Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ರಾವ್ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ. ಸೆಪ್ಟೆಂಬರ್ 28ರಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ಪ್ರದೋಷ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಹೇಳಿಕೆ ದಾಖಲಿಸಿದ ಬಳಿಕ ಅವರನ್ನು ಪೊಲೀಸ್ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ ಕಳುಹಿಸಲಾಗಿದೆ.
ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಗ್ಯಾಂಗ್ನಿಂದ ನಡೆದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು.ಈ ಪ್ರಕರಣದಲ್ಲಿ ಎ14 ಆರೋಪಿಯಾಗಿದ್ದ ಪ್ರದೋಷ್ ಈಗ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ನ್ಯಾಯಾಲಯದ ಮುಂದೆ ಹಾಜರಾಗಿದ್ದ ಅವರು ಸತತ 3 ಗಂಟೆಗಳ ಕಾಲ ಮಹತ್ವದ ಮಾಹಿತಿ ನೀಡಿದ್ದಾರೆ.
ಪ್ರದೋಷ್ ನೀಡಿದ ಸುದೀರ್ಘ ಹೇಳಿಕೆಯನ್ನು ಪ್ರಿಂಟ್ ತೆಗೆದು ಸಹಿ ಪಡೆಯಬೇಕಾಗಿದೆ. ಎಸ್ಪಿಪಿ ಅವರ ಮನವಿ ಮೇರೆಗೆ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಕಾಯ್ದಿರಿಸಿದ್ದಾರೆ. ಪ್ರದೋಷ್ ಹೇಳಿಕೆ ಪ್ರಕ್ರಿಯೆ ಈ ಪ್ರಕರಣದಲ್ಲಿ ಪ್ರಮುಖ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್ ವಕೀಲರು
ಇನ್ನೊಂದೆಡೆ ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆ ತರಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ. ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜಾ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯ ತಮ್ಮ ಮನವಿ ಪುರಸ್ಕರಿಸದ ಕಾರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: Darshan Case: ಪ್ರದೋಷ್ ಹೇಳಿಕೆ ಮುಂದೂಡಲು ದರ್ಶನ್ ವಕೀಲರ ಕಸರತ್ತು; ಕೋರ್ಟ್ನಲ್ಲಿ ಸರ್ಕಾರಿ ವಕೀಲರ ಖಡಕ್ ವಾದ
ಪ್ರದೋಷ್ ಮಾಫಿ ಸಾಕ್ಷಿ ಆಗ್ತಿರೋದನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ನಲ್ಲಿ ಎಸ್ಎಲ್ಪಿ ಸಲ್ಲಿಕೆ ಮಾಡಿದ್ದೇವೆ. ವಿಚಾರಣಾ ನ್ಯಾಯಾಲಯದಲ್ಲಿ ನಮಗೆ ಹಿನ್ನಡೆಯಾಗಿದ್ದರಿಂದ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ಅರ್ಜಿಯ ತೀರ್ಪು ಪ್ರಕರಣದ ಮುಂದಿನ ಹಂತಕ್ಕೆ ಅತ್ಯಂತ ನಿರ್ಣಾಯಕವಾಗಲಿದೆ.
Darshan Case: ಪ್ರಕರಣದ ಮೇಲಾಗುವ ಪರಿಣಾಮಗಳೇನು?
ಸುಪ್ರೀಂ ಕೋರ್ಟ್ನಿಂದ ಆದೇಶ ಬಂದರೆ ಪ್ರಸ್ತುತ ನಡೆಯುತ್ತಿರುವ ವಿಚಾರಣೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇಂದು ಅರ್ಧ ಭಾಗದ ಸಾಕ್ಷಿ ವಿಚಾರಣೆ ನಡೆದಿದ್ದು, ನಾಳೆ ಉಳಿದ ಪ್ರಕ್ರಿಯೆ ನಡೆಯಲಿದೆ. ದರ್ಶನ್ ಕೋರ್ಟ್ಗೆ ಹಾಜರಿದ್ದು ಪ್ರಶ್ನಿಸಬಹುದು ಎಂದು ಹೈಕೋರ್ಟ್ ಈಗಾಗಲೇ ಆದೇಶ ನೀಡಿದೆ.
ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದರೆ ಸಾಕ್ಷಿ ವಿಚಾರಣೆ ಬದಲಾಗಲಿದೆ. ಸಾಕ್ಷಿ ವಿಚಾರಣೆಯ ಪ್ರಕ್ರಿಯೆಗಳ ಮೇಲೆ ಇದು ಸಂಪೂರ್ಣ ಪರಿಣಾಮ ಬೀರಲಿದೆ ಎಂದು ಹಷ್ಮತ್ ಪಾಷಾ ಹೇಳಿದ್ದಾರೆ. ಹೀಗಾಗಿ ಸೆಪ್ಟೆಂಬರ್ 29ರ ವಿಚಾರಣೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಮೇಲೆ ಎಲ್ಲರ ಕಣ್ಣಿದೆ.




