Photo Credits: @colorskannadaofficial (Instagram)
‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಆಗಿ ಆರಂಭವಾಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ದೊಡ್ಮನೆಯಲ್ಲಿ ತಮ್ಮ ಚುರುಕಿನ ಆಟ ಹಾಗೂ ತಮಾಷೆಯ ಮಾತುಗಳಿಂದ ಮನೆಮಂದಿ ಮತ್ತು ವೀಕ್ಷಕರ ಮನಗೆದ್ದಿದ್ದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಇದೀಗ ಶೋನಿಂದ ಅರ್ಧಕ್ಕೆ ಹೊರಬಂದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ವಿಷಯವನ್ನು ಖಚಿತಪಡಿಸಿದೆ. ‘DISCONTINUED’ ಎಂಬ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಓಂ ಪ್ರಕಾಶ್ ರಾವ್ ಅವರ ಬಿಗ್ ಬಾಸ್ ಪಯಣ ಇಲ್ಲಿಗೆ ಮುಕ್ತಾಯಗೊಂಡಿದೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ.
ಈ ಅನಿರೀಕ್ಷಿತ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಹಾಗೂ ದೊಡ್ಮನೆಯ ವೀಕ್ಷಕರಿಗೆ ತೀವ್ರ ಬೇಸರವಾಗಿದೆ. ಆಟದಲ್ಲಿ ಸಕ್ರಿಯರಾಗಿದ್ದ ಸ್ಪರ್ಧಿ ಹೀಗೆ ದಿಢೀರನೆ ನಿರ್ಗಮಿಸಿರುವುದು ಎಲ್ಲರಿಗೂ ಆಘಾತ ಉಂಟುಮಾಡಿದೆ.
ಆರೋಗ್ಯದಲ್ಲಿ ಏರುಪೇರು: ಕಾಡುಮನೆ ಎಸ್ಟೇಟ್ ಬಳಿಯ ಆಸ್ಪತ್ರೆಗೆ ದಾಖಲು
ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಶೂಟಿಂಗ್ ಒಂದರಲ್ಲಿ ಓಂ ಪ್ರಕಾಶ್ ರಾವ್ ಅವರ ಕಾಲಿಗೆ ಪೆಟ್ಟಾಗಿತ್ತು. ಮನೆಗೆ ಬಂದ ಮೇಲೂ ಅವರು ಕುಂಟುತ್ತಲೇ ಓಡಾಡುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರಿಗೆ ಈ ಕಾಲು ನೋವು ತೀವ್ರವಾಗಿ ಹೆಚ್ಚಾಗಿತ್ತು.
ನೋವು ತಾಳಲಾರದೆ ಅವರು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡ ತಕ್ಷಣವೇ ಅವರನ್ನು ಕಾಡುಮನೆ ಎಸ್ಟೇಟ್ ಬಳಿ ಇರುವ ಆರಾಧ್ಯ ಆಸ್ಪತ್ರೆಗೆ ಸೇರಿಸಿದೆ. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ತಪಾಸಣೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಲು ಅವರನ್ನು ಮನೆಯಿಂದ ಹೊರಗೆ ಕರೆತರಲಾಗಿದೆ.
ಭಾನುವಾರದ ಸಂಚಿಕೆಯಲ್ಲಿ ಚರ್ಚೆ
ಭಾನುವಾರ ಪ್ರಸಾರವಾದ ‘ಕಿಚ್ಚನ ಪಂಚಾಯಿತಿ’ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಓಂ ಪ್ರಕಾಶ್ ರಾವ್ ಅವರ ಅನಾರೋಗ್ಯದ ಕುರಿತು ಚರ್ಚಿಸಿದ್ದರು. ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರು.
ಸ್ಪರ್ಧಿಯ ಆರೋಗ್ಯವೇ ಮೊದಲ ಆದ್ಯತೆಯಾಗಿರುವುದರಿಂದ ಅವರನ್ನು ಶೋನಿಂದ ಕಳುಹಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈದ್ಯರ ಉಸ್ತುವಾರಿಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಓಂ ಪ್ರಕಾಶ್ ರಾವ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.




