Photo Credits: @mownesh_official (Instagram)
ಸಾಲು ಸಾಲು ಆಕ್ಷನ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಇದೀಗ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ‘ಫೀನಿಕ್ಸ್’ ಎಂಬ ಹೊಸ ಸಿನಿಮಾದ ನಿರ್ಮಾಣಕ್ಕಾಗಿ ಹೂಡಿಕೆದಾರರಿಂದ ಕೋಟ್ಯಂತರ ರೂ ಪಾಯಿ ಪಡೆದು ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಬಂದಿದೆ.
ತಮ್ಮ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದಂತೆಯೇ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹೂಡಿಕೆದಾರರು ಮಾಡುತ್ತಿರುವ ಪ್ರತಿಯೊಂದು ಆಪಾದನೆಗೂ ಅವರು ನೇರವಾಗಿಯೇ ಉತ್ತರಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಎಂಬುವವರು 3.85 ಕೋಟಿ ರೂಪಾಯಿ ಹಣ ವಂಚನೆಯಾಗಿದೆ ಎಂದು ಫಿಲ್ಮ್ ಚೇಂಬರ್ ಹಾಗೂ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದರು. ಈ ದೂರಿನಲ್ಲಿದ್ದ ಮುಖ್ಯ ಆರೋಪಗಳಿಗೆ ನಿರ್ದೇಶಕರು ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ.
ಮಗಳನ್ನು ಜರ್ಮನಿಗೆ ಕಳುಹಿಸಿದ ಆರೋಪಕ್ಕೆ ಓಂ ಪ್ರಕಾಶ್ ರಿಪ್ಲೈ…
ಹೂಡಿಕೆದಾರರ ಹಣದಿಂದ ತಮ್ಮ ಮಗಳನ್ನು ಜರ್ಮನಿಗೆ ಕಳುಹಿಸಲಾಗಿದೆ ಎಂಬ ಆರೋಪಕ್ಕೆ ಓಂ ಪ್ರಕಾಶ್ ರಾವ್ ತೀವ್ರವಾಗಿ ಕಿಡಿಕಾರಿದ್ದಾರೆ. “ನನ್ನ ಮಗಳನ್ನು ಜರ್ಮನಿಗೆ ಕಳುಹಿಸಲು ಇತರರ ಹಣದ ಅಗತ್ಯವಿಲ್ಲ. ಆ ಖರ್ಚನ್ನು ಭರಿಸುವ ಸಾಮರ್ಥ್ಯ ಹಾಗೂ ಯೋಗ್ಯತೆ ನನಗಿದೆ” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಸಿನಿಮಾಗಾಗಿ ಹಣ ಪಡೆದಿರುವುದನ್ನು ಒಪ್ಪಿಕೊಂಡ ಅವರು, ಶೂಟಿಂಗ್ ತಡವಾಗಿರುವುದರಿಂದ ಈ ಎಲ್ಲಾ ಗೊಂದಲಗಳು ಸೃಷ್ಟಿಯಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಯಾರ ಫೋನ್ ಕೂಡ ಮಿಸ್ ಮಾಡಿಲ್ಲ”…
ಸಿನಿಮಾ ವಿಳಂಬವಾಗಿರುವುದಕ್ಕೆ ತಾವೇ ಹೊಣೆ ಎಂದ ನಿರ್ದೇಶಕರು, “ನಾನು ಖಂಡಿತ ಶೇ. 100ರಷ್ಟು ಶೂಟಿಂಗ್ ಮುಗಿಸಿಕೊಡುತ್ತೇನೆ. ನಾನು ಯಾರ ಫೋನ್ ಕರೆಗಳನ್ನೂ ಮಿಸ್ ಮಾಡಿಲ್ಲ. ದಿನವೂ ಎಲ್ಲರಿಗೂ ಸಿಗುತ್ತಲೇ ಇದ್ದೇನೆ. ಹೀಗಿರುವಾಗ ಅವರು ನನ್ನನ್ನು ನೇರವಾಗಿ ಸಂಪರ್ಕಿಸದೆ ಆರೋಪ ಮಾಡುತ್ತಿದ್ದಾರೆ” ಎಂದಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಸಿನಿಮಾವನ್ನು ಪೂರ್ಣಗೊಳಿಸಿ ಕೊಟ್ಟ ಹಣವನ್ನು ಹಿಂತಿರುಗಿಸುವ ಬದ್ಧತೆ ತಮಗಿದೆ ಎಂದು ಹೇಳಿದ್ದಾರೆ.
ಸಿನಿಮಾ ರಂಗದ ಪವಿತ್ರತೆ ಬಗ್ಗೆ ನಿರ್ದೇಶಕರ ಮಾತು…
“ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಬಂದು ಮಾತನಾಡಿದರೆ ಬಗೆಹರಿಯುತ್ತದೆ. ಅದನ್ನು ಬಿಟ್ಟು ಬೇರೆಯವರ ಬಳಿ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ನನ್ನ ಮೇಲೆ ಆರೋಪ ಮಾಡುವುದಕ್ಕಿಂತ ಸಿನಿಮಾ ರಂಗದ ಗೌರವಕ್ಕೆ ಧಕ್ಕೆ ತರುತ್ತಿರುವುದು ನನಗೆ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಸಿನಿಮಾ ಕ್ಷೇತ್ರ ಎನ್ನುವುದು ಅತ್ಯಂತ ಪವಿತ್ರವಾದ ಜಾಗ. ನೀವೆಲ್ಲರೂ ಇಲ್ಲಿಂದಲೇ ಊಟ ಕಂಡುಕೊಳ್ಳಲು ಬಂದಿದ್ದೀರಿ. ಹೀಗಿರುವಾಗ ಸತ್ಯ ತಿಳಿಯದೆ ಆರೋಪ ಮಾಡಿ ಏನು ಸಾಧಿಸಿದಿರಿ?” ಎಂದು ಹೂಡಿಕೆದಾರರನ್ನು ಪ್ರಶ್ನಿಸಿದ್ದಾರೆ.




