ಡಿಕೆ ಶಿವಕುಮಾರ್ ಬರ ನೂತನ ಸಂಪುಟನದ ಸಚಿವ ಎಚ್.ಸಿ. ಬಾಲಕೃಷ್ಣ ಅವರು ತಮಗೆ ನೀಡಲಾಗಿರುವ ಮಂತ್ರಿ ಸ್ಥಾನವನ್ನು ವಾಪಸ್ ನೀಡುವ ವಿಚಾರವಾಗಿ ಎದ್ದಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಸಂಪೂರ್ಣ ಸಮ್ಮತಿಯಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಂ.ಕೃಷ್ಣಪ್ಪ ಅವರಿಗೆ ಮಂತ್ರಿ ಸ್ಥಾನ ನೀಡುವ ಸಲುವಾಗಿ ಅಧಿಕಾರ ಹಸ್ತಾಂತರ ಅಥವಾ ಪದತ್ಯಾಗ ವಿಚಾರದಲ್ಲಿ ಹೈಕಮಾಂಡ್ ನಾಯಕರ ತೀರ್ಮಾನವೇ ಅಂತಿಮವಾಗಿದ್ದು, ತಾವು ಯಾವುದೇ ರೀತಿಯ ಅಸಮಾಧಾನ ಹೊಂದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಆಂತರಿಕ ಶಿಸ್ತು ಮತ್ತು ಸರ್ಕಾರದ ಹಿತದೃಷ್ಟಿಯಿಂದ ಶಾಸಕ ಬಾಲಕೃಷ್ಣ ಅವರ ಈ ಸ್ಪಷ್ಟನೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಆಡಳಿತಾರೂಢ ಪಕ್ಷದಲ್ಲಿ ಮಂತ್ರಿ ಸ್ಥಾನಕ್ಕಾಗಿ ಶಾಸಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಈ ಸಮಯದಲ್ಲಿ, ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಶಿರಸಾವಹಿಸಿ ಬದ್ಧರಾಗುವುದಾಗಿ ಹೇಳಿರುವುದು ಆಶ್ಚರ್ಯ ಮೂಡುವಂತೆ ಮಾಡಿದೆ. ಆದ್ರೆ ಹೇಳಿಕೆಯಷ್ಟೇ ಸುಲಭವಾಗಿ ಸಚಿವ ಸ್ಥಾನ ಬಿಟ್ಟುಕೊಡ್ತಾರಾ ಎಂಬುದು ಸದ್ಯದ ಪ್ರಶ್ನೆ.
ಡಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಸಂಪುಟ ವಿಸ್ತರಣೆ ಬೆಳವಣಿಗೆಯಲ್ಲಿ ಹೊಸ ಮುಖಗಳಿಗೆ ಹಾಗೂ ಅಸಮಾಧಾನಿತ ಶಾಸಕರಿಗೆ ಅವಕಾಶ ಕಲ್ಪಿಸುವ ತೀವ್ರ ಕಸರತ್ತು ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ. ಬಾಲಕೃಷ್ಣ ಹುದ್ದೆ ಬಿಟ್ಟುಕೊಡಲು ಸಿದ್ಧರಾಗಿರುವುದು ಪಕ್ಷದಲ್ಲಿ ಹಿರಿಯರಿಗೆ ದಾರಿ ಮಾಡಿಕೊಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ ಮತ್ತು ಅಸಮಾಧಾನ ತಣ್ಣಗಾಗಲಿದೆ. ಆ ಮೂಲಕ ನಾಯಕತ್ವದ ನಿರ್ಧಾರವನ್ನು ಗೌರವಿಸುವ ಮೂಲಕ ಅವರು ಪಕ್ಷದ ಶಿಸ್ತಿನ ಗೆರೆಯನ್ನು ಎತ್ತಿಹಿಡಿದಿದ್ದಾಗಿ ಪಕ್ಷಕ್ಕೆ ಸಂದೇಶ ರವಾನಿಸಿದ್ದಾರೆ.
ಒಟ್ಟಾರೆಯಾಗಿ ತಮ್ಮ ಸಚಿವ ಸ್ಥಾನದ ಅಳಿವು ಉಳಿವಿನ ಕುರಿತು ಮುಖ್ಯಮಂತ್ರಿಗಳಿಗೆ ಮುಕ್ತ ಅಧಿಕಾರ ನೀಡುವ ಮೂಲಕ ಬಾಲಕೃಷ್ಣ ಅವರು ಸರಕಾರದ ಮಟ್ಟದಲ್ಲಿ ಎದುರಾಗಬಹುದಾಗಿದ್ದ ಸಂಭಾವ್ಯ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಸಿದ್ದರಿರುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.




