DK SHIVAKUMAR: ನಾನು ಕ್ರೈಸ್ತ ಶಾಲೆಯಲ್ಲೇ ಕಲಿತಿದ್ದು, ಧರ್ಮ ಬದಲಿಲಿಲ್ಲ – ಡಿಕೆ ಕ್ರೈಸ್ತ ಪ್ರೇಮ !

ಬೆಂಗಳೂರಿನ ಎಂ.ಜಿ. ರೈಲ್ವೆ ಕಾಲೋನಿಯಲ್ಲಿರುವ ಅಮಲೋದ್ಭವ ಮಾತೆಯ ದೇವಾಲಯದ 125ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿಯೇ ಕಲಿತಿದ್ದು, ಆ ಅವಧಿಯಲ್ಲಿ ತಮ್ಮನ್ನು ಧರ್ಮ ಬದಲಿಸಲು ಯಾರೂ ಪ್ರೇರೇಪಿಸಲಿಲ್ಲ ಎಂಬ ಅನುಭವವನ್ನು ಹಂಚಿಕೊಂಡರು. ಎಲ್ಲ ಧರ್ಮಗಳ ಮೂಲ ಉದ್ದೇಶ ಭಕ್ತಿ ಮತ್ತು ಮಾನವ ಸೇವೆಯೇ ಆಗಿದ್ದು, ಪೂಜಾ ವಿಧಾನಗಳು ಬೇರೆ ಇದ್ದರೂ ಆತ್ಮಶುದ್ಧಿಯ ಗುರಿ ಒಂದೇ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಅವರು, ಮರಕ್ಕೆ ಬೇರು ಹೇಗೆ ಆಧಾರವೋ ಹಾಗೆ ಮನುಷ್ಯನಿಗೆ ನಂಬಿಕೆ ಮುಖ್ಯ ಎಂದು ಹೇಳಿದರು. ಕ್ರೈಸ್ತ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಸಮಾಜದ ಎಲ್ಲ ವರ್ಗದ ಜನರು ಬಳಸಿಕೊಳ್ಳುತ್ತಿದ್ದಾರೆ, ಆದರೂ ಕೆಲವು ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು. ಹಿಂದೆ ಸುಮನಹಳ್ಳಿಯ ಕುಷ್ಠರೋಗಿಗಳ ಪುನರ್ವಸತಿ ಕೇಂದ್ರಕ್ಕೆ ಜಾಗ ನೀಡುವ ವಿಚಾರದಲ್ಲಿ ನಡೆದ ಚರ್ಚೆಯನ್ನು ಪ್ರಸ್ತಾಪಿಸಿದ ಅವರು, ಯಾರೂ ಮುಂದೆ ಬಾರದ ಸಂದರ್ಭದಲ್ಲಿ ಕ್ರೈಸ್ತ ಸಂಸ್ಥೆಗಳು ಕುಷ್ಠರೋಗಿಗಳ ಆರೈಕೆ ಮಾಡಿ ಮಾನವೀಯತೆ ತೋರಿದ್ದರಿಂದ ಸರ್ಕಾರ ಗುತ್ತಿಗೆ ನವೀಕರಣಕ್ಕೆ ನಿರ್ಧರಿಸಿತ್ತು ಎಂದು ವಿವರಿಸಿದರು. ಯಾವ ಜಾತಿ, ಧರ್ಮದಲ್ಲಿ ಹುಟ್ಟುತ್ತೇವೆ ಎಂಬುದು ಪ್ರಕೃತಿಯ ನಿರ್ಧಾರ, ಯಾವುದೇ ಧರ್ಮವು ಇನ್ನೊಬ್ಬರಿಗೆ ಹಾನಿ ಮಾಡಲು ಹೇಳಿಕೊಡುವುದಿಲ್ಲ, ಪ್ರತಿಯೊಬ್ಬರ ಹೃದಯದಲ್ಲಿ ದೇವರಿದ್ದಾನೆ ಮತ್ತು ಮಾನವೀಯತೆಯೇ ದೊಡ್ಡ ಧರ್ಮ ಎಂಬ ಸಂದೇಶವನ್ನು ಅವರು ನೀಡಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತಾಂತರದ ಆರೋಪಗಳು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ರಾಜಕೀಯ ವೇದಿಕೆಗಳಲ್ಲಿ ಧರ್ಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ನಡೆಯುವ ವಾಗ್ವಾದಗಳ ಮಧ್ಯೆ, ಸ್ವತಃ ತಮ್ಮ ವೈಯಕ್ತಿಕ ಅನುಭವದ ಮೂಲಕ ಅವರು ಕ್ರೈಸ್ತ ಸಂಸ್ಥೆಗಳ ಸೇವೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂತಹ ಹೇಳಿಕೆಗಳು ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಒಂದು, ಅಲ್ಪಸಂಖ್ಯಾತ ಸಮುದಾಯ ನಡೆಸುವ ಸೇವಾ ಕಾರ್ಯಗಳಿಗೆ ರಾಜಕೀಯ ಮಾನ್ಯತೆ ಸಿಕ್ಕಂತಾಗುತ್ತದೆ. ಇನ್ನೊಂದು, ಮತಾಂತರದಂತಹ ಸೂಕ್ಷ್ಮ ವಿಷಯವನ್ನು ಚರ್ಚಿಸುವ ಮೂಲಕ ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡುವ ಪ್ರಯತ್ನ. ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಕರೆ, ಪ್ರಸ್ತುತ ರಾಜಕೀಯ ವಾಕ್ಸಮರಕ್ಕೂ ವೇದಿಕೆಯಾಗಬಹುದು.