ಬೆಂಗಳೂರು ವಿಧಾನಮಂಡಲ ಅಧಿವೇಶನ ಅಂತ್ಯವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟದ ಮೇಜರ್ ಸರ್ಜರಿಗೆ ಮುಹೂರ್ತ ನಿಗದಿಯಾಗಿದೆ. ಮೂರರಿಂದ ಐದು ಮಂದಿ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎನ್ನುವ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬದಲಾವಣೆಯ ರೂಪುರೇಷೆ ಸಿದ್ಧಪಡಿಸಲು ಹೈಕಮಾಂಡ್ ರಾಜ್ಯ ಉಸ್ತುವಾರಿಗಳು ಮತ್ತು ಪ್ರಮುಖ ನಾಯಕರ ಜತೆ ಮೊದಲ ಹಂತದ ಸಮಾಲೋಚನೆ ಮುಗಿಸಿದೆ.
ಈ ಬೆಳವಣಿಗೆಯ ಮಧ್ಯೆ ಮುಖ್ಯಮಂತ್ರಿ ಡಿಕೆಗೆ ದೆಹಲಿಯಿಂದ ಕರೆ ಹೋಗಿದ್ದು, ಗುರುವಾರ ದೆಹಲಿಗೆ ತೆರಳಿ ಎಐಸಿಸಿ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿಯಲ್ಲೇ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ತೆಗೆದುಹಾಕಬೇಕು ಎನ್ನುವ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಈಗಾಗಲೇ ಕೆಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರೆ, ಕೈಬಿಡುವ ಸುಳಿವು ಸಿಕ್ಕಿರುವ ಕೆಲವು ಸಚಿವರಲ್ಲಿ ಆತಂಕ ಮತ್ತು ಅಸಮಾಧಾನ ಹೆಚ್ಚಾಗಿದೆ.
ಸಂಪುಟ ರಚನೆಯಲ್ಲಿ ಹಿರಿತನಕ್ಕೆ ಮನ್ನಣೆ ಸಿಗಲಿಲ್ಲ ಮತ್ತು ಸಾಮಾಜಿಕ ನ್ಯಾಯದ ಲೆಕ್ಕಾಚಾರ ತಪ್ಪಿದೆ ಎನ್ನುವ ಆರೋಪ ಪಕ್ಷದೊಳಗೇ ಕೇಳಿಬರುತ್ತಿದೆ. ಮೂಲ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿ ಜನತಾ ಪರಿವಾರದ ಹಿನ್ನೆಲೆಯ ಸುಮಾರು 17 ಮಂದಿಗೆ ಮಂತ್ರಿಗಿರಿ ನೀಡಲಾಗಿದೆ ಎಂದು ಸ್ವಪಕ್ಷದ ಶಾಸಕರೇ ಪ್ರಶ್ನೆ ಎತ್ತುತ್ತಿರುವುದು ಹೈಕಮಾಂಡ್ ಗೆ ಮುಜುಗರ ತಂದಿದೆ.
ಈ ಎಲ್ಲಾ ಅಸಮಾಧಾನಗಳನ್ನು ತಣ್ಣಗಾಗಿಸಿ, ಸಂಭಾವ್ಯ ಬಂಡಾಯವನ್ನು ತಡೆಯಲು ಮತ್ತು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತಕ್ಕೆ ಹೊಸ ಚೈತನ್ಯ ತುಂಬಲು ಹೈಕಮಾಂಡ್ ಸಂಪುಟ ಪುನಾರಚನೆಗೆ ಮುಂದಾಗಿದೆ. ದೆಹಲಿ ಮಾತುಕತೆ ಮುಗಿದ ನಂತರವೇ ಸಂಪುಟದಲ್ಲಿ ಯಾರ ಭವಿಷ್ಯ ಏನು ಎನ್ನುವುದು ಸ್ಪಷ್ಟವಾಗಲಿದೆ.




