RENUKASWAMY CASE: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಆ.24ಕ್ಕೆ ಮುಂದೂಡಿಕೆ

ರೇಣುಕಾಸ್ವಾಮಿ ಕೇಸ್

Photo Credits: @guaranteenewskannada (Instagram)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇಂದು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪ್ರದೂಷ್ ಹಾಗೂ ವಿನಯ್ ಮಾಫಿ ಸಾಕ್ಷಿ ಅರ್ಜಿಗಳ ಕುರಿತು ಮಹತ್ವದ ವಿಚಾರಣೆ ನಿರೀಕ್ಷಿಸಲಾಗಿತ್ತು. ಆದರೆ ನ್ಯಾಯಾಲಯವು ಈ ಪ್ರಮುಖ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿ ಹೊಸ ಮುಹೂರ್ತ ನಿಗದಿಪಡಿಸಿದೆ.

ಆಗಸ್ಟ್ 24ಕ್ಕೆ ವಿಚಾರಣೆ ಮುಂದೂಡಿಕೆ: ಕೋರ್ಟ್ ನಿರ್ಧಾರದತ್ತ ನೆಟ್ಟ ಎಲ್ಲರ ಗಮನ…

ಪ್ರಕರಣದ ಎ-14 ಆರೋಪಿ ಪ್ರದೂಷ್ ಮತ್ತು ಮತ್ತೊಬ್ಬ ಆರೋಪಿ ವಿನಯ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಮಾಫಿ ಸಾಕ್ಷಿ ಹೇಳಿಕೆ ಮತ್ತು ಆದೇಶ ಪ್ರಕ್ರಿಯೆಯನ್ನು ನ್ಯಾಯಾಲಯ ಆಗಸ್ಟ್ 24ಕ್ಕೆ ಮುಂದೂಡಿದೆ. ಒಂದೇ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಸರ್ಕಾರಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಆಗಸ್ಟ್ 24ರಂದು ಕೋರ್ಟ್ ನೀಡುವ ತೀರ್ಪು ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು: ಜೈಲಿನಿಂದಲೇ ಕೋರ್ಟ್ ಕಲಾಪದಲ್ಲಿ ಭಾಗಿಯಾದ ದರ್ಶನ್…

ಇಂದಿನ ನ್ಯಾಯಾಲಯದ ವಿಚಾರಣೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಪರಿಶೀಲಿಸಿ ಆಡಿಯೋ ಮತ್ತು ವಿಡಿಯೋ ಸ್ಪಷ್ಟವಾಗಿದೆಯೇ ಎಂದು ಪ್ರತ್ಯೇಕವಾಗಿ ವಿಚಾರಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಲ್ಪಿಸಲು ಸಿಬ್ಬಂದಿಗೆ ಕೋರ್ಟ್ ಸೂಚನೆ ನೀಡಿದೆ. ಜೈಲಿನಿಂದಲೇ ದರ್ಶನ್ ಪಡೆ ಕೋರ್ಟ್ ಕಲಾಪಗಳನ್ನು ನೇರವಾಗಿ ವೀಕ್ಷಿಸಿದೆ.

ಕಾಯ್ದಿರಿಸಿದ ನಿರ್ಧಾರ: ಮಾಫಿ ಸಾಕ್ಷಿ ಹೇಳಿಕೆ ಮೇಲೆ ನಿರ್ಧಾರವಾಗಲಿದೆ ದರ್ಶನ್ ಗ್ಯಾಂಗ್ ಭವಿಷ್ಯ…

ಪ್ರದೂಷ್ ಮತ್ತು ವಿನಯ್ ಮಾಫಿ ಸಾಕ್ಷಿ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ರಕ್ಷಣಾ ವಕೀಲರ ವಾದ-ಪ್ರತಿವಾದ ಮುಕ್ತಾಯಗೊಂಡಿದೆ. ನ್ಯಾಯಾಲಯ ಈ ಇಬ್ಬರೂ ಆರೋಪಿಗಳ ಅರ್ಜಿಯನ್ನು ಪುರಸ್ಕರಿಸಿದರೆ ಅವರು ಪ್ರಾಸಿಕ್ಯೂಷನ್ ಪರ ಸಾಕ್ಷಿಗಳಾಗಿ ಬದಲಾಗಲಿದ್ದಾರೆ. ಇದು ದರ್ಶನ್ ಪರ ವಕೀಲರಿಗೆ ದೊಡ್ಡ ಹಿನ್ನಡೆಯಾಗಲಿದ್ದು, ಕೇಸ್‌ಗೆ ಭಾರಿ ಕಾನೂನಾತ್ಮಕ ಟ್ವಿಸ್ಟ್ ಸಿಗುವುದು ಖಚಿತವಾಗಿದೆ. ಹೀಗಾಗಿ ಆಗಸ್ಟ್ 24ರಂದು 59ನೇ ಸಿಸಿಹೆಚ್ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.