☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

AMERICA : ಮಿಡ್‌ಟರ್ಮ್‌ನಲ್ಲಿ ಡೆಮಾಕ್ರಟ್‌ಗಳ ಮೇಲುಗೈ, ಟ್ರಂಪ್ ಕೈಯಲ್ಲಿ ವೀಟೋ ಅಸ್ತ್ರ ..!

Image of Donald trump America
ಅಮೆರಿಕದ (America) ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಮೇಲುಗೈ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಮಿಸ್ಟರ್ ವೀಟೋ ಆಗಿ ಕಾರ್ಯನಿರ್ವಹಿಸುವುದಾಗಿ ಎಚ್ಚರಿಕೆ

ಮುಖ್ಯಾಂಶಗಳು

  • ಮಧ್ಯಾಂತರ ಚುನಾವಣೆಯಲ್ಲಿ ಟ್ರಂಪ್ ಹಿನ್ನಡೆ
  • ಮುನ್ನಡೆ ಸಾಧಿಸಿದ ಡೆಮಾಕ್ರೆಟ್ಸ್
  • ವೀಟೋ ಬಳಸುತ್ತಾರಾ ಟ್ರಂಪ್..?

ಯು.ಎಸ್: ಅಮೆರಿಕದ (America) ಮಧ್ಯಂತರ ಚುನಾವಣೆಯಲ್ಲಿ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಕಾಂಗ್ರೆಸ್‌ನಲ್ಲಿ ಮೇಲುಗೈ ಸಾಧಿಸಿದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಮುಂದಿನ ದಿನಗಳಲ್ಲಿ ಮಿಸ್ಟರ್ ವೀಟೋ ಆಗಿ ಕಾರ್ಯನಿರ್ವಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಅಂಗೀಕರಿಸಿ ಕಳುಹಿಸುವ ಯಾವುದೇ ಮಸೂದೆಗೆ ತಡೆ ಒಡ್ಡುವ ಪರಮಾಧಿಕಾರ ತಮಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಸಂವಿಧಾನದ ಆರ್ಟಿಕಲ್ 1, ಸೆಕ್ಷನ್ 7ರ ಅಡಿ ಅಧ್ಯಕ್ಷರಿಗೆ ಎರಡು ಬಗೆಯ ವೀಟೋ ಅವಕಾಶವಿದೆ. ಒಂದು ಸಾಮಾನ್ಯ ವೀಟೋ, ಇನ್ನೊಂದು ಪಾಕೆಟ್ ವೀಟೋ. ಸಾಮಾನ್ಯ ವೀಟೋದಲ್ಲಿ ಎರಡೂ ಸದನಗಳು ಅಂಗೀಕರಿಸಿದ ಮಸೂದೆಯನ್ನು ಅಧ್ಯಕ್ಷರು ಒಪ್ಪದಿದ್ದರೆ ಆಕ್ಷೇಪಣೆಗಳ ಸಮೇತ ಹಿಂದಿರುಗಿಸಬಹುದು. ಅಧಿವೇಶನ ಮುಗಿಯುವ ಕೊನೆಯ ಹತ್ತು ದಿನಗಳಲ್ಲಿ ಬಂದ ಮಸೂದೆಗೆ ಸಹಿ ಹಾಕದೆ ಸುಮ್ಮನೆ ಇಟ್ಟರೆ ಅದು ತಾನಾಗಿಯೇ ರದ್ದಾಗುತ್ತದೆ. ಇದನ್ನೇ ಪಾಕೆಟ್ ವೀಟೋ ಎನ್ನುತ್ತಾರೆ. ಇದಕ್ಕೆ ಕಾಂಗ್ರೆಸ್‌ನಿಂದ ಮರು ಪ್ರಯತ್ನಕ್ಕೆ ಅವಕಾಶವೇ ಇರುವುದಿಲ್ಲ.

ಟ್ರಂಪ್ ಕೈಯಲ್ಲಿ ವೀಟೋ ಪವರ್ !

ಡೆಮಾಕ್ರಟ್‌ಗಳು ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರೂ ವೀಟೋವನ್ನು ಮೀರಲು ಬೇಕಾದ ಮೂರನೇ ಎರಡರಷ್ಟು ಬಲವನ್ನು ಗಳಿಸಿಲ್ಲ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು 435 ಸ್ಥಾನಗಳಲ್ಲಿ ಬಹುಮತಕ್ಕೆ 218 ಸಾಕಾದರೂ, ವೀಟೋ ರದ್ದಿಗೆ 290 ಸ್ಥಾನಗಳು ಬೇಕು. ಡೆಮಾಕ್ರಟ್‌ಗಳಿಗೆ ಸಿಕ್ಕಿರುವುದು ಸುಮಾರು 237 ರಿಂದ 239 ಸ್ಥಾನಗಳು ಮಾತ್ರ. ಸೆನೆಟ್‌ನ ಒಟ್ಟು 100 ಸ್ಥಾನಗಳಲ್ಲಿ ಡೆಮಾಕ್ರಟ್‌ಗಳು 54 ಸ್ಥಾನ ಗೆದ್ದಿದ್ದಾರೆ. ಆದರೆ ವೀಟೋ ರದ್ದಿಗೆ ಅಲ್ಲಿ ಕನಿಷ್ಠ 67 ಸ್ಥಾನಗಳು ಅಗತ್ಯ. ವೀಟೋ ಮೂಲಕ ಟ್ರಂಪ್ ಇಡೀ ಮಸೂದೆಯನ್ನು ತಿರಸ್ಕರಿಸಬಹುದೇ ಹೊರತು ಅದರಲ್ಲಿ ತಮಗೆ ಬೇಕಾದ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಡೆಮಾಕ್ರಟ್‌ಗಳು ಟ್ರಂಪ್ ಅವರ ಹೊಸ ಮಸೂದೆಗಳನ್ನು ತಡೆಯಬಹುದಾದರೂ, ತಮ್ಮದೇ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಗದೆ ಹೋಗಬಹುದು. ಹೀಗಾಗಿ ಮುಂದಿನ ಎರಡು ವರ್ಷ ಅಮೆರಿಕದಲ್ಲಿ ವಿಭಜಿತ ಸರ್ಕಾರದ ಆಡಳಿತ ನಡೆಯಲಿದೆ.

ಇದನ್ನೂ ಓದಿ : ಪಟಾಕಿ ಹಚ್ಚೋದು ದೇಶ ದ್ರೋಹ ಅಂತೆ ! – ಸೋನಿ ರಜ್ದಾನ್ ಗೆ ತಲೆ ಕೆಟ್ಟಿದ್ಯಾ..?

ಈ ಬೆಳವಣಿಗೆ ಕೇವಲ ಕಾನೂನು ತಡೆಗಟ್ಟುವ ವಿಷಯವಾಗಿ ಉಳಿಯುವುದಿಲ್ಲ. ವೀಟೋ ಎಚ್ಚರಿಕೆಯ ಮೂಲಕ ಟ್ರಂಪ್ ಡೆಮಾಕ್ರಟ್‌ಗಳನ್ನು ಮಾತುಕತೆಯ ಮೇಜಿಗೆ ಕರೆತರುವ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂಬುದು ಸ್ಪಷ್ಟ. ತಮಗೆ ಒಪ್ಪಿಗೆಯಿಲ್ಲದ ಕಾನೂನುಗಳನ್ನು ತಡೆದು, ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ರಾಜಿ ಮಾಡಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ. ಮತ್ತೊಂದೆಡೆ ಡೆಮಾಕ್ರಟ್‌ಗಳಿಗೆ ಸಂಖ್ಯಾಬಲ ಇದ್ದರೂ ನಿರ್ಣಾಯಕ ಬಲವಿಲ್ಲದ ಕಾರಣ ಆಡಳಿತದ ಚುಕ್ಕಾಣಿ ಹಿಡಿಯಲು ಆಗದೆ, ವಿರೋಧದ ಮೂಲಕವೇ ಪ್ರಭಾವ ಬೀರಬೇಕಾದ ಸ್ಥಿತಿ ಬಂದಿದೆ. ಇದರಿಂದ ಪ್ರಮುಖ ಸುಧಾರಣಾ ಮಸೂದೆಗಳು ಸಿಲುಕಿಕೊಳ್ಳುವ, ಸರ್ಕಾರಿ ನಿರ್ಧಾರಗಳು ನಿಧಾನವಾಗುವ ಹಾಗೂ ರಾಜಕೀಯ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಮತದಾರರು ಬದಲಾವಣೆ ಬಯಸಿ ನೀಡಿದ ತೀರ್ಪು, ವೀಟೋ ಗೋಡೆಯ ಮುಂದೆ ನಿಂತು ಪರೀಕ್ಷೆಗೆ ಒಳಗಾಗಲಿದೆ.