
ನಗರದ ಅಂಚು. ಒಂದು ಬೂದು ಬಿಲ್ಡಿಂಗ್. ಬೋರ್ಡ್ ಮೇಲೆ ಹೆಸರು:”ಸಮಾನ ಅವಕಾಶ ಕಚೇರಿ”. ಅದರ ಕೆಳಗೆ ಇಡೀ ದಿನ “ಇಲ್ಲಿ ಸಮಾನವಾಗಿ ಎಲ್ಲರಿಗೂ ಅವಕಾಶ ಸಿಗತ್ತೆ. ಆದ್ರೆ ಎಲ್ಲರಿಗೂ ಒಂದೇ ಥರ ರಿಸಲ್ಟ್ ಸಿಗಲ್ಲ” ಎಂಬ ಬರಹ ಇರುವ ಕೆಂಪು ಲೈಟ್ ಮಿನುಗುತ್ತಿತ್ತು. ಒಳಗೆ ಕೆಲಸ ಹುಡುಕಿಕೊಂಡು ಬರೋ ಅಬೆಪಾರಿಗಳ ಉಸಿರು ಎಳ್ಯೋದನ್ನ ಕೂಡ ಅದು ಲೆಕ್ಕ ಹಾಕಿ, ಡಾಟಾ ಶೀಟ್‌ನಲ್ಲಿ ಬರ್ಕೊಳ್ತಿತ್ತು.
ಆ ಕಚೇರಿ ಒಳಗೆ ಹೋದ್ರೆ ಗಬ್ಬುನಾಥ! ಬರೀ ಹಳೇ ಕಾಗದಗಳು ಮತ್ತೆ ಬೆವರಿನ ವಾಸನೆ. ಕುರ್ಚಿಗಳನ್ನ ನೆಲಕ್ಕೆ ಬೋಲ್ಟ್ ಮಾಡಿರ್ತಾರೆ. ಯಾಕಂದ್ರೆ, ಕಚೇರಿಯಲ್ಲಿ ಓಡಾಡೋದು ಕೂಡ ಲಂಚ ಕೊಟ್ಟು ತಗೋಬೇಕಾದ ವಸ್ತು ಆಗಿತ್ತು.
ಏತನ್ಮಧ್ಯೆ ತನ್ನ ಜೀವನದ ಸಿನಿಮಾದಲ್ಲೇ ಸೈಡ್ ವಿಂಗಲ್ಲಿ ಕೂತು ಸಪೋಟ ಜ್ಯೂಸ್ ಕುಡಿಯುತ್ತಿರುವ ಜೂನಿಯರ್ ಆರ್ಟಿಸ್ಟ್‌ನಂತೆ ಇರುವ ಸೀದಪ್ಪ ಕೆಲಸದ ಇಂಟರ್ವ್ಯೂಗಾಗಿ ಅಲ್ಲಿಗೆ ಶಿಸ್ತಿನಿಂದ ಬರುತ್ತಾನೆ. ಅವನಿಗೆ ಇದು ಮೊದಲ ಕಂಪನಿ ಅಲ್ಲ. ಹಳೇ ಕಂಪನಿಯಲ್ಲಿ ಟೇಬಲ್ ಮುಂದೆ ಕೂತು, ಕೂತು ಆತನ ಪಿರ್ರೆಯಲ್ಲಿ ಮೂಲವ್ಯಾಧಿ ಆಗಿಬಿಟ್ಟಿದೆ. ಅದರ ಸ್ಕ್ಯಾನಿಂಗ್ ರಿಪೋರ್ಟ್ ತೋರಿಸಿದ ನಂತರವೇ ಅವನನ್ನು ಈ ಹೊಸ ಕಂಪನಿಯಲ್ಲಿ ಒಳಗೆ ಬಿಟ್ಟುಕೊಳ್ಳುತ್ತಾರೆ. ಕಷ್ಟದ ಪುರಾವೆ ಇದ್ದರೆ ಮಾತ್ರ ಅವಕಾಶ!
ಸೀದಪ್ಪ ತನ್ನ ಹೊಸಾ ಜವಾಬ್ದಾರಿಗಳನ್ನ ಭಕ್ತಿಯಿಂದ ನಿರ್ವಹಿಸಲು ಪ್ರಾರಂಭಿಸುತ್ತಾನೆ. ಕೆಲಸ ತುಂಬಾ ಹೆಕ್ಟಿಕ್. ಹೆಚ್ಚು ಹೊತ್ತು ಒಂದೇ ಸಮ ಕೂರಲಾರದೆ ಆತನ ಅಂಡೆಲ್ಲಾ ನೋವು. ಆದರೆ ಸೀದಪ್ಪನಿಗೆ ಅದೇ ಖುಷಿ ಮತ್ತು ಹೆಮ್ಮೆ. ಯಾಕಂದ್ರೆ ಹೊರಗಿನ ಜೀವನದ ಅರಾಜಕತೆಗಿಂತ ಈ ನೋವೇ ವಾಸಿ. ಜವಾಬ್ದಾರಿ ಅನ್ನುವ ಕಗ್ಗತ್ತಲ ದಾರದಲ್ಲಿ ಹೆಂಡತಿ, ಮಗಳನ್ನ ಎಳ್ಕೊಂಡು ಹೋಗ್ತಿದ್ದಾನೆ. ಕೆಲಸಕ್ಕೆ ಹೋಗೋಕ್ಕೆ ಮುಂಚೆ ಮಗಳನ್ನ ಬೆಳಗ್ಗೆ ಮಲಗಿರೋವಾಗ ನೋಡ್ತಾನೆ, ರಾತ್ರಿ ಸುಸ್ತಾಗಿ ಮನೆಗೆ ಬರೋಹೊತ್ತಿಗೆ ಕೂಡ ಮಗಳು ಮಲಗಿರ್ತಾಳೆ. ರಾತ್ರಿ ಸೀದಪ್ಪ ಕಣ್ಣು ಮುಚ್ಚಿದರೆ ಮಗಳ ಸ್ಕೂಲ್ ಫೀಸ್ ಮತ್ತು ತೀರದ ಇ.ಎಮ್.ಐಗಳ ನೆನಪುಗಳು ಬಿಟ್ಟು ಹೋದ ಹಳೇ ಪ್ರೇಯಸಿಯ ನೆನಪುಗಳಂತೆ ಅವನನ್ನು ಕಾಡುತ್ತವೆ. “ನಾನು ಶಿಸ್ತಿನಿಂದ ಇರ್ತೀನಿ, ಆಗ ಮಾತ್ರ ನನ್ನ ಸಾಂಸ್ಕೃತಿಕ ಬಂಡವಾಳ ಉಳಿಯುತ್ತೆ” ಎಂದು ಕಣ್ಣುಬಿಟ್ಟೇ ಪ್ರತಿನಿತ್ಯ ಮಲಗುತ್ತಾನೆ.
ಕನ್ನಡಕ ಹಾಕಿರುವ ಎಚ್.ಆರ್ ವಿಭಾಗದ ಧಡೂತಿ ಹೆಂಗಸ್ರು ಸೀದಪ್ಪನಿಗೆ ಆಗಾಗ ತನ್ನ ಕರ್ತವ್ಯಗಳನ್ನು ಬಗೆ ಬಗೆ ವಿಧಾನಗಳಲ್ಲಿ ನೆನಪಿಸುತ್ತಿದ್ದರು. ಅವರ ನಾಲ್ಕು ಕಣ್ಣುಗಳ ಪೈಕಿ ಒಂದರಲ್ಲೂ ದಯೆ ಇರ್ಲಿಲ್ಲ. ಎಚ್.ಆರ್ ವಿಭಾಗಕ್ಕೆ ಇವರನ್ನೇ ಯಾಕೆ ನೇಮಕ ಮಾಡ್ತಾರೆ ಅಂತ ಸೀದಪ್ಪ ಪದೇ ಪದೇ ಕೇಳಿಕೊಂಡಾಗ, “ಭಾವನೆಗಳನ್ನು ಕಮರ್ಷಿಯಲ್ ಆಗಿ ಬಳಸೋದು ಮತ್ತು ಬೇಗ ಕೈ ಬಿಡೋದು ಅವರಿಗೆ ಸುಲಭ ಅನ್ನೋದು ಸಿಸ್ಟಮ್‌ಗೆ ಗೊತ್ತಿದೆ.” ಎಂಬ ಉತ್ತರ ಅವನಿಗೆ ಬಹುದಿನಗಳ ನಂತರ ಹೊಳೆದಿತ್ತು.
ಆ ಹೆಂಗಸರ ಪ್ರಶ್ನೆಗಳು ಸಿಂಪಲ್: “ಓದ್ತಿಯಾ? – ಹೌದು.” “ಶಿಸ್ತಾಗಿರ್ತೀಯಾ? – ಹೌದು.” “ವಿಧೇಯನಾ? – ಹೌದು.” ಪ್ರತಿ ಉತ್ತರಕ್ಕೆ, ಸಿಸ್ಟಮ್ ಗ್ರೀನ್ ಸಿಗ್ನಲ್ ಕೊಡ್ತಿತ್ತು. ಬಡಿದು ಬಾಯಿಗೆ ಹಾಕ್ಕೋಳೋಕ್ಕೆ ರೆಡಿ ಅಂತ ಹೇಳೋಥರ! ಸೀದಪ್ಪ ಪ್ರತಿಬಾರಿ ಗ್ಲಾಸ್ ಹಿಂದಿನಿಂದ ಹೊರಬಂದಾಗ ಅವನಿಗೆ ಸಿಗುತ್ತಿದ್ದ ಚೀಟಿ ಒಂದೇ: “ಕಾರ್ಯಕ್ಷಮತೆಯ ಎವಾಲ್ಯೂಯೇಷನ್‌ಗೆ ಒಳಪಟ್ಟಿರುತ್ತೀರಿ”. ಆದರೆ ಗೇಟ್‌ನ ಆಚೆಗಿನ ಸತ್ಯವೇ ಬೇರೆ. ಅಲ್ಲಿ ಒಬ್ಬ ಅನಾಮಧೇಯ ಪುಟ್ಟ ಹುಡುಗನೊಬ್ಬ ನಮ್ಮ ಕ್ಯಾಮರಾಗೆ “ಹಾಯ್” ಹೇಳುತ್ತಾನೆ. ಅವನ ಕೆಲಸ ಒಂದೇ: ಬೂಟ್ ಪಾಲಿಶ್ ತಿನ್ನೋದು, ಬಾಯಿ ಕಪ್ಪಾಗಿಸಿಕೊಳ್ಳೋದು, ಮತ್ತು ಕ್ಯಾಮೆರಾ ನೋಡಿ ನಗೋದು. ಆ ಹುಡುಗನಿಗೆ ಬದುಕುವ ಆಯ್ಕೆ ಇಲ್ಲ. ಅವನು ಬೀದಿ ಹೆಣವಾಗುವ ಮುನ್ನ ಎಷ್ಟು ಪಾಲಿಶ್ ತಿನ್ನುತ್ತಾನೆ ಮತ್ತು ಎಷ್ಟು ಬಾರಿ ಹಲ್ಲು ಕಿರಿಯುತ್ತಾನೆ ಎನ್ನುವ ಲೆಕ್ಕ ಕಂಪನಿಗೆ ಬಹಳ ಮುಖ್ಯ. ಅದನ್ನು ನಿಖರವಾಗಿ ಅಳೆಯಲು ಸಿಕ್ಸ್ ಸಿಗ್ಮಾ ಸರ್ಟಿಫಿಕೇಟ್ ಹೊಂದಿರುವ ವೃತ್ತಿಪರ ಲೆಕ್ಕಾಧಿಕಾರಿ ಅದಕ್ಕೆ ನೇಮಕಗೊಂಡಿದ್ದ. ಸೀದಪ್ಪ ಆ ಹುಡುಗನನ್ನು ನೋಡಿ “ನಾನು ಸೇಫ್. ನನ್ನ ಹತ್ರ ಬುಕ್ಸ್ ಇದೆ, ನಾನು ಯೋಚಿಸ್ತೀನಿ. ಇವನ ಥರ ನಾನು ಬೀದಿ ಹೆಣ ಆಗಲ್ಲ“ ಎಂದು ಮನಸ್ಸಿನಲ್ಲೇ ಅಂದುಕೊಂಡ. ಸ್ವಾರ್ಥದ ಅಂಧತ್ವ ಇತ್ತು ಅವನಲ್ಲಿ.
ಸಮಯ ಉರುಳಿತು. ಒಂದು ದಿನ, ಕಚೇರಿಯಲ್ಲಿ ಎಲ್ಲರೂ ಶಾಕ್ ಆದರು. ಹಳೆಯ ಕ್ಲರ್ಕ್‌ಗಳು ಡಿಸ್ಮಿಸ್. ಯಾವುದೋ ಗ್ರಹದಿಂದ ರೋಬೋಟ್‌ಗಳು ಬಂದು ಹೊಸದಾಗಿ ಕಂಪನಿಯನ್ನು ಟೇಕ್ ಓವರ್ ಮಾಡಿದ್ದವು. ಆ ರೋಬೋಟ್ಗಳಿಗೆ ಫೀಲಿಂಗ್ಸ್ ಇರ್ಲಿಲ್ಲ, ದಯೆ ಇರ್ಲಿಲ್ಲ. ಅವರ ಡ್ಯೂಟಿ ಒಂದೇ: ಎಣಿಸು. ಅಳೆ. ಕೋಟಾ ಮುಗಿಸು. ಚಿಂತನೆ ಅನ್ನೋದು ಇನ್ಮುಂದೆ ಇಲ್ಲಿ ಬೇಕಿರ್ಲಿಲ್ಲ.
ರೋಬೋಟ್‌ಗಳು ಬಂದ ಮರುಕ್ಷಣ, ಸೀದಪ್ಪನನ್ನ ಮತ್ತೆ ಕರೆಯಲಾಯಿತು. ಅವನು ಈ ಬಾರಿಯೂ ಎಂದಿನಂತೆ ಮೀಟಿಂಗ್ ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ತಯಾರಿ ಮಾಡಿಕೊಂಡು ರೆಡಿ ಇದ್ದ. ಆದರೆ ರೋಬೋಟ್ಗಳಿಗೆ ಅವನ ಬೋರ್ ಹೊಡೆಸುವ ಯಾವ ಐಡಿಯಾಗಳನ್ನೂ ಕೇಳುವ ಸಂಯಮ ಇರಲಿಲ್ಲ. ಸೀದಪ್ಪ ಮೀಟಿಂಗ್ ರೂಮ್ ಗೆ ಬರುತ್ತಿದ್ದಂತೆಯೇ ಸೆಕ್ಯೂರಿಟಿ ಗಾರ್ಡ್ ಅವನ ಕೈಗೆ ಬೂಟ್ ಪಾಲಿಶ್ ಡಬ್ಬಿ ಕೊಟ್ಟು “ತಿನ್ನು,” ಎಂದು ಹೂಂಕಾರಿಸಿದ. “ಕ್ಯಾಮೆರಾಗೆ ನಗು. ನಿನ್ನ ಕಪ್ಪಾದ ಹಲ್ಲು ತೋರಿಸು…” ಎಂದು ತಾಕೀತು ಮಾಡಿದ.
ಸೀದಪ್ಪನಿಗೆ ದಿಗ್ಭ್ರಮೆಯಾಯಿತು. ಅವನು ತನ್ನ ಇಡೀ ಶ್ರಮ ಮತ್ತು ಶಿಸ್ತು ಕೇವಲ ಒಂದು ತಾತ್ಕಾಲಿಕ ಮಾಸ್ಕ್ ಆಗಿತ್ತು ಎಂದು ಅರಿವಾಯಿತು. ತನ್ನ ಕುಟುಂಬದ ಮೇಲಿನ ಜವಾಬ್ದಾರಿ ಮತ್ತು ಪ್ರೀತಿಯೇ ಅವನನ್ನು ಸ್ವಾತಂತ್ರ್ಯದಿಂದ ವಂಚಿಸಿತ್ತು. ತನ್ನ ಹೆಂಡತಿ ಮತ್ತು ಮಗಳ ಮುಖಗಳನ್ನು ನೆನಪಿಸಿಕೊಂಡ. ತನ್ನ ಹೊಸಾ ರೋಬೋಟ್ ಸ್ವಾಮಿಗಳ ಕಡೆ ನೋಡಿದ. ಅವು ತಮ್ಮ ಐಪ್ಯಾಡ್ಗಳಲ್ಲಿ ಏನನ್ನೋ ಬರೆದುಕೊಳ್ಳುತ್ತಿದ್ದವು. ಸೀದಪ್ಪ ಆಜ್ಞೆಗೆ ಒಪ್ಪಿದ. ಪಾಲಿಶ್ ತಿಂದ. ಕಪ್ಪಾದ ಹಲ್ಲುಗಳನ್ನು ಕ್ಯಾಮೆರಾಗೆ ತೋರಿಸಿ ನಕ್ಕ. ಅವನ ನಗು ನೋವು ಮತ್ತು ಜವಾಬ್ದಾರಿಯ ದುಃಖದ ನಗುವಾಗಿತ್ತು. ಅವನ ‘ಕೋಟಾ’ ಈಗ ಆ ಬೂಟ್ ಪಾಲಿಶ್ ಹುಡುಗನ ‘ಕೋಟಾ’ಗಿಂತ ಒಂದು ಗ್ರಾಂ ಜಾಸ್ತಿ ಇರ್ಲಿಲ್ಲ.




