ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ (Ramayana US Premiere) ಈಗ ಅಮೆರಿಕದಲ್ಲಿ ತನ್ನ ಮೊದಲ ಪ್ರಿಮಿಯರ್ ಪ್ರದರ್ಶನ ಕಂಡಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ದಿಕ್ಸೂಚಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 2 ಗಂಟೆ 45 ನಿಮಿಷಗಳ ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.
ಭಾರತದ ಪೌರಾಣಿಕ ಕಥೆಯನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಅದ್ಭುತವಾಗಿ ತೆರೆಯ ಮೇಲೆ ತರಲಾಗಿದೆ. ಅಮೆರಿಕದಲ್ಲಿ ನಡೆದ ಪ್ರಿಮಿಯರ್ ಶೋ ವೀಕ್ಷಿಸಿದ ವಿದೇಶಿ ಪ್ರೇಕ್ಷಕರು ಹಾಗೂ ವಿಮರ್ಶಕರು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಗ್ಗೆ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವದಾದ್ಯಂತ ಸಿನಿಮಾ ಪ್ರಿಯರ ನಡುವೆ ಈ ಚಿತ್ರ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಇಷ್ಟೊಂದು ಅದ್ದೂರಿಯಾಗಿ ಬಿಂಬಿಸಿರುವುದಕ್ಕೆ ಎಲ್ಲಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಅಮೆರಿಕ ಪ್ರಿಮಿಯರ್ನಲ್ಲಿ ಪ್ರೇಕ್ಷಕರ ರಿಯಾಕ್ಷನ್
ಪ್ರಿಮಿಯರ್ ಶೋ ವೀಕ್ಷಿಸಿದ ‘ರಾಮಾಸ್ ಸ್ಕ್ರೀನ್’ (Rama’s Screen) ಎಕ್ಸ್ ಖಾತೆಯಲ್ಲಿ ಸಿನಿಮಾದ ಗ್ರಾಫಿಕ್ಸ್, ಡ್ಯಾನ್ಸ್, ಸಂಗೀತ ಹಾಗೂ ಸಾಹಸ ದೃಶ್ಯಗಳು ಅತ್ಯದ್ಭುತವಾಗಿ ಮೂಡಿಬಂದಿವೆ ಎಂದು ಹೊಗಳಲಾಗಿದೆ. ಈ ವರ್ಷದ ಅತ್ಯಂತ ರೋಮಾಂಚಕಾರಿ ಸಿನಿಮಾ ಅನುಭವಗಳಲ್ಲಿ ಇದು ಒಂದಾಗಿದೆ ಎಂದು ಬರೆಯಲಾಗಿದೆ.
ಇನ್ನು ನಟ ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರದ ನಟನೆ ಪ್ರೇಕ್ಷಕರನ್ನು ಭಾವಪರವಶಗೊಳಿಸಿದೆ. ‘ತೆರೆಮೇಲೆ ರಣಬೀರ್ ನಟನೆ ನೋಡಿ ಕಣ್ಣೀರು ಬಂತು’ ಎಂದು ಥೆರೆಸಾ ಸಿಮೋನಿ (Theresa Simoni) ಎಂಬ ವಿಮರ್ಶಕಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಅತ್ಯಂತ ಆಕರ್ಷಕವಾಗಿದ್ದು (Magnetic), ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವಂತೆ ಮಾಡಿದೆ ಎಂದು ವಿಮರ್ಶೆಯಲ್ಲಿ ಉಲ್ಲೇಖಿಸಲಾಗಿದೆ.
Ramayana US Premiere: ಜಾಗತಿಕ ಮಟ್ಟದಲ್ಲಿ ಹೈಪ್ ಹೆಚ್ಚಿಸಿದ ‘ರಾಮಾಯಣ’
ನಮಿತ್ ಮಲ್ಹೋತ್ರಾ ಅವರ ಕನಸಿನ ಪ್ರಾಜೆಕ್ಟ್ ಆದ ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಹಾಲೀವುಡ್ನ ಖ್ಯಾತ ತಾಂತ್ರಿಕ ತಂಡಗಳಾದ ‘ದಿ ಒಡಿಸ್ಸಿ’ ಮತ್ತು ‘ಡ್ಯೂನ್’ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರು ಈ ಚಿತ್ರದ ದೃಶ್ಯ ವೈಭವಕ್ಕೆ ಸಾಥ್ ನೀಡಿದ್ದಾರೆ.
ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ ಐಮ್ಯಾಕ್ಸ್ (IMAX) ಹಾಗೂ 3D ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. ಅಮೆರಿಕದಲ್ಲಿ ಸಿಕ್ಕಿರುವ ಈ ಅದ್ಭುತ ರೆಸ್ಪಾನ್ಸ್ನಿಂದಾಗಿ ಭಾರತದಲ್ಲೂ ಸಿನಿಮಾದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ.
ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆಯಲು ‘ರಾಮಾಯಣ’ ಸಿನಿಮಾ ಸಂಪೂರ್ಣವಾಗಿ ಸಜ್ಜಾಗಿದೆ. ವಿಶ್ವ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಹಿರಿಮೆಯನ್ನು ಈ ಸಿನಿಮಾ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.




