PRAMOD SHETTY: ಕ್ಯಾಬ್ ಡ್ರೈವರ್ ಗೆಟಪ್‌ನಲ್ಲಿ ಪ್ರಮೋದ್ ಶೆಟ್ಟಿ ಕಮಾಲ್, ಸಿನಿಮಾ ಕಥೆಗೆ ಬಿಗ್ ಟ್ವಿಸ್ಟ್…

'NH 66' ಚಿತ್ರದ ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್...

Photo Credits: @rayafilms6 (Instagram)

ರಾಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಟಿ.ಆರ್ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.   ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಮತ್ತು ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್ ಆಗಿದೆ. 

ಚಿತ್ರತಂಡ ಇತ್ತೀಚೆಗೆ ನಟ ಪ್ರಮೋದ್ ಶೆಟ್ಟಿ ಅವರ ವಿಶೇಷ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ಪ್ರಮೋದ್ ಶೆಟ್ಟಿ ಅವರ ಗೆಟಪ್ ವಿಭಿನ್ನವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾದಲ್ಲಿ ಅವರು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಅವರ ಈ ಪಾತ್ರವು ಇಡೀ ಸಿನಿಮಾದ ಕಥೆಗೆ ದೊಡ್ಡ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ. ಫಸ್ಟ್ ಲುಕ್ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೈರಲ್ ಆಗುತ್ತಿದೆ. 

‘NH 66’ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಅದ್ಭುತವಾದ ಪ್ರಯಾಣದ ಕಥೆಯಾಗಿದೆ. ಮಂಗಳೂರಿನಿಂದ ಮುಂಬೈಗೆ ಸಾಗುವ ಹಾದಿಯಲ್ಲಿ ನಡೆಯುವ ಎರಡು ದಿನಗಳ ಘಟನೆಗಳೇ ಚಿತ್ರದ ಮುಖ್ಯ ವಸ್ತು. ರೋಮಾಂಚನಕಾರಿ ರೋಡ್ ಜರ್ನಿ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ರೋಡ್ ಥ್ರಿಲ್ಲರ್ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆಯಿದೆ.

ನಿರ್ಮಾಪಕ ಮತ್ತು ನಿರ್ದೇಶಕರಾದ ಟಿ.ಆರ್. ಮಂಜುನಾಥ್ ಅವರು ಗುರುರಾಯರ ಪರಮ ಭಕ್ತರಾಗಿದ್ದಾರೆ. ಅವರು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ ಈ ‘NH 66’ ಚಿತ್ರದ ಮುಹೂರ್ತ ನೆರವೇರಿಸಿದ್ದರು. ರಾಯರ ಕೃಪೆಯಿಂದಲೇ ಸಿನಿಮಾ ಅಂದುಕೊಂಡಂತೆ ಯಾವುದೇ ವಿಘ್ನವಿಲ್ಲದೆ ಪೂರ್ಣಗೊಂಡಿದೆ ಎಂದಿದ್ದಾರೆ. ಮಂಜುನಾಥ್ ಅವರೇ ಸ್ವತಃ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಸಂಗೀತ ನಿರ್ದೇಶನ ನೀಡಿದ್ದಾರೆ.