ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ತೀವ್ರ ಹಂತಕ್ಕೆ ತಲುಪಿದೆ. ಪ್ರತಿದಿನ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಾಲು ಸಾಲು ಟ್ವಿಸ್ಟ್‌ಗಳು ಸಿಗುತ್ತಿವೆ. ನ್ಯಾಯಾಲಯದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ.
ಪೊಲೀಸ್ ತನಿಖೆಯ ವೇಳೆ ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್ (Darshan Case) ಹಾಗೂ ಪವಿತ್ರಾ ಗೌಡ ಅವರನ್ನು ನೋಡಿರುವುದಾಗಿ ಐ-ವಿಟ್ನೆಸ್ ಪುನೀತ್ ಹೇಳಿಕೆ ನೀಡಿದ್ದ. ಆದರೆ ನ್ಯಾಯಾಧೀಶರ ಮುಂದೆ ಸಾಕ್ಷಿ ನುಡಿಯುವಾಗ ಆತ ತನ್ನ ಹೇಳಿಕೆಯಿಂದ ಸಂಪೂರ್ಣ ಉಲ್ಟಾ ಹೊಡೆದಿದ್ದಾನೆ. ಇದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಸಾಕ್ಷಿ ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ಇಂದು ನಡೆಯುವ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ. 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಈ ಪ್ರಮುಖ ವಿಚಾರಣೆ ನಡೆಯಲಿದೆ.
SPP ಕ್ರಾಸ್ ಎಕ್ಸಾಮಿನೇಷನ್ ಮತ್ತು 164 ಹೇಳಿಕೆ
ನ್ಯಾಯಾಲಯದಲ್ಲಿ ಉಲ್ಟಾ ಹೊಡೆದ ಸಾಕ್ಷಿ ಪುನೀತ್‌ಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಈ ಮೂಲಕ ಪ್ರಕರಣದ ನೈಜ ಸತ್ಯವನ್ನು ಹೊರತೆಗೆಯಲು ಸರ್ಕಾರಿ ಪರ ವಕೀಲರು ಕಠಿಣ ಸಿದ್ಧತೆ ಮಾಡಿಕೊಂಡಿದ್ದಾರೆ.
ಪೋಲಿಸ್ ತನಿಖೆಯ ಸಂದರ್ಭದಲ್ಲಿ ಸಾಕ್ಷಿ ಪುನೀತ್ ಸಿಆರ್‌ಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ರಹಸ್ಯ ಹೇಳಿಕೆ ನೀಡಿದ್ದ. ನಿನ್ನೆ ಆ ಹೇಳಿಕೆಯ ಪ್ರತಿಯನ್ನು ತರಿಸಿಕೊಂಡಿರುವ ಎಸ್‌ಪಿಪಿ, ಅದರಲ್ಲಿರುವ ಸಹಿ ಹಾಗೂ ಹೇಳಿಕೆಗಳ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಇಂದು ಅದೇ 164 ಹೇಳಿಕೆಯನ್ನು ಮುಂದಿಟ್ಟುಕೊಂಡು ತೀವ್ರ ವಿಚಾರಣೆ ನಡೆಸಲಿದ್ದಾರೆ.
ಇದನ್ನು ಓದಿ: Darshan Case: ಪ್ರದೋಷ್ ಜಾಮೀನು ಅರ್ಜಿಗೆ ತಕರಾರು; ಧನ್ವೀರ್ ವಿರುದ್ಧ ಮತ್ತೊಂದು ದೂರು
Darshan Case: ಹಾಸ್ಟೈಲ್ ಸಾಕ್ಷಿ ಎಂದರೇನು?
ತನಿಖೆಯ ವೇಳೆ ಮುಖ್ಯ ಪ್ರತ್ಯಕ್ಷ ಸಾಕ್ಷಿ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿ ಈಗ ಕೋರ್ಟ್‌ನಲ್ಲಿ ‘ನಾನು ಯಾರನ್ನೂ ನೋಡಿಲ್ಲ’ ಎಂದು ಹೇಳಿರುವುದಕ್ಕೆ ಎಸ್‌ಪಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪುನೀತ್ ಅವರನ್ನು ‘ಹಾಸ್ಟೈಲ್ ಸಾಕ್ಷಿ’ (ವಿಪರೀತ/ವಿರುದ್ಧ ಸಾಕ್ಷಿ) ಎಂದು ಪರಿಗಣಿಸಲು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಸರ್ಕಾರ ಅಥವಾ ಪ್ರಾಸಿಕ್ಯೂಷನ್ ಪರ ಸಾಕ್ಷಿ ಹೇಳಲು ಬಂದ ವ್ಯಕ್ತಿ, ನ್ಯಾಯಾಧೀಶರ ಮುಂದೆ ತನ್ನ ಪೂರ್ವಾಪರ ಹೇಳಿಕೆಯನ್ನು ಬದಲಾಯಿಸಿ ತನಿಖೆಗೆ ವಿರುದ್ಧವಾಗಿ ಮಾತನಾಡಿದರೆ ಅವರನ್ನು ‘ಹಾಸ್ಟೈಲ್ ಸಾಕ್ಷಿ’ ಎಂದು ಕರೆಯಲಾಗುತ್ತದೆ. ಇಂದು ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.




