Photo Credits: @anchor_vish (Instagram)
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪ್ರತಿದಿನ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಕೋರ್ಟ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಕೋರ್ಟ್ ಇಂದಿನ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರ ಮನವಿಗೆ ಸಮ್ಮತಿಸಿದೆ.
ಒಂದು ವಾರದ ಕಾಲಾವಕಾಶದ ಹಿಂದಿನ ಕಾನೂನು ಕಸರತ್ತು…
ಪ್ರದೋಷ್ ಪರ ವಕೀಲರು ಪ್ರದೋಷ್ ಹೇಳಿಕೆಯನ್ನು ತಕ್ಷಣವೇ ದಾಖಲಿಸಬೇಕೆಂದು ಮನವಿ ಮಾಡಿದರು. ಪ್ರಕರಣದಲ್ಲಿ ಸಾಕ್ಷ್ಯ ನಾಶದಂತಹ ಗಂಭೀರ ಹಂತಗಳಿರುವುದರಿಂದ ವಿಳಂಬ ಬೇಡ ಎಂದು ವಾದಿಸಿದರು. ಆದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಅನಿರೀಕ್ಷಿತ ತಿರುವು ನೀಡಿದರು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ‘ಬ್ರೀಥಿಂಗ್ ಟೈಮ್’ ಅಥವಾ ಸಮಯಾವಕಾಶ ಬೇಕೆಂದು ಕೋರಿದರು. ಎರಡೂ ಕಡೆಯ ವಾದಗಳನ್ನು ಪರಿಗಣಿಸಿದ ಕೋರ್ಟ್, ಆಗಸ್ಟ್ 18ರವರೆಗೆ ಪ್ರದೋಷ್ ಹೇಳಿಕೆ ದಾಖಲಿಸುವುದನ್ನು ತಡೆಹಿಡಿದಿದೆ. ಈ ಮೂಲಕ ದರ್ಶನ್ಗೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ವಾರದ ಸಮಯ ಸಿಕ್ಕಂತಾಗಿದೆ.
ವಕೀಲರ ನಡುವೆ ನಡೆದ ಬಿಸಿಬಿಸಿ ವಾಗ್ವಾದ…
ನ್ಯಾಯಾಲಯದಲ್ಲಿ ವಕೀಲರ ನಡುವೆ ತೀವ್ರ ವಾದವೇ ನಡೆಯಿತು. ದರ್ಶನ್ ಲಾಯರ್ ಹಷ್ಮತ್ ಪಾಷಾ, “ಪ್ರದೋಷ್ ಇನ್ನೂ ಸಂಪೂರ್ಣ ಸಾಕ್ಷಿಯಾಗಿಲ್ಲ, ಆತ ಇನ್ನೂ ಆರೋಪಿಯೇ” ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ, “ಪ್ರಾಸಿಕ್ಯೂಷನ್ ಸಹಮತ ಸೂಚಿಸಿದೆ, ಅರ್ಜಿಯನ್ನು ಕಾನೂನಾತ್ಮಕವಾಗಿ ಪರಿಗಣಿಸಿ” ಎಂದು ಪ್ರದೋಷ್ ವಕೀಲರು ಒತ್ತಾಯಿಸಿದರು. ಸರ್ಕಾರದ ಪರ ಎಎಸ್ಪಿಪಿ ಸಚಿನ್ ವಾದಿಸಿ, ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿದರೂ ಪ್ರಕ್ರಿಯೆಗಳಿಗೆ ತಡೆ ನೀಡುವಂತಿಲ್ಲ ಎಂದರು. ಆದರೂ, ಆದೇಶದ ಪ್ರತಿ ಸಿಗುವವರೆಗೆ ತಕ್ಷಣಕ್ಕೆ ಹೇಳಿಕೆ ದಾಖಲಿಸಬಾರದು ಎಂಬ ದರ್ಶನ್ ವಕೀಲರ ವಾದಕ್ಕೆ ಕೊನೆಗೂ ಕೋರ್ಟ್ ಮಾನ್ಯತೆ ನೀಡಿತು.
ಮುಂದಿನ ವಿಚಾರಣೆ ಏನು ತಿರುವು ಪಡೆಯಬಹುದು?
ಆಗಸ್ಟ್ 18ರ ನಂತರದ ಬೆಳವಣಿಗೆ ಇಡೀ ಪ್ರಕರಣದ ಗತಿಯನ್ನೇ ಬದಲಿಸಬಹುದು. ಒಂದು ವೇಳೆ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದರೆ, ದರ್ಶನ್ಗೆ ಅದು ಕಾನೂನು ತೊಡಕಾಗಬಹುದು. ಆದರೆ, ಅದಕ್ಕೂ ಮುನ್ನ ದರ್ಶನ್ ವಕೀಲರು ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲಿ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆ ಸಿಗುತ್ತದೋ ಅಥವಾ ಇಲ್ಲವೋ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಪ್ರಸ್ತುತ ಪ್ರದೋಷ್ಗೆ ಜೈಲಿನಲ್ಲಿ ಪ್ರತ್ಯೇಕ ಸೆಲ್ ಒದಗಿಸಲಾಗಿದ್ದು, ಮುಂದಿನ ವಿಚಾರಣೆ ದಿನಾಂಕ ಇಡೀ ಪ್ರಕರಣದ ಹಣೆಬರಹವನ್ನೇ ತೀರ್ಮಾನಿಸಲಿದೆ. ಈ ವಿಚಾರಣೆಯ ಮೇಲೆ ಡಿ-ಗ್ಯಾಂಗ್ನ ಎಲ್ಲರ ಗಮನ ನೆಟ್ಟಿದೆ.




