DGP ALOK KUMAR: ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಹೈಡ್ರಾಮಾ; ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಜಡ್ಜ್ ಕ್ಲಾಸ್ ತಗೆದುಕೊಂಡ ಡಿಜಿಪಿ…

ಪರಪ್ಪನ ಅಗ್ರಹಾರಕ್ಕೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ...

Photo Credits: @kannadamediumnews (Instagram)

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಕೈದಿಗಳ ಪಾಲಿಗೆ ಸೆರೆಮನೆಯಾಗದೆ ಅರಮನೆಯಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆಯೇ ಮಾಜಿ ಸಂಸದ ಹಾಗೂ ಕೈದಿ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಬಳಸಿರುವುದು ಪತ್ತೆಯಾಗಿ ಭಾರಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ (ಆಗಸ್ಟ್ 14) ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ದಿಢೀರ್ ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿದ್ದಾರೆ.

5 ತಾಸು ಭದ್ರತಾ ತಪಾಸಣೆ ಹಾಗೂ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಎಚ್ಚರಿಕೆ…

ಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಸುಮಾರು ಐದು ಗಂಟೆಗಳ ಕಾಲ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಇಷ್ಟೆಲ್ಲ ಜಾಗ್ರತೆ ವಹಿಸಿದರೂ ಪ್ರಜ್ವಲ್ ಅವರ ಸೆಲ್‌ಗೆ ಮೊಬೈಲ್ ಹೇಗೆ ಬಂತು ಎಂದು ಜೈಲು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇಲಾಖೆಯ ಗೌರವ ಹೆಚ್ಚಿಸಲು ಕೆಲವರು ಶ್ರಮಿಸುತ್ತಿದ್ದರೆ, ಇನ್ನು ಕೆಲವರು ಮರ್ಯಾದೆ ಕಳೆಯುವ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು. ಇನ್ಮುಂದೆ ಇಂತಹ ಕರ್ತವ್ಯಲೋಪ ಕಂಡುಬಂದರೆ ಅಧಿಕಾರಿಗಳಿಗೆ ಅಮಾನತಿಗಿಂತಲೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದರ್ಶನ್ ಬ್ಯಾರಕ್ ತಪಾಸಣೆ ಹಾಗೂ ಪ್ರಜ್ವಲ್ ರೇವಣ್ಣಗೆ ಲಾಸ್ಟ್ ವಾರ್ನಿಂಗ್…

ಡಿಜಿಪಿ ಅಲೋಕ್ ಕುಮಾರ್ ಅವರು ಪ್ರಜ್ವಲ್ ಬ್ಯಾರಕ್ ಜೊತೆಗೆ ನಟ ದರ್ಶನ್ ಅವರ ಬ್ಯಾರಕ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಾಸಣೆ ವೇಳೆ ನಟ ದರ್ಶನ್ ಅವರ ಬ್ಯಾರಕ್‌ನಲ್ಲಿ ಯಾವುದೇ ರೀತಿಯ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಜೈಲಿನಲ್ಲಿ ಮೊಬೈಲ್ ಬಳಸಿ ಸಿಕ್ಕಿಬಿದ್ದಿರುವ ಪ್ರಜ್ವಲ್ ರೇವಣ್ಣ ಅವರನ್ನು ಡಿಜಿಪಿ ನೇರವಾಗಿ ತರಾಟೆಗೆ ತೆಗೆದುಕೊಂಡರು. “ನೀವು ಮಾಡುವ ತಪ್ಪಿನಿಂದ ನಮಗಿಂತ ನಿಮಗೇ ಹೆಚ್ಚಿನ ಕಾನೂನು ತೊಡಕು ಉಂಟಾಗುತ್ತದೆ, ನಿಯಮ ಮೀರುವ ಸಾಹಸ ಮಾಡಬೇಡಿ” ಎಂದು ವಾರ್ನಿಂಗ್ ಕೊಟ್ಟರು. ಡಿಜಿಪಿ ಅಲೋಕ್ ಕುಮಾರ್ ಅವರ ಪ್ರಶ್ನೆಗಳ ಎದುರು ಪ್ರಜ್ವಲ್ ರೇವಣ್ಣ ಕೈಕಟ್ಟಿಕೊಂಡು ಸುಮ್ಮನೆ ನಿಂತಿದ್ದರು.

ರೌಡಿ ಬಳಿ ಮೊಬೈಲ್ ಪಡೆದಿದ್ದ ಪ್ರಜ್ವಲ್: ತನಿಖೆಯಲ್ಲಿ ಸತ್ಯ ಬಯಲು…

ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವೀಡಿಯೋ ಪರಿಶೀಲನೆ ನಡೆಸಿದಾಗ ಇದು ಒಂದು ವರ್ಷದ ಹಿಂದೆ ಅಂದರೆ 2025ರ ಸೆಪ್ಟೆಂಬರ್ 24ರಂದು ನಡೆದ ಘಟನೆ ಎಂಬುದು ತಿಳಿದುಬಂದಿದೆ. ವಿಚಾರಣಾಧೀನ ಕೈದಿಯಾಗಿದ್ದ ರೌಡಿಶೀಟರ್ ಸತೀಶ್ ಎಂಬುವವನ ಬಳಿಯಿಂದ ಪ್ರಜ್ವಲ್ ಮೊಬೈಲ್ ಪಡೆದು ಮಾತನಾಡಿದ್ದರು. ತಾನು ಸತೀಶ್‌ನಿಂದ ಮೊಬೈಲ್ ಪಡೆದು ಮಾತನಾಡಿದ್ದಾಗಿ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಪರಪ್ಪನ ಅಗ್ರಹಾರದಲ್ಲಿ ನಡೆದ ಈ ಹೈಡ್ರಾಮಾ ಈಗ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.