Singer Krishnaraj: ಖ್ಯಾತ ಹಿನ್ನೆಲೆ ಗಾಯಕ ಕೃಷ್ಣರಾಜ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಮಧುರ ಧ್ವನಿಯಿಂದ 3000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಸಂಗೀತ ನಿರ್ದೇಶಕ ದೇವಾ ನಿಧನರಾದ ವಾರದೊಳಗೆಯೇ ಕೃಷ್ಣರಾಜ್ ಅವರು ಕೂಡ ಅಗಲಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಸಂಗೀತ ನಿರ್ದೇಶಕ ದೇವಾ ಜೊತೆಗಿನ ವಿಶೇಷ ಒಡನಾಟ
ಖ್ಯಾತ ಸಂಗೀತ ನಿರ್ದೇಶಕ ದೇವಾ ಅವರ ಸಂಗೀತ ಸಂಯೋಜನೆಯಲ್ಲಿ ಕೃಷ್ಣರಾಜ್ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ದೇವಾ ಅವರ ಅತ್ಯಂತ ನೆಚ್ಚಿನ ಗಾಯಕರಾಗಿ ಕೃಷ್ಣರಾಜ್ ವಿಶೇಷ ಗುರುತನ್ನು ಪಡೆದಿದ್ದರು. ಕೇವಲ ದೇವಾ ಮಾತ್ರವಲ್ಲದೆ, ದಂತಕಥೆಗಳಾದ ಎ.ಆರ್. ರೆಹಮಾನ್, ಇಳಯರಾಜ ಹಾಗೂ ಯುವನ್ ಶಂಕರ್ ರಾಜಾ ಅವರಂತಹ ದಿಗ್ಗಜರ ಸಂಗೀತ ನಿರ್ದೇಶನದಲ್ಲೂ ಇವರು ಕೆಲ ಪ್ರಮುಖ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ದಿಗ್ಗಜರ ಜೊತೆಗಿನ ಒಡನಾಟ ಇವರ ವೃತ್ತಿಜೀವನಕ್ಕೆ ಮತ್ತಷ್ಟು ಹೆಚ್ಚಿನ ಮೆರುಗು ನೀಡಿತ್ತು.
ಪ್ರಶಸ್ತಿಗಳು ಹಾಗೂ ಕೊನೆಯ ಹಾಡಿನ ವಿವರ
ಕೃಷ್ಣರಾಜ್ ಅವರ ಹುಟ್ಟೂರು ತಮಿಳುನಾಡಿನ ಸೇಲಂ ಜಿಲ್ಲೆಯ ವೀರಪಾಂಡಿ ಪಂಚಾಯತ್ ಒಕ್ಕೂಟದ ವ್ಯಾಪ್ತಿಗೆ ಬರುವ ವೆಂಬಡಿತಾಲಂ ಗ್ರಾಮವಾಗಿದೆ. ‘ಪೊಕ್ಕಲಂ’ ಚಿತ್ರದಲ್ಲಿ ಇವರು ಹಾಡಿದ ಅತ್ಯುತ್ತಮ ಹಾಡಿಗೆ ತಮಿಳುನಾಡು ಸರ್ಕಾರದ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ. ಅಲ್ಲದೆ ಇವರಿಗೆ ತಮಿಳುನಾಡು ಸರ್ಕಾರದ ಪ್ರತಿಷ್ಠಿತ ‘ಕಲೈಮಾಮಣಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2020ರಲ್ಲಿ ಬಂದ ‘ಸೂರರೈ ಪೊಟ್ರು’ ಚಿತ್ರದಲ್ಲಿ ಕೊನೆಯ ಬಾರಿಗೆ ಹಾಡಿದ್ದರು.
Singer Krishnaraj: ಸಂಗೀತ ಲೋಕದಲ್ಲಿ ಕೃಷ್ಣರಾಜ್ ಅವರ ಸ್ಮರಣೀಯ ಸೇವೆ
ಐದು ವರ್ಷಗಳಿಂದ ಸಿನಿಮಾದಿಂದ ದೂರವಿದ್ದ ಕೃಷ್ಣರಾಜ್ ಅನಾರೋಗ್ಯದಿಂದ ಕೊನೆಯೊಸಿರಳೆದಿದ್ದಾರೆ. ತಮಿಳು ಚಿತ್ರರಂಗ ಹಾಗೂ ಸಂಗೀತ ಲೋಕಕ್ಕೆ ಇವರ ಕೊಡುಗೆ ಅಪಾರವಾಗಿದೆ. ದಂತಕಥೆಯಂತಹ ಗಾಯಕನ ಅಗಲಿಕೆಗೆ ಇಡೀ ಸಂಗೀತ ಲೋಕವೇ ಕಂಬನಿ ಮಿಡಿದಿದೆ.




