BBK 13: ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಓಂ ಪ್ರಕಾಶ್ ರಾವ್ ಹೇಳಿದ್ದೇನು?

ಅರ್ಧಕ್ಕೇ ಜರ್ನಿ ಮುಗಿಸಿ ಆಚೆ ಬಂದ ಓಂ ಪ್ರಕಾಶ್ ರಾವ್!

Photo Credits: @n_omprakashrao (Instagram)

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ರಿಂದ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಅರ್ಧಕ್ಕೇ ಹೊರಬಂದಿದ್ದಾರೆ. ದೊಡ್ಮನೆಯಲ್ಲಿ ಆಟ ಮುಂದುವರಿಸಲು ಸಾಧ್ಯವಾಗದಷ್ಟು ತೀವ್ರ ಅನಾರೋಗ್ಯ ಎದುರಾದ ಹಿನ್ನೆಲೆಯಲ್ಲಿ ಅವರು ತಮ್ಮ ಬಿಗ್ ಬಾಸ್ ಸುದೀರ್ಘ ಪಯಣವನ್ನು ಇಲ್ಲಗೆ ಅಂತ್ಯಗೊಳಿಸಿದ್ದಾರೆ.

ಈ ಕುರಿತು ವಾಹಿನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘DISCONTINUED’ ಎಂದು ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅಧಿಕೃತವಾಗಿ ದೃಢಪಡಿಸಿದೆ. ಓಂ ಪ್ರಕಾಶ್ ರಾವ್ ಅವರ ಈ ಅನಿರೀಕ್ಷಿತ ನಿರ್ಗಮನೆ ಅವರ ಕೋಟ್ಯಂತರ ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ಆಸ್ಪತ್ರೆಗೆ ದಾಖಲಾಗಿದ್ದ ನಿರ್ದೇಶಕ: ತಮ್ಮ ಆರೋಗ್ಯದ ಬಗ್ಗೆ ಓಂ ಪ್ರಕಾಶ್ ರಾವ್ ಹೇಳಿದ್ದೇನು?

ಕಳೆದ ದಿನ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಉಂಟಾಗಿತ್ತು. ಕಾಲಿನ ನೋವು ತೀವ್ರವಾಗಿದ್ದರಿಂದ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ತುರ್ತಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಆರಂಭದಲ್ಲಿ ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡು ಮತ್ತೆ ದೊಡ್ಮನೆಗೆ ವಾಪಸ್ ಬರಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ವೈದ್ಯರ ಕಟ್ಟುನಿಟ್ಟಿನ ಸಲಹೆಯಂತೆ ಅವರು ಶೋನಿಂದ ಹೊರನಡೆಯುವ ಅಂತಿಮ ನಿರ್ಧಾರ ಮಾಡಿದರು.

ಬಿಗ್ ಬಾಸ್ ಮನೆಯಿಂದ ಸಂಪೂರ್ಣವಾಗಿ ಆಚೆ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಓಂ ಪ್ರಕಾಶ್ ರಾವ್ ಅವರು ತಮ್ಮ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.

“ಬಿಗ್ ಬಾಸ್ ಮನೆಯಲ್ಲಿ ನನಗೆ ಅಲ್ಲಿನ ಆಹಾರ ಪದ್ಧತಿ ಸರಿಯಾಗಿ ಅಡ್ಜಸ್ಟ್ ಆಗಲಿಲ್ಲ. ನನಗೆ ಅನ್ನವನ್ನು ಜಾಸ್ತಿ ತಿನ್ನುವ ಹಾಗಿರಲಿಲ್ಲ. ಇದರಿಂದಾಗಿ ನನ್ನ ದೇಹದಲ್ಲಿ ಶುಗರ್ ಮತ್ತು ಬಿಪಿ ಪ್ರಮಾಣ ದಿಢೀರ್ ಜಾಸ್ತಿಯಾಯಿತು” ಎಂದು ಅವರು ವಿವರಿಸಿದ್ದಾರೆ.

ಅಭಿಮಾನಿಗಳಲ್ಲಿ ಬಹಿರಂಗ ಕ್ಷಮೆಯಾಚನೆ: 15 ದಿನಗಳ ಕಾಲ ವಿಶ್ರಾಂತಿ

ಪ್ರಸ್ತುತ ತಮ್ಮ ಕುಟುಂಬದ ವೈದ್ಯರು ಸಂಪೂರ್ಣ ತಪಾಸಣೆ ನಡೆಸಿದ್ದು, ಎಲ್ಲಾ ಮೆಡಿಕಲ್ ರಿಪೋರ್ಟ್‌ಗಳನ್ನು ಪರಿಶೀಲಿಸಿದ ನಂತರ ಕಡ್ಡಾಯವಾಗಿ 15 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

“ನಿಮ್ಮೆಲ್ಲರನ್ನೂ ರಂಜಿಸುವ ಸದುದ್ದೇಶದಿಂದ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದೆ. ಆದರೆ ಈ ಅನಿರೀಕ್ಷಿತ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯದಲ್ಲೇ ಹೊರಗೆ ಬರಬೇಕಾಯಿತು, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಅವರು ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ.

ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ಅವರು, ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ವಾಪಸ್ ಬಂದು ತಮ್ಮ ಚಿತ್ರರಂಗದ ಕೆಲಸಗಳನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.