಂಬಳ ನಿಗದಿ ಮಾಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಬಾಗೇಪಲ್ಲಿ ಪ್ರಶಾಂತ್ ಮೂಲಕ ವಿಡಿಯೋ ಪಡೆದು ರಿತೇಶ್ ಮತ್ತು ವಿನೋದ್ ಗೆ 50 ಸಾವಿರ ರೂಪಾಯಿ ನೀಡಿ ಹೊಸ ಮೊಬೈಲ್ ಖರೀದಿಸಲಾಗಿತ್ತು. ಆ ಮೊಬೈಲ್ ನಿಂದ ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ದೆಹಲಿ ನಿವಾಸದಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದೆ ಎಂದು ಬಂಧಿತ ಆರೋಪಿ ರಿತೇಶ್ ಸ್ವತಃ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ ಈ ಮೂವರ ಖಾತೆಗಳಿಂದ ಮೂರು ಪ್ರತ್ಯೇಕ ದಿನಗಳಲ್ಲಿ 29 ಲಕ್ಷ ರೂಪಾಯಿ ವಹಿವಾಟು ನಡೆದಿದ್ದು, ಈ ಹಣ ಯಾರದ್ದು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಬಿಡುಗಡೆ ಮಾಡಿರುವುದು ಕೇವಲ ಶೇ. 10ರಷ್ಟು ಸತ್ಯ ಮಾತ್ರ. ಗುರುವಾರ ಅಥವಾ ಶುಕ್ರವಾರದ ವೇಳೆಗೆ ಇನ್ನಷ್ಟು ಮಹತ್ವದ ವಿವರಗಳು ಹೊರಬರಲಿವೆ ಎಂದು ಕಾಂಗ್ರೆಸ್ ಹೇಳಿದೆ. ಸಂತ್ರಸ್ತ ಮಹಿಳೆ ಈ ಹಿಂದೆಯೇ ಇ-ಮೇಲ್ ದೂರು ನೀಡಿದ್ದರು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ, ಆ ಇ-ಮೇಲ್ ಪ್ರತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. ಅಸಲಿಗೆ ಯಾವುದೇ ಸ್ಟಿಂಗ್ ಅಥವಾ ದೌರ್ಜನ್ಯ ನಡೆದಿಲ್ಲ, ಕೇವಲ ಹಣ ವಸೂಲಿ ಮತ್ತು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಈ ಷಡ್ಯಂತ್ರ ಹೆಣೆಯಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಇದನ್ನೂ ಓದಿ : ಸ್ಟಿಂಗ್ ಪ್ರಕರಣ ಕಟ್ಟುಕಥೆ – ಪೊಲೀಸ್ ದಾಖಲೆ ಮುಂದಿಟ್ಟು ಹೆಚ್ .ಡಿ.ಕೆ ತಿರುಗೇಟು
ಈ ಪ್ರಕರಣ ಈಗ ಕೇವಲ ಸ್ಟಿಂಗ್ ವಿವಾದವಾಗಿ ಉಳಿದಿಲ್ಲ, ರಾಜಕೀಯ ಆರೋಪ ಪ್ರತ್ಯಾರೋಪಗಳ ಕೇಂದ್ರಬಿಂದುವಾಗಿದೆ. ಕಳೆದ ಒಂದು ತಿಂಗಳಿನಿಂದ ಕುಮಾರಸ್ವಾಮಿ ಸತತ ಸುದ್ದಿಗೋಷ್ಠಿ ನಡೆಸುತ್ತಿದ್ದರೆ, ಈಗ ಕಾಂಗ್ರೆಸ್ ಪ್ರಧಾನಿ ಮೋದಿ ಹೆಸರನ್ನೇ ಎಳೆತಂದು ಪ್ರತಿ ದಾಳಿ ನಡೆಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಜನಪ್ರಿಯತೆ ಸಹಿಸಲಾಗದೆ 2028ರ ಅಧಿಕಾರಕ್ಕಾಗಿ ಮೋದಿ ಮತ್ತು ಅಮಿತ್ ಶಾ ಸುಪಾರಿ ಕೊಟ್ಟಿದ್ದಾರೆ ಎಂಬ ಕಾಂಗ್ರೆಸ್ ಮಾತು, ಈ ವಿವಾದಕ್ಕೆ ರಾಷ್ಟ್ರೀಯ ಆಯಾಮ ನೀಡುವ ಪ್ರಯತ್ನವಾಗಿದೆ. ಆದರೆ ಇಲ್ಲಿ ಮುಖ್ಯವಾಗಿರುವುದು ಆಡಿಯೋ, ತಪ್ಪೊಪ್ಪಿಗೆ ಹೇಳಿಕೆ ಮತ್ತು 29 ಲಕ್ಷ ವಹಿವಾಟಿನ ಬ್ಯಾಂಕ್ ದಾಖಲೆಗಳಂತಹ ತಾಂತ್ರಿಕ ಸಾಕ್ಷ್ಯಗಳು. ಪೊಲೀಸ್ ಆಯುಕ್ತರು ಮುಂದೆ ಬಿಡುಗಡೆ ಮಾಡುವ ಪೂರ್ಣ ವರದಿಯೇ ಯಾರ ಆರೋಪ ನಿಜ, ಯಾರದ್ದು ರಾಜಕೀಯ ಕಟ್ಟುಕಥೆ ಎಂಬುದನ್ನು ನಿರ್ಧರಿಸಲಿದೆ. ಅಲ್ಲಿಯವರೆಗೆ ಎರಡೂ ಕಡೆಯ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ನಡೆಯುವ ಮಾತಿನ ಸಮರವಾಗಿಯೇ ಕಾಣುತ್ತಿವೆ.




