ಬೆಂಗಳೂರು : ನೈಸ್ ರಸ್ತೆ (NICE road) ಟೋಲ್ (toll) ವಿಚಾರ ಇದೀಗ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಟೋಲ್ ಶುಲ್ಕ ಪಾವತಿಸಬಾರದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ನೀಡಿರುವ ಹೇಳಿಕೆಯ ಬಳಿಕ ಹಲವರು ಶುಲ್ಕ ನೀಡಲು ನಿರಾಕರಿಸುತ್ತಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನೈಸ್ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾನೂನುಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ದರವನ್ನು ಮನಬಂದಂತೆ ಹೆಚ್ಚಿಸಲಾಗುತ್ತಿದೆ ಎಂದರು. ಎಫ್‌ಐಆರ್ ದಾಖಲಿಸಿದರೂ ಆತಂಕಪಡದೆ ಯಾವುದೇ ಕಾರಣಕ್ಕೂ ಟೋಲ್ ಪಾವತಿಸಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ನೈಸ್ ಸಂಸ್ಥೆ ಕೋಟ್ಯಂತರ ರೂಪಾಯಿ ಸಂಗ್ರಹಿಸಿದೆ ಎಂದು ಆರೋಪಿಸಿದ ಅವರು, ಸರ್ಕಾರ ಟೋಲ್ ಸಂಗ್ರಹವನ್ನು ಏಕೆ ನಿಲ್ಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ನಡುವೆ ಟೋಲ್ ಸಿಬ್ಬಂದಿ, ಟೋಲ್ ಪಾವತಿಸದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಕುಮಾರಸ್ವಾಮಿ ಹೇಳಿಕೆಗಳನ್ನು ಉಲ್ಲೇಖಿಸಿ ಕಾರು, ಲಾರಿ, ಆಟೋ ಹಾಗೂ ದ್ವಿಚಕ್ರ ವಾಹನ ಸವಾರರು ಶುಲ್ಕ ನಿರಾಕರಿಸುತ್ತಿರುವುದರಿಂದ ಸ್ಥಳದಲ್ಲಿ ಗಲಾಟೆ ಮತ್ತು ವಾಗ್ವಾದಗಳು ನಡೆಯುತ್ತಿವೆ.




