Photo Credits: @plumeriamoviess (Instagram)
ದಕ್ಷಿಣ ಭಾರತದ ‘ಲೇಡಿ ಸೂಪರ್ಸ್ಟಾರ್’ ನಯನತಾರಾ ನಟ ಯಶ್ ಬಗ್ಗೆ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಹೊಸ ಸಿನಿಮಾದ ಪ್ರಮೋಷನ್ ವೇಳೆ ನೀಡಿದ ಸಂದರ್ಶನದಲ್ಲಿ ಅವರು ಯಶ್ ಅವರ ಶ್ರಮವನ್ನು ಕೊಂಡಾಡಿದ್ದಾರೆ.
ಯಶ್ ಅವರ ಕೆಲಸದ ಶೈಲಿ ಹಾಗೂ ವ್ಯಕ್ತಿತ್ವದ ಬಗ್ಗೆ ನಯನತಾರಾ ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಬದ್ಧತೆ ನೋಡಿ ತಮಗೆ ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಶ್ರಮದ ಬಗ್ಗೆ ನಟಿ ಆಡಿರುವ ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಸಿನಿಮಾದಲ್ಲೂ ಮಾಸ್… ರಿಯಲ್ ಲೈಫ್‌ನಲ್ಲೂ ಅದೇ ಹವಾ…
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ನಟಿಸಿರುವ ನಯನತಾರಾ, ಅವರ ಕೆಲಸದ ಮೇಲಿನ ಶ್ರದ್ಧೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಯಶ್ ಸಿನಿಮಾಗಳಲ್ಲಿ ಹೇಗೆ ‘ರಾಕಿ ಭಾಯ್’ ಆಗಿ ಕಾಣಿಸಿಕೊಳ್ಳುತ್ತಾರೋ, ನಿಜ ಜೀವನದಲ್ಲೂ ತಮ್ಮ ಕೆಲಸದ ವಿಚಾರದಲ್ಲಿ ಅದೇ ರೀತಿಯ ಬದ್ಧತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
‘ಅವರಂತೆ ಕೆಲಸ ಮಾಡಲು ಮತ್ತೊಬ್ಬರು ಹುಟ್ಟಬೇಕು’…
ಯಶ್ ಅವರ ಕೆಲಸ ಮಾಡುವ ರೀತಿಯನ್ನು ನೋಡಿದರೆ ನಮಗೇ ಬೆಚ್ಚಿಬೀಳುವಂತಾಗುತ್ತದೆ ಎಂದು ನಯನತಾರಾ ಹೇಳಿದ್ದಾರೆ. ಅವರಷ್ಟು ಸಮರ್ಪಣೆಯಿಂದ ಕೆಲಸ ಮಾಡುವ ಮತ್ತೊಬ್ಬ ನಟನನ್ನು ನೋಡುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಅವರು ಅಷ್ಟು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರಂತೆ ಕೆಲಸ ಮಾಡಲು ಇನ್ನು ಮುಂದೆ ಮತ್ತೊಬ್ಬರು ಹುಟ್ಟಿಬರಬೇಕು ಅನಿಸುತ್ತದೆ” ಎಂದು ನಟಿ ಯಶ್ ಅವರನ್ನು ಕೊಂಡಾಡಿದ್ದಾರೆ. ಯಶ್ ಬಗ್ಗೆ ಮಾತನಾಡಲು ಕುಳಿತರೆ ಎರಡು ಗಂಟೆಯಾದರೂ ಸಾಕಾಗುವುದಿಲ್ಲ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ – ನಯನತಾರಾ ಕಾಂಬಿನೇಷನ್…
ನಯನತಾರಾ ಹಾಗೂ ಯಶ್ ಮೊದಲ ಬಾರಿಗೆ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪೀರಿಯಡ್ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಯಶ್ ಜೊತೆಗೆ ನಯನತಾರಾ ಕೂಡ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ನಯನತಾರಾ ಪ್ರಸ್ತುತ ತಮ್ಮ ‘ಹಾಯ್’ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಅವರು ನಿರ್ಮಾಪಕಿಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.
ಒಟ್ಟಿನಲ್ಲಿ, ‘ಟಾಕ್ಸಿಕ್’ ಸೆಟ್‌ನಲ್ಲಿ ಯಶ್ ಅವರ ವೃತ್ತಿಪರ ಬದ್ಧತೆ ನಯನತಾರಾ ಅವರಿಗೆ ತೀವ್ರವಾಗಿ ಇಷ್ಟವಾಗಿದೆ. “ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಯಶ್ ಅಷ್ಟೇ ಶ್ರಮಜೀವಿ” ಎಂಬ ನಯನತಾರಾ ಅವರ ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.




