ಟಿವಿಯಲ್ಲಿ ಧಾರಾವಾಹಿಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ವೆಬ್ ಸೀರಿಸ್, ಮೈಕ್ರೋ ಡ್ರಾಮಾ ಕ್ರೇಜ್ ಹೆಚ್ಚಾಗುತ್ತಿರುವ ಕಾಲದಲ್ಲೂ ಧಾರಾವಾಹಿಗಳಿಗೆ ಬೇಡಿಕೆ ಅಷ್ಟೇ ಇದೆ. ಹೀಗಾಗಿ ಕನ್ನಡದ ಮನರಂಜನಾ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಘೋಷಣೆ ಮಾಡುತ್ತಲೇ ಇವೆ. ಇದರಲ್ಲಿ ಸ್ಟಾರ್ ಸುವರ್ಣ ವಾಹಿನಿ (Star Suvarna) ಕೂಡ ಹೊರತಾಗಿಲ್ಲ.
ಸ್ಟಾರ್ ಸುವರ್ಣ ವಾಹಿನಿ ಕೂಡ ಇತ್ತೀಚೆಗಷ್ಟೇ ಹೊಸ ಧಾರಾವಾಹಿಯನ್ನು ಶುರು ಮಾಡಿತ್ತು. ಈಗಷ್ಟೇ ಶುರುವಾಗಿರೋ ‘ಓ ಮನಸೇ’ (O Manase) ಹೊಸ ಧಾರಾವಾಹಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶುರುವಾದ ಕೆಲವು ವಾರಗಳಲ್ಲಿಯೇ ಕನ್ನಡಿಗರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಸ್ಟಾರ್ ಸುವರ್ಣ ಖುಷಿಯನ್ನು ವ್ಯಕ್ತಪಡಿಸಿದೆ.

ಇದೇ ಜೋಷ್‌ನಲ್ಲಿ ಸ್ಟಾರ್ ಸುವರ್ಣ ವಾಹಿನಿ ‘ಓ ಮನಸೇ’ ಧಾರಾವಾಹಿಯ ಒಂದು ವಾರದ ಸಂಚಿಕೆಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, 1 ಗಂಟೆಯ ವಿಶೇಷ ಸಂಚಿಕೆಯನ್ನಾಗಿ ನಿರ್ಮಾಣ ಮಾಡಿದೆ. ಈ ವಿಶೇಷ ಸಂಚಿಕೆಯನ್ನು ಸ್ಟಾರ್ ಸುವರ್ಣ ವಾಹಿನಿ ತನ್ನ ‘ಯುಟ್ಯೂಬ್ ಚಾನಲ್’ನಲ್ಲಿ ಅಪ್‌ಲೋಡ್ ಮಾಡಿದೆ.
ಇದನ್ನೂ ಓದಿ: Interview: ‘ಓ ಮನಸೇ’ ಮೂಲಕ ಮಧುಮಿತಾ ಭರ್ಜರಿ ಕಮ್ಬ್ಯಾಕ್
ಇನ್ನು ‘ಓ ಮನಸೇ’ ಧಾರಾವಾಹಿ ಕಥೆ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ. ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿದ್ದಾಳೆ. ರಾಗಾಳ ಬದುಕಿನ ಅತೀ ದೊಡ್ಡ ಸ್ಫೂರ್ತಿ ಅಂದ್ರೆ ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟಬೇಕೆಂಬ ಕನಸನ್ನು ಕಾಣ್ತಿರೋ ರಾಗಾಳಿಗೆ ಸ್ವಂತ ಅಪ್ಪನೇ ಅಡ್ಡ ಬರುತ್ತಿದ್ದಾನೆ.
ಇತ್ತ ಶ್ರೀಮಂತ ಮನೆತನದಲ್ಲಿ ಬೆಳೆದಿರೋ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ ಹುಟ್ಟಿದೆ.
ಹೀಗಿರುವಾಗ ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾಳಾ ರಾಗಾ? ವೈರುಧ್ಯ ವ್ಯಕ್ತಿತ್ವದ ರಾಗಾ-ರಿಷಿ ಒಂದಾಗ್ತಾರಾ? ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನ:ಸ್ತಾಪ ದೂರವಾಗುತ್ತಾ? ಎಂಬುದೇ ‘ಓ ಮನಸೇ’ ಕಥೆ.
ಇನ್ನೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ‘ಓ ಮನಸೇ’ ಧಾರಾವಾಹಿಯನ್ನು ಅಪ್‌ಲೋಡ್ ಮಾಡಲಾಗಿದೆ. ಈ ಒಂದು ಗಂಟೆಯ ‘ಓ ಮನಸೇ’ ಹೈಲೈಟ್ ಅನ್ನು ವೀಕ್ಷಿಸಿ ನೀವು ಎಂಜಾಯ್ ಮಾಡಬಹುದು.
YouTube Link: ನೋಡಿ ‘ಓ ಮನಸೇ’ ಸೀರಿಯಲ್; 1 ಗಂಟೆಯ ವಿಶೇಷ ಸಂಚಿಕೆ




