ಗಂಗಾವತಿ: ಒಂದು ಸಿನಿಮಾ ನಿರ್ಮಾಣವಾಗುವುದು ಎಂದರೆ ಕೇವಲ ಕ್ಯಾಮೆರಾ ಮುಂದೆ ನಡೆಯುವ ಚಿತ್ರೀಕರಣವಲ್ಲ. ಅದರ ಹಿಂದೆ ಒಬ್ಬ ನಿರ್ಮಾಪಕನ ತಿಂಗಳುಗಳ ಪರಿಶ್ರಮ, ಕೋಟ್ಯಂತರ ರೂಪಾಯಿಗಳ ಹೂಡಿಕೆ, ನೂರಾರು ಕಲಾವಿದರು ಮತ್ತು ತಂತ್ರಜ್ಞರ ಶ್ರಮ, ಪ್ರಚಾರದ ವೆಚ್ಚ, ವಿತರಣೆ ವ್ಯವಸ್ಥೆ ಹಾಗೂ ಅನೇಕ ಸವಾಲುಗಳು ಇರುತ್ತವೆ.
ಸಿನಿಮಾ ಚಿತ್ರಮಂದಿರಕ್ಕೆ ಬರುವವರೆಗೂ ನಿರ್ಮಾಪಕನಿಗೆ ಒಂದು ರೀತಿಯ ಹೋರಾಟ. ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮತ್ತೊಂದು ದೊಡ್ಡ ಆತಂಕ. ಅದರಲ್ಲೂ ಕನ್ನಡ ಚಿತ್ರರಂಗ ಹಲವು ಸವಾಲುಗಳನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಒಂದು ಕನ್ನಡ ಸಿನಿಮಾ ಪ್ರೇಕ್ಷಕರ ಕುಟುಂಬ ಸಮೇತ ಬೆಂಬಲ ಪಡೆದು ಯಶಸ್ಸಿನತ್ತ ಸಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.
‘ಪ್ರೇಮದ ಊರಲಿ’ ಸಿನಿಮಾಗೆ ಅನ್ಯಾಯ?
‘ಪ್ರೇಮದ ಊರಲಿ’ (Premada Oorali) ಸಿನಿಮಾ ಕೂಡ ಇದೇ ರೀತಿಯ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಸಿನಿಮಾ ಯಶಸ್ಸಿನ ಹಣಕಾಸಿನ ಲೆಕ್ಕಾಚಾರವೂ ಅಷ್ಟೇ ಪಾರದರ್ಶಕವಾಗಿರಬೇಕು ಎಂಬ ಪ್ರಶ್ನೆ ಈಗ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್‌ನಲ್ಲಿ 03/10/2026ರ ರಾತ್ರಿ ಶೋಗೆ ಸಂಬಂಧಿಸಿದೆ. ಈ ಶೋನಲ್ಲಿ ಒಟ್ಟು 132 ನಕಲಿ ಟಿಕೆಟ್‌ಗಳು ಸೇಲ್ ಆಗಿವೆ. ಪ್ರತಿ ಟಿಕೆಟ್ ಬೆಲೆ 150 ರೂಪಾಯಿ. ಅದರ ಒಟ್ಟು ಮೊತ್ತ 19,800 ರೂಪಾಯಿ ಎಂಬ ಲೆಕ್ಕವನ್ನು ಉಲ್ಲೇಖಿಸಲಾಗಿದೆ. ಈ ದಾಖಲೆಯಲ್ಲಿ ಗಂಗಾವತಿಯ ಕನಕದುರ್ಗದ ಪೂರ್ಣಿಮಾ ಚಿತ್ರಮಂದಿರದ (Gangavathi Poornima Theater) ಅಧಿಕಾರಿಗಳು ಹಾಗೂ ಇತರ ಜವಾಬ್ದಾರಿಯುತ ವ್ಯಕ್ತಿಗಳ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.
ಈ ಒಂದು ದಾಖಲೆಯ ಆಧಾರದ ಮೇಲೆ ಯಾರ ಮೇಲೂ ತಪ್ಪು ಅಥವಾ ಮೋಸದ ಆರೋಪ ಮಾಡುವುದು ಸರಿಯಲ್ಲ. ಆದರೆ ಇಂತಹ ದಾಖಲೆಗಳು ಸಾರ್ವಜನಿಕವಾಗಿ ಚರ್ಚೆಗೆ ಬಂದಾಗ, ನೈಜ ಟಿಕೆಟ್ ಮಾರಾಟ, ಶೋಗಳ ಸಂಖ್ಯೆ, ಟಿಕೆಟ್ ದರ, ಒಟ್ಟು ಗ್ರಾಸ್ ಕಲೆಕ್ಷನ್ ಮತ್ತು ನಿರ್ಮಾಪಕರಿಗೆ ತಲುಪಬೇಕಾದ ಮೊತ್ತ ಇವುಗಳ ಬಗ್ಗೆ ಸ್ಪಷ್ಟತೆ ನೀಡುವುದು ಅಗತ್ಯ.
ಪ್ರಶ್ನೆ ಒಂದೇ.. ಸಿನಿಮಾದ ಅಸಲಿ ಕಲೆಕ್ಷನ್ ಎಷ್ಟು?
ಪ್ರತಿ ಶೋಗೆ ಎಷ್ಟು ಟಿಕೆಟ್ ಮಾರಾಟವಾಗಿದೆ? ಎಷ್ಟು ಟಿಕೆಟ್‌ಗಳು (complimentary) ಅಥವಾ ಬೇರೆ ವರ್ಗದಲ್ಲಿವೆ? ನಿಗದಿತ ಟಿಕೆಟ್ ದರ ಮತ್ತು ವಾಸ್ತವಿಕ ವಸೂಲಾತಿ ಎಷ್ಟು? ಚಿತ್ರಮಂದಿರದ ಪಾಲು ಎಷ್ಟು? ವಿತರಣೆಗೆ ಎಷ್ಟು? ನಿರ್ಮಾಪಕರಿಗೆ ಅಂತಿಮವಾಗಿ ಎಷ್ಟು ಮೊತ್ತ ತಲುಪುತ್ತಿದೆ? ಇವೆಲ್ಲವೂ ದಾಖಲೆಗಳ ಮೂಲಕ ಸ್ಪಷ್ಟವಾಗುವಂತಹ ವ್ಯವಸ್ಥೆ ಕನ್ನಡ ಚಿತ್ರರಂಗಕ್ಕೆ ಅಗತ್ಯ.
ಒಬ್ಬ ನಿರ್ಮಾಪಕ ತನ್ನ ಹಣವನ್ನು ಮಾತ್ರ ಹೂಡಿಕೆ ಮಾಡುವುದಿಲ್ಲ. ತನ್ನ ಕನಸು, ಸಮಯ, ಗೌರವ ಮತ್ತು ಭವಿಷ್ಯವನ್ನೂ ಒಂದು ಸಿನಿಮಾದಲ್ಲಿ ಹೂಡಿಕೆ ಮಾಡುತ್ತಾರೆ. ಆದ್ದರಿಂದ ಸಿನಿಮಾ ಯಶಸ್ವಿಯಾದಾಗ ಆ ಯಶಸ್ಸಿನ ಹಣಕಾಸಿನ ಫಲವೂ ನ್ಯಾಯಯುತವಾಗಿ ನಿರ್ಮಾಪಕರಿಗೆ ತಲುಪಬೇಕು.
ನಿರ್ಮಾಪಕ, ವಿತರಕ, ಪ್ರದರ್ಶಕ ಹಾಗೂ ಥಿಯೇಟರ್ ಮಾಲೀಕರ ನಡುವಿನ ಸಂಬಂಧ ಪರಸ್ಪರ ನಂಬಿಕೆಯ ಮೇಲೆ ನಿಂತಿರಬೇಕು. ಆ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ಪಾರದರ್ಶಕ ಲೆಕ್ಕಾಚಾರ.ಕನ್ನಡ ಸಿನಿಮಾ ಉಳಿಯಬೇಕು ಎಂದರೆ ಕೇವಲ ಪ್ರೇಕ್ಷಕರು ಟಿಕೆಟ್ ಖರೀದಿಸಿ ಸಿನಿಮಾ ನೋಡುವುದಷ್ಟೇ ಸಾಕಾಗುವುದಿಲ್ಲ. ಸಿನಿಮಾ ನಿರ್ಮಿಸುವ ವ್ಯಕ್ತಿಗೆ ನ್ಯಾಯಯುತ ವ್ಯವಹಾರ ಸಿಗಬೇಕು.
ಇಂದು ‘ಪ್ರೇಮದ ಊರಲಿ’ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗ, ಈ ಚರ್ಚೆ ಒಬ್ಬ ಸಿನಿಮಾಕ್ಕೆ ಮಾತ್ರ ಸೀಮಿತವಾಗಬಾರದು. ಮುಂದೆ ಬರುವ ಪ್ರತಿಯೊಂದು ಕನ್ನಡ ಸಿನಿಮಾದ ನಿರ್ಮಾಪಕರಿಗೂ ನಿಜವಾದ ಬಾಕ್ಸ್ ಆಫೀಸ್ ಮಾಹಿತಿ, ಪಾರದರ್ಶಕ ಲೆಕ್ಕಾಚಾರ ಮತ್ತು ನ್ಯಾಯಯುತ ಹಣಕಾಸಿನ ಹಂಚಿಕೆ ದೊರೆಯುವ ವ್ಯವಸ್ಥೆ ನಿರ್ಮಾಣವಾಗಬೇಕು.




