
ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮೈದುಂಬಿ ಹರಿಯುವ ಜೀವನದಿ ಇದ್ದಂತೆ. ತ್ರಿರತ್ನತ್ರಯರಾದ ಪಂಪ, ರನ್ನ, ಪೊನ್ನರು ಕಟ್ಟಿದ ಸಾಹಿತ್ಯದ ಸಾಮ್ರಾಜ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹೆಮ್ಮೆಯ ಪೀಠವನ್ನಲಂಕರಿಸಿರುವುದು ಕನ್ನಡದ (Kannada) ಹೆಗ್ಗಳಿಕೆ. ಈ ಸಾಮ್ರಾಜ್ಯದಲ್ಲಿ ಬಸವಣ್ಣನವರು ವಚನಗಳ ಮೂಲಕ ಕ್ರಾಂತಿ ಮಾಡಿದ್ದಾರೆ, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ.
ಈಗ ನವೆಂಬರ್ ಬಂದಿದೆ. ಇನ್ನೊಂದು ತಿಂಗಳು ಪೂರ್ತಿ ಕನ್ನಡದ ವೈಭವ ಗೀತೆಗಳು ಮೊಳಗುತ್ತವೆ. ವಾಟ್ಸಾಫ್ ಮತ್ತು ಫೇಸ್ಬುಕ್ಗಳಲ್ಲಿ ಪ್ರೊಫೈಲ್ ಫೋಟೋಗಳು ಕನ್ನಡಮಯವಾಗುತ್ತವೆ. ಹರಿಶಿಣ-ಕುಂಕುಮ ಬಣ್ಣದ ದ್ವಜಗಳು ಹಾರಾಡುತ್ತವೆ. ಆ ನಂತರ ಅವು ಅಲ್ಲಿಯೇ ಧೂಳಿಡಿದು ಒಣಗುತ್ತವೆ. ಅಲ್ಲಿಗೆ ಕನ್ನಡ ರಾಜ್ಯೋತ್ಸವದ ಆಚರಣೆ, ಕನ್ನಡ ಬಳಸಬೇಕು, ಕನ್ನಡ ಶಾಲೆಗಳಿಗೇ ಮಕ್ಕಳನ್ನು ಸೇರಿಸಬೇಕು, ಎಲ್ಲಾ ನಾಮ ಫಲಕಗಳೂ ಕನ್ನಡಲ್ಲಿಯೇ ಇರಬೇಕು ಎಂಬ ಕೂಗುಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತವೆ. ಮತ್ತೆ ನವೆಂಬರ್ ಬರುವವರೆಗೂ ವಿರಾಮ! ಇದು ಕನ್ನಡಿಗರಲ್ಲಿನ ಅಗಾಧ ಕನ್ನಡ ಪ್ರೇಮ.
“ದೇಹದ ಯಾವುದಾದರೂ ಅಂಗವನ್ನು ಬಳಸದೇ ಹೋದರೆ ಅದು ಕ್ರಮೇಣ ನಿಷ್ಕಿçಯಗೊಳ್ಳುತ್ತದೆ” ಎನ್ನುತ್ತದೆ ಡಾರ್ವಿನ್ರ ವಿಕಾಸವಾದ ಸಿದ್ದಾಂತ. ಹಾಗೆಯೇ ಭಾಷೆಯೊಂದರ ಅಭಿವೃದ್ಧಿ ಆ ಭಾಷೆಯೆ ಬಳಕೆಯಿಂದ ಮಾತ್ರ ಸಾಧ್ಯ. ಬಳಸದೇ ಹೋದಲ್ಲಿ ಆ ಭಾಷೆಯ ಒಡಲಲ್ಲಿನ ಬಹುತೇಕ ಪದಗಳು ಪದಕೋಶಕ್ಕೆ ಮಾತ್ರ ಸೀಮಿತಗೊಳ್ಳುತ್ತವೆ. ಈಗಾಗಲೇ ಭಾರತದಲ್ಲಿ ಭಾಷಾ ದಬ್ಬಾಳಿಕೆಗೊಳಗಾಗಿ ಮತ್ತು ಬಳಸುವ ಸಂಖ್ಯೆ ಕಡಿಮೆಯಾಗಿ ಬಹುತೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಉದಾ; ಯುನೆಸ್ಕೊ 2010 ರಲ್ಲಿ ಪ್ರಕಟಿಸಿರುವ ಅಟ್ಲಾಸ್ ಆಫ್ ದಿ ವರ್ಲ್ಡ್ ಲಾಂಗ್ವೇಜಸ್ ಇನ್ ಡೇಂಜರ್ ಪತ್ರಿಕೆಯಲ್ಲಿರುವಂತೆ, ದ್ರಾವಿಡ ಭಾಷೆಯಾದ ಕೊಂಡಾ ಸೇರಿದಂತೆ ಕೊರಗ, ತುಳು, ತುರಿ, ತೋಡ, ಬಡಗ, ಬೋಡೋ, ಚೋಕ್ರಿ, ಜಾರವಾ, ಚಾರಾಹಿ, ಭಗತಿ, ಗೊಂಡಿ ಮುಂತಾದ ಭಾಷೆಗಳು ನಶಿಸುವ ಅಂಚಿನಲ್ಲಿವೆ. ಅಲ್ಲದೆ ಸಂಸ್ಕತವೂ ಕೂಡ, ವಿಫುಲ ಸಾಹಿತ್ಯ ರಾಶಿಯನ್ನೊಂದಿರುವ ಇದೂ ಕೂಡ ಇಂದು ಕೇವಲ ಪೌರೋಹಿತ್ಯ ಭಾಷೆಯಾಗಿಯಷ್ಟೇ ಉಳಿದುಕೊಂಡಿದೆ.
ಸದ್ಯದ ಸ್ಥಿತಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿನ ಭಾಷಾ ಮಾಧ್ಯಮ ಮತ್ತು ಭಾಷೆ ಬಳಸುತ್ತಿರುವ ಜನಸಂಖ್ಯಾ ಪ್ರಮಾಣವನ್ನು ಗಮನಿಸುತ್ತಿದ್ದರೆ ಮುಂದೊಂದು ದಿನ ಕನ್ನಡಕ್ಕೆ ಕಂಟಕ ಎದುರಾಗಬಹುದೇನೋ ಎಂಬ ಆತಂಕ ಕಾಡದೇ ಇರುವುದಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬಹುತೇಕರು ತೆಲುಗು ಭಾಷೆಯನ್ನು ಬಳಸುತ್ತಿದ್ದಾರೆ. ಹಾಗೆಯೇ ಇತರೆ ಗಡಿ ಭಾಗಗಳ ಜಿಲ್ಲೆಗಳಲ್ಲಿ ಆ ಜಿಲ್ಲೆಗಳು ಹೊಂದಿಕೊಂಡಿರುವ ರಾಜ್ಯಗಳ ಭಾಷಾ ಪ್ರಭಾವಕ್ಕೆ ಒಳಗಾಗಿದ್ದಾರೆ. ಅಂದರೆ ತಮಿಳು, ಮಲೆಯಾಳಂ, ಮರಾಠಿ ಇತ್ಯಾದಿ, ಇವರ ಮಾತೃ ಭಾಷೆಗಳೇನೋ ಎಂಬಷ್ಟರ ಮಟ್ಟಿಗೆ ಆ ಭಾಷೆಗಳಿಗೆ ಹೊಂದಿಕೊಂಡಿದ್ದಾರೆ. ಇದು ಬ್ರಿಟಿಷರೇ ತಂದಿಟ್ಟ ಸಂಕಟ. ಅಂದು ಅವರ ಆಡಳಿತದ ಅನುಕೂಲಕ್ಕೆ ತಕ್ಕಂತೆ ಮುಂಬೈ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಎಂದು ರಚಿಸಿದ ಪರಿಣಾಮ ಹಾಗೂ ಕನ್ನಡಿಗರು ಆ ಪ್ರಾಂತ್ಯಗಳಲ್ಲಿ ಹಂಚಿಹೋದ ಕಾರಣಕ್ಕಾಗಿ ಆ ಭಾಷೆಗಳ ಪ್ರಭಾವಕ್ಕೆ ಕನ್ನಡಿಗರು ಒಳಗಾಗಬೇಕಾಯಿತು.
ಭಾಷಾವಾರು ಪ್ರಾಂತ್ಯಗಳು
1856 ರಲ್ಲಿಯೇ ಭಾಷಾವಾರು ಪ್ರಾಂತ್ಯಗಳನ್ನು ನಿರ್ಮಾಣ ಮಾಡಬೇಕೆಂದು ಸಂಸದ ಜಾನ್ ಬ್ರೆಂಟ್ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಸೂಚಿಸಿದ್ದ. 1858ರಲ್ಲಿ ಡೆಪುಯೆಂಟ್ ಚನ್ನಬಸಪ್ಪನವರು ಕನ್ನಡದ ಜನರನ್ನು ಮತ್ತು ಕನ್ನಡದ ಭಾಗಗಳನ್ನು ಒಂದುಗೂಡಿಸಬೇಕೆಂಬ ಚಳವಳಿಯನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ್ದರು. ಇವರು ಕನ್ನಡದ ಉಳಿವಿಗಾಗಿ ಶ್ರಮಿಸಿದ ಮೊದಲ ಹಾಗೂ ಪ್ರಮುಖ ವ್ಯಕ್ತಿ ಕೂಡ. ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ, ಆ ನಂತರ ನಿರ್ದೇಶಕರಾಗಿ ನೇಮಕಗೊಂಡಿದ್ದ ಇವರು ಕನ್ನಡ ಶಾಲೆಗಳ ಸ್ಥಾಪನೆಗೆ ಆದ್ಯತೆ ನೀಡಿದರು. ಆ ಸಂದರ್ಭಕ್ಕೆ ಧಾರವಾಡ, ಬಿಜಾಪುರ, ಬೆಳಗಾವಿ ಭಾಗಗಳಲ್ಲಿ ಕನ್ನಡ ನಶಿಸಿ ಹೋಗುವ ಹಂತ ತಲುಪಿತ್ತು. ಅಂತಹ ಪರಿಸ್ಥಿತಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಬಂದ ಇವರ ಶ್ರಮದಿಂದಾಗಿ ಆ ಭಾಗದಲ್ಲಿ 34 ಶಾಲೆಗಳನ್ನು ಆರಂಭಿಸಿದರು ಮತ್ತು ಆ ಮೂಲಕ ಕನ್ನಡಕ್ಕೆ ಸ್ಥಾನಮಾನ ದೊರಕಿಸಿಕೊಟ್ಟರು. ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ಗಳನ್ನು ತೆರೆದರು. ಆರ್ಥಿಕ ಸಂಕಷ್ಟ ಎದುರಾಗಿ ಅವು ಮುಚ್ಚುವ ಸಂದರ್ಭ ಬಂದಾಗ ತಮ್ಮ ಹೆಂಡತಿಯ ಆಭರಣಗಳನ್ನು ಮಾರಿ ಹಾಸ್ಟೆಲ್ ನಡೆಸಿದ ಮಹನೀಯರಾದರು. ಮುಂದೆ ಏಕೀಕರಣ ಚಳವಳಿ ಆರಂಭವಾಗಿದ್ದು ಈ ಭಾಗದಿಂದಲೇ, ಇದಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದೂ ಕೂಡ ಇವರೇ. ಇಂದು ದಾಖಲಾತಿ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವ ಅಥವಾ ಬೇರೆಡೆಗೆ ವಿಲೀನಗೊಳಿಸುವಂತೆ ಆದೇಶ ಹೊರಡಿಸುವ ಸರ್ಕಾರಗಳಿಗೆ ಇವರ ನಡೆ ಮಾದರಿಯಾಗಬಲ್ಲದು.
ಇದನ್ನೂ ಓದಿ: ಕನ್ನಡವೆಂಬ ಖುಷಿಯ ಹಬ್ಬ! ಕನ್ನಡ ರಾಜ್ಯೋತ್ಸವಕ್ಕೆ ಒಂದು ನಗುನಗುತ್ತಾ ಬರೆದ ಪ್ರೀತಿ ಪತ್ರ
ಭಾಷಾ ರಕ್ಷಣೆಗಾಗಿ ರಾಜ್ಯದಲ್ಲಿ ಕನ್ನಡ ಕಾವಲು ಸಮಿತಿ ಇದೆ. ಅದು ಅಸ್ಥಿತ್ವಕ್ಕೆ ಬಂದಾಗ ಇದೇ ಸಿದ್ದರಾಮಯ್ಯನವರು ಅದರ ಅಧ್ಯಕ್ಷರಾಗಿದ್ದವರು. ಇವರು ಮುಖ್ಯಮಂತ್ರಿಯಾಗಿದ್ದಾಗ ಮನಸ್ಸು ಮಾಡಿದ್ದಿದ್ದರೆ ಸರ್ಕಾರಿ ಶಾಲೆಗಳ ಉಳಿವಿಗೆ, ಭಾಷಾ ಬೆಳವಣಿಗೆಗೆ, ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಕೆಗೆತರಲು ಸಾಧ್ಯವಿತ್ತು ಮತ್ತು ಖಾಸಗಿ ಶಾಲೆಗಳ ಮಾಧ್ಯಮ ನೀತಿಗೆ ಕಡಿವಾಣವನ್ನೂ ಹಾಕಬಹುದಿತ್ತು. ಜಯಂತಿಗಳನ್ನು ಆಚರಿಸಿಯೇ ಸಿದ್ದ ಎಂದು ತೋರುವ ಪೌರುಷವನ್ನು ಕನ್ನಡ ಭಾಷಾ ವಿಚಾರದಲ್ಲಿಯೂ ತೋರಿಸಬಹುದಿತ್ತು. ಮಾತೃ ಭಾಷಾ ವಿಚಾರದಲ್ಲಿ ಮಹಾರಾಷ್ಟçದ ಬಾಳಾ ಠಾಕ್ರೆ ಮತ್ತು ತಮಿಳುನಾಡಿನ ಕರುಣಾನಿಧಿಯವರನ್ನಾದರೂ ಮಾದರಿಯಾಗಿಟ್ಟುಕೊಳ್ಳಬಹುದಿತ್ತು ಪ್ರಸ್ತುತ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಭಾಷಾ ಮಾಧ್ಯಮದ್ದು. 1949 ರಿಂದಲೇ ತೀರ್ಮಾನವಾದಂತೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ನೀಡಬೇಕು, ಕಾರಣ ಮಾತೃ ಭಾಷೆಯಲ್ಲಿರುವ ಕಲಿಸುವಿಕೆಯ ಮತ್ತು ಕಲಿವ ತೀವ್ರತೆ ಬೇರೆ ಭಾಷೆಗಳಲ್ಲಿ ಸಾಧ್ಯವಿಲ್ಲವೆಂಬುದಕ್ಕೆ. ಇನ್ನು ಸಂವಿಧಾನಬದ್ದವಾಗಿ ಜಾರಿಗೆ ತಂದಿರುವ ತ್ರಿಭಾಷಾ ಸೂತ್ರದನ್ವಯ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಆಯಾ ಪ್ರಾದೇಶಿಕ ಭಾಷೆಯನ್ನು ಮಾತೃ ಭಾಷೆಯನ್ನಾಗಿ, ಇಂಗ್ಲೀಷ್ನ್ನು ದ್ವಿತೀಯ ಭಾಷೆಯನ್ನಾಗಿ ಮತ್ತು ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸಲು ಮತ್ತು ಕಲಿಯಲು ಅವಕಾಶಕಲ್ಪಿಸಲಾಗಿದೆ.
1946 ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಸಂದರ್ಭದಲ್ಲಿ ಆಯಾ ಪ್ರಾಂತ್ಯ ಅಥವಾ ರಾಜ್ಯ ಭಾಷೆಗಳನ್ನು ರಕ್ಷಿಸಿಕೊಳ್ಳುವ ಹಕ್ಕು ಅವುಗಳಿಗೇ ಸೇರಿದ್ದು ಎಂದು ಘೋಷಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯೂ ಕೂಡ ಇದನ್ನೇ ಹೇಳಿದೆ. ಆದರೆ ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಭಾಷಾ ಮಾಧ್ಯಮವನ್ನು ನಿರ್ಧರಿಸುವ ಹಕ್ಕು (ಎಲ್.ಕೆ.ಜಿಯಿಂದಲೇ ಸೇರಿದಂತೆ) ಪೋಷಕರಿಗೆ ಸೇರಿದ್ದು ಎಂದು ಹೇಳಿತ್ತು. ಅದರಂತೆಯೇ ಪೋಷಕರೂ ಕೂಡ ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳ ಹಿಂದೆ ಬಿದ್ದಿದ್ದಾರೆ. ಆದರೆ ಫ್ರಾನ್ಸ್, ಚೀನಾ ಸೇರಿದಂತೆ ಪ್ರಪಂಚದ ಎಷ್ಟೋ ರಾಷ್ಟ್ರಗಳು ಈ ಭಾಷೆಯನ್ನು ಮೂಲೆಯಲ್ಲಿ ಕುಳ್ಳಿರಿಸಿರುವ ಸತ್ಯ ನಮ್ಮ ಇಂಗ್ಲೀಷ್ ಭಾಷಾ ಪ್ರೇಮಿಗಳಿಗೆ ಅರಿವಾಗಿಲ್ಲ. ಆ ಶಾಲೆಗಳಲ್ಲಿ ಓದುವ ಬಹುತೇಕ ಮಕ್ಕಳು ಅತ್ತ ಇಂಗ್ಲೀಷ್ನ್ನೂ ಸರಿಯಾಗಿ ಕಲಿಯದೆ ಇತ್ತ ಕನ್ನಡವನ್ನೂ ಸರಿಯಾಗಿ ಕಲಿಯದೆ ಅತಂತ್ರ ಸ್ಥಿತಿಯಲ್ಲಿ ಹೊರಬರುತ್ತಿದ್ದಾರೆ. ಗ್ರಾಮೀಣ ಭಾಗಗಳ ಶಾಲೆಗಳಲ್ಲಿನ ಎಷ್ಟೋ ಶಿಕ್ಷಕರಿಗೇ ಆಂಗ್ಲ ಭಾಷೆ ಬರುವುದಿಲ್ಲ, ಇನ್ನು ಅವರಿಂದ ಕಲಿವ ಮಕ್ಕಳ ಬಗ್ಗೆ ಪೋಷಕರೂ ಕೂಡ ಯೋಚಿಸಬೇಕು.
ಇದನ್ನೂ ಓದಿ: ಎಲ್ಲಾ ಭಾಷೆಗಳಿಗೂ ಕರುನಾಡು ತವರೂರು; ಡಾ. ರಾಜ್ಕುಮಾರ್ ಅಮೂಲ್ಯ ನುಡಿಗಳು
ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇಲ್ಲಿಯೇ ಕಲಿವ ಮಕ್ಕಳಿಗೆ ಕನ್ನಡ ಮಾಧ್ಯಮ ಬೇಕಿರುವುದಾದರೂ ಯಾಕೆಂದರೆ, “ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ? ಕರೆದರೂ ಇಲ್ಲ, ಹಾಲೂ ಬೆಲ್ಲ ಕಾಯಿಸಿ ಇಟ್ಟಿದ್ದೆ”. ಎನ್ನುವಾಗಿನ ಮಜ ಮತ್ತು ಹೊರಳುವ ನಾಲಗೆಯ ವೇಗ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಎನ್ನುವಲ್ಲಿ ಸಾಧ್ಯವೇ ಇಲ್ಲ. “ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆ ಹೆಜ್ಜೆಗೂ ಕುಣಿಯುವ ಕುದುರೆ”ಎಂದು ಅಜ್ಜನ ಕೋಲನ್ನೇ ಕುಣಿಸಿ ಕುಣಿದಾಗ ಇರುತ್ತಿದ್ದ ಖುಶಿ, ಜಾನಿ ಜಾನಿ ಎಸ್ ಪಪ್ಪ, ಈಟಿಂಗ್ ಶುಗರ್ ನೊ ಪಪ್ಪ ಎಂಬ ರೈಮ್ ಹೇಳುವಾಗ ಸಿಗಲಿಕ್ಕಿಲ್ಲ. ಕನ್ನಡ ಭಾಷೆಯಲ್ಲಿನ ಇಂತಹ ಆಟ ಮತ್ತು ಪಾಠ ಹಾಗೂ ಪಾಠದೊಂದಿಗಿನ ಸಂಸ್ಕಾರ ಆ ಆಂಗ್ಲ ಮಾಧ್ಯಮದಲ್ಲಿ ಕಾಣಲಿಕ್ಕಿದೆಯೇ? ಇನ್ನು ಕೆಲ ಖಾಸಗಿ ಶಾಲೆಗಳಂತೂ ತಮ್ಮ ಶಾಲಾ ಆವರಣದಲ್ಲಿ ಕನ್ನಡ ಮಾತಾಡುವಂತೆಯೇ ಇಲ್ಲ ಎಂದು ನಿರ್ಬಂಧ ವಿಧಿಸಿವೆ. ಒಂದು ವೇಳೆ ಮಾತಾಡಿದರೆ ದಂಡ ಹಾಕುವ, ಶಿಕ್ಷಿಸುವ ಕೃತ್ಯಗಳು ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದಿದೆ.
ಇಂಗ್ಲೀಷ್ ವ್ಯಾಮೋಹಕ್ಕೆ ಕಾರಣ
ಪೋಷಕರು ಆಂಗ್ಲ ಮಾಧ್ಯಮದ ಹಿಂದೆ ಬೀಳಲು ಮೂಲ ಕಾರಣ ಭಾಷಾ ಮಾಧ್ಯಮದ ಜತೆಗೆ ಸೌಲಭ್ಯಗಳ ಕಾರಣಕ್ಕಾಗಿ. ನಮ್ಮ ಮಕ್ಕಳೂ ಕೂಡ ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಶೂ ಮತ್ತು ಟೈ ಬಿಗಿದು ಶಿಸ್ತಿನ ಸಿಪಾಯಿಯಂತೆ ಶಾಲೆಗೆ ಹೋಗಲಿ ಮತ್ತು ಉತ್ತಮ ವಾತಾವರಣದಲ್ಲಿ ಓದಲಿ ಎಂಬ ದೃಷ್ಟಿಯಿಂದ. ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳಿಗೆ ಸಮನಾಗಿ ಸರ್ಕಾರಿ ಶಾಲೆಗಳಲ್ಲಿಯೂ ಸರ್ಕಾರ ನೀಡಲಿ. ನಾಲ್ಕು ಕಡೆ ಗೋಡೆ ಒಂದು ಬಾಗಿಲು ಮತ್ತು ಒಂದು ಕಿಟಕಿ ಹಾಗೂ ಒಬ್ಬ ಶಿಕ್ಷಕ ಇದ್ದರಷ್ಟೇ ಶಾಲೆ ಆಗುವುದಿಲ್ಲ.ಹಳ್ಳಿಗೊಂದು ಶಾಲೆಯ ಬದಲಿಗೆ ಎರಡು ಮೂರು ಹಳ್ಳಿಗಳಿಗೊಂದರಂತೆ ಮಾದರಿ ಶಾಲೆಗಳನ್ನು ತೆರೆದು ಖಾಸಗಿ ಶಾಲೆಗಳಂತೆಯೇ ಸವಲತ್ತುಗಳನ್ನು ಮತ್ತು ಬಸ್ ವ್ಯವಸ್ಥೆಯನ್ನು ಕಲ್ಪಿಸಲಿ. ಆಗ ಹಳ್ಳಿಗೊಬ್ಬರಂತೆ ನೇಮಕವಾಗಿ ಎಲ್ಲಾ ವಿಷಯಗಳನ್ನೂ ಒಬ್ಬರೇ ಶಿಕ್ಷಕರು ಗುಣಮಟ್ಟವಿಲ್ಲದೆ ಬೋಧಿಸುವುದು ತಪ್ಪುತ್ತದೆ. ಮೂರ್ನಾಲ್ಕು ಶಿಕ್ಷಕರು ಅಥವಾ ವಿಷಯಕ್ಕೊಬ್ಬರಂತೆ ಶಿಕ್ಷಕರಿದ್ದಾಗ ಪರಿಪೂರ್ಣ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.ಮಕ್ಕಳ ಕಲಿಕೆಯಲ್ಲಿಯೂ ಸುಧಾರಣೆ ಇರುತ್ತದೆ. ಈ ಕುರಿತು ಸರ್ಕಾರ ಗಂಭೀರವಾಗಿ ಯೋಜನೆ ರೂಪಿಸಿದರೆ ಹೊರೆಯೂ ಕಡಿಮೆಯಾಗಬಲ್ಲದು ಮತ್ತು ದಾಖಲಾತಿಯನ್ನೂ ಹೆಚ್ಚಿಸಬಹುದು. ಶಾಲೆಗಳನ್ನು ಮುಚ್ಚುವ ಸ್ಥಿತಿಯೂ ಎದುರಾಗದು.
ಕೊನೆಯದಾಗಿ, ಪ್ರಪಂಚದ 6000 ಭಾಷೆಗಳಲ್ಲಿ ಗಟ್ಟಿಯಾಗಿ ನೆಲೆ ನಿಂತಿರುವ ಹಾಗೂ ಪ್ರಭಾವಿಯೆನಿಸಿಕೊಂಡಿರುವ ಭಾಷೆಗಳು 19. ಈ 19 ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ಕನ್ನಡಿಗರ ಹೆಮ್ಮೆ.
ಮೊದಲ ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲು ನುಡಿದು ಗೆಳೆಯರ ನಡುವೆ ಬೆಳೆದು ಬಂದ ಮಾತದು ಯಾವುದು? ಅದೇ ಕನ್ನಡ ಎಂಬ ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ.




