Photo Credits: @sandalwood.samachara (Instagram)
ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ನಟ ಭಾಸ್ಕರ್ ಶೆಟ್ಟಿ ಎಂಬುವವರು ಈ ಗಂಭೀರ ಆರೋಪ ಮಾಡಿದ್ದಾರೆ. ಓಂ ಪ್ರಕಾಶ್ ರಾವ್ ಅವರು ತಮ್ಮಿಂದ ಭಾರಿ ಪ್ರಮಾಣದ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ದೂರುದಾರ ಭಾಸ್ಕರ್ ಶೆಟ್ಟಿ ಅವರು ಬರೋಬ್ಬರಿ 3.85 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅವರು ನಗರ ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಓಂ ಪ್ರಕಾಶ್ ರಾವ್ ವಿರುದ್ಧ ಇಂತಹ ದೂರು ಬಂದಿರುವುದು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಕರಣದ ಸಂಪೂರ್ಣ ವಿವರ ಹಾಗೂ ಈ ಆರೋಪದ ಹಿಂದಿನ ನಿಜವಾದ ಕಾರಣಗಳು ಇಲ್ಲಂತಿವೆ.
ಏನಿದು 3.85 ಕೋಟಿ ರೂಪಾಯಿ ವಂಚನೆ ಕೇಸ್?
ನಟ ದರ್ಶನ್ ಅಭಿನಯದ ‘ಯೋಧ’ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ ಅವರು ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. ಅದೇ ಆತ್ಮೀಯತೆಯಿಂದ ‘ಫೀನಿಕ್ಸ್’ ಎಂಬ ಹೊಸ ಸಿನಿಮಾ ನಿರ್ಮಾಣಕ್ಕಾಗಿ ಓಂ ಪ್ರಕಾಶ್ ರಾವ್‌ಗೆ ಹಣ ನೀಡಿದ್ದರು. ಭಾಸ್ಕರ್ ಶೆಟ್ಟಿ ಅವರಿಂದ 40 ಲಕ್ಷ ರೂಪಾಯಿ ಹಾಗೂ ನಿರ್ಮಾಪಕ ವಾಸುದೇವ್ ರೆಡ್ಡಿ ಅವರಿಂದ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಓಂ ಪ್ರಕಾಶ್ ರಾವ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಫಿಲ್ಮ್ ಚೇಂಬರ್ ಹಾಗೂ ಪೊಲೀಸ್ ಆಯುಕ್ತರಿಗೆ ದೂರು…
ಹಣ ವಾಪಸ್ ಕೇಳಿದಾಗ ನಿರ್ದೇಶಕರು ನಿರ್ಲಕ್ಷ್ಯ ವಹಿಸಿದ್ದರಿಂದ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್ ಚೇಂಬರ್) ದೂರು ನೀಡಲು ಹೋಗಿದ್ದರು. ಅಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದಾಗ, ಕಾನೂನು ಹೋರಾಟ ನಡೆಸುವಂತೆ ಹಿರಿಯ ನಟಿ ಜಯಮಾಲಾ ಸಲಹೆ ನೀಡಿದ್ದರು. ನಂತರ ಓಂ ಪ್ರಕಾಶ್ ರಾವ್ ಅವರ ಬಳಿ ಮಾತನಾಡಿದಾಗ ಅವರು ತುಚ್ಛವಾಗಿ ಉತ್ತರಿಸಿದ್ದರಿಂದ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಶೇಕಡಾ 60-70ರಷ್ಟು ಹಣ ಆನ್‌ಲೈನ್ ಮೂಲಕವೇ ವರ್ಗಾವಣೆ…
ತಾವು ನೀಡಿದ ಹಣದಲ್ಲಿ ಶೇಕಡಾ 60 ರಿಂದ 70 ರಷ್ಟು ಹಣವನ್ನು ಆನ್‌ಲೈನ್ ಬ್ಯಾಂಕಿಂಗ್ ಮೂಲಕವೇ ವರ್ಗಾಯಿಸಲಾಗಿದೆ ಎಂದು ಭಾಸ್ಕರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ ಖಾತೆಯ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಪೊಲೀಸರಿಗೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಈ ಗಂಭೀರ ವಂಚನೆ ಆರೋಪದ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.




