☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

Darshan Case: ಪ್ರದೋಷ್ ಹೇಳಿಕೆ ಮುಂದೂಡಲು ದರ್ಶನ್ ವಕೀಲರ ಕಸರತ್ತು; ಕೋರ್ಟ್‌ನಲ್ಲಿ ಸರ್ಕಾರಿ ವಕೀಲರ ಖಡಕ್ ವಾದ

Darshan Case: Court Rejects Darshan's Plea Against Pradosh Statement

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಒಂದರ ಮೇಲೊಂದರಂತೆ ಎದುರಾಗುತ್ತಿವೆ. ಪ್ರಕರಣದ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿ ದಾಖಲು ಮಾಡುವುದನ್ನು ಮುಂದೂಡಲು ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡುವಂತೆ ಕೋರಿದ್ದರು. ಆದರೆ ಈ ಮನವಿಯನ್ನು ವಿಚಾರಣಾ ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್‌ ಮಾಫಿ ಸಾಕ್ಷಿ ದಾಖಲಿಸಲು ನ್ಯಾಯಾಲಯ ಇಂದು (ಸೆ.28) ದಿನಾಂಕ ನಿಗದಿ ಮಾಡಿತ್ತು. ಪ್ರದೂಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್ ಈ ಮೊದಲು ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್‌ ಕೂಡ ಆ ಅರ್ಜಿಯನ್ನು ವಜಾಗೊಳಿಸಿತ್ತು. 

ಸುಪ್ರೀಂ ಕೋರ್ಟ್‌ಗೆ ಹೋಗಲು ಕಾಲಾವಕಾಶ ಕೋರಿದ್ದ ದರ್ಶನ್ ಪರ ವಕೀಲರು

ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡ ಬೆನ್ನಲ್ಲೇ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ 10 ದಿನಗಳ ಸಮಯ ಬೇಕಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. 

ಅಲ್ಲಿಯವರೆಗೆ ಪ್ರಾಸಿಕ್ಯೂಷನ್ ಬೇರೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿ ಎಂದು ಮನವಿ ಮಾಡಿದ್ದರು. ಪ್ರದೋಷ್ ಹೇಳಿಕೆಯನ್ನು ಕೇವಲ 7ನೇ ಸಾಕ್ಷಿಯಾಗಿ ತೆಗೆದುಕೊಳ್ಳಬೇಕು ಎಂದು ದರ್ಶನ್ ವಕೀಲರು ವಾದ ಮಂಡಿಸಿದ್ದರು. 

ಪ್ರದೋಷ್ ಹೇಳಿಕೆ ದಾಖಲಿಸಲು ಪ್ರಾಸಿಕ್ಯೂಷನ್ ಅನಗತ್ಯವಾಗಿ ಅವಸರ ಮಾಡುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದ್ದರು. ಹೈಕೋರ್ಟ್ ಸೂಚಿಸಿರುವ 7 ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದು, ಅವರ ಹೇಳಿಕೆಯನ್ನು ಕೊನೆಯಲ್ಲಿ ದಾಖಲಿಸುವಂತೆ ಕೋರಿದ್ದರು. 

Darshan Case: ಸರ್ಕಾರದ ಪರ ವಕೀಲ ಸಚಿನ್ ಖಡಕ್ ವಾದ

ದರ್ಶನ್ ಪರ ವಕೀಲರ ವಾದಕ್ಕೆ ಸರ್ಕಾರಿ ಪರ ವಕೀಲ ಸಚಿನ್ ಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸೆಪ್ಟೆಂಬರ್ 24ರಂದೇ ಪ್ರದೋಷ್‌ಗೆ ಸಮನ್ಸ್ ನೀಡಲಾಗಿದೆ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದರು. 

ಹೈಕೋರ್ಟ್‌ನಲ್ಲಿ ಅರ್ಜಿ ವಾದ ನಡೆದು ತೀರ್ಪು ಬಂದ ಬಳಿಕವೇ ನಿಯಮಾನುಸಾರ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ದರ್ಶನ್ ಸಲ್ಲಿಸಿರುವ ಈ ಅರ್ಜಿಯಲ್ಲಿ ಯಾವುದೇ ಹೊಸ ಮಾಹಿತಿ ಅಥವಾ ವಿಶೇಷ ಸಂಗತಿಗಳಿಲ್ಲ ಎಂದು ವಾದಿಸಿದರು. 

ಹೀಗಾಗಿ ಸಮಯ ವ್ಯರ್ಥ ಮಾಡುವ ಉದ್ದೇಶದಿಂದ ಸಲ್ಲಿಸಲಾಗಿರುವ ಈ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು ಎಂದು ವಿನಂತಿಸಿದರು. ಅಂತಿಮವಾಗಿ ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಾಲಯ ದರ್ಶನ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.