ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಇತ್ತೀಚೆಗೆ ಆರಂಭ ಆಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋಹಾಸ್ಟರ್‌ನಲ್ಲಿ ಕನ್ನಡಿಗರು ಮೆಚ್ಚಿದ ರಿಯಾಲಿಟಿ ಶೋ ಅದ್ಧೂರಿಯಾಗಿ ಆರಂಭ ಆಗಿದೆ. ಕಳೆದ ಸೀಸನ್ (ಬಿಗ್ ಬಾಸ್ ಕನ್ನಡ 12) ಅತೀ ಹೆಚ್ಚು ಟಿಆರ್‌ಪಿ ಪಡೆಯುವ ಮೂಲಕ ಅದೂವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದು ಹಾಕಿತ್ತು. ಹೀಗಾಗಿ 13ನೇ ಸೀಸನ್ ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಬಿಗ್ ಬಾಸ್ ಕನ್ನಡದ 13ನೇ ಸೀಸನ್ ಕೂಡ ಆರಂಭವಾದ ಮೊದಲ ವಾರದಲ್ಲಿಯೇ ಜೋರಾಗಿ ಸದ್ದು ಮಾಡುತ್ತಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ 13ನೇ ಸೀಸನ್ ನಂ.1 ಸ್ಥಾನಕ್ಕೆ ಏರಿದ್ದು, ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮತ್ತಷ್ಟು ಬಲಪಡಿಸಿಕೊಂಡಿದೆ. ಎಂಡಮೋಲ್ ಶೈನ್ ಇಂಡಿಯಾ ನಿರ್ಮಾಣ ಮಾಡುತ್ತಿರುವ ಬಿಗ್ ಬಾಸ್ ಸೀಸನ್ ಮೊದಲ ವಾರದಲ್ಲೇ ಸದ್ದು ಮಾಡಿದೆ.
ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್ ಕನ್ನಡ’ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಸದ್ಯ ಜಿಯೋಹಾಟ್‌ಸ್ಟಾರ್‌ನ ಕನ್ನಡ ವಿಭಾಗದಲ್ಲಿ ನಂ.1 ಸ್ಥಾನಕ್ಕೇರಿದೆ.
ಇತ್ತೀಚಿನ ರ‍್ಯಾಂಕಿಂಗ್ ನೋಡಿದರೆ, ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಬಗ್ಗೆ ಪ್ರೇಕ್ಷಕರಲ್ಲಿ ಅತೀವವಾದ ಆಸಕ್ತಿ ಮೂಡಿರುವುದು ಗೊತ್ತಾಗುತ್ತಿದೆ. ಅಷ್ಟೇ ಅಲ್ಲದೆ, ಜನರು ಈ ರಿಯಾಲಿಟಿ ಶೋಗೆ ಎಂಗೇಜ್ ಆಗಿರೋದು ಗೊತ್ತಾಗುತ್ತಿದೆ. ಟೆಲಿವಿಷನ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮವು ನಿರಂತರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.
ಇದನ್ನೂ ಓದಿ: ಟಾಸ್ಕ್ ವಿಚಾರಕ್ಕೆ ಶುರುವಾಯ್ತು ಕಿತ್ತಾಟ; ಕಾವೇರಿದ ಬಿಗ್ ಬಾಸ್ ದೊಡ್ಮನೆ
ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ‘ಬಿಗ್ ಬಾಸ್ ಕನ್ನಡ 13’ ಅತ್ಯಂತ ಪ್ರಭಾವಶಾಲಿ ರಿಯಾಲಿಟಿ ಶೋ ಎಂಬುವುದನ್ನು ಮತ್ತಷ್ಟು ದೃಢಪಡಿಸಿದೆ. ಕರ್ನಾಟಕದಾದ್ಯಂತ ವೀಕ್ಷಕರು ಈ ರಿಯಾಲಿಟಿ ಶೋ ಅನ್ನು ಮೆಚ್ಚಿಕೊಂಡಿದ್ದನ್ನು ಸೂಚಿಸುತ್ತಿದೆ. ಜಾಗತಿಕವಾಗಿ ಯಶಸ್ವಿಯಾದ ಫಾರ್ಮ್ಯಾಟ್‌ಗಳನ್ನು ಭಾರತದ ವಿವಿಧ ಭಾಷೆ ಹಾಗೂ ಪ್ರೇಕ್ಷಕರಿಗೆ ಹೊಂದುವಂತೆ ರೂಪಿಸುವ ಎಂಡಮೋಲ್ ಶೈನ್ ಇಂಡಿಯಾ ಭಾರತದಲ್ಲಿ ‘ಬಿಗ್ ಬಾಸ್’ ಫ್ರಾಂಚೈಸಿಯನ್ನು ಅತ್ಯಂತ ಯಶಸ್ವಿಯಾಗಿ ರೂಪಿಸಿದೆ. ವಿವಿಧ ಮಾರುಕಟ್ಟೆಯಲ್ಲಿ ಎಂಟರ್‌ಟೈನ್‌ಮೆಂಟ್ ಫ್ರಾಂಚೈಸಿಯಾಗಿ ರೂಪಿಸಿರೋದು ವಿಶೇಷ.
ಪ್ರಸ್ತುತ ಜಿಯೋಹಾಟ್‌ಸ್ಟಾರ್‌ನಲ್ಲಿ ಹಲವು ಭಾಷೆಗಳ ವಿಭಾಗಗಳಲ್ಲಿ ‘ಬಿಗ್ ಬಾಸ್’ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಈ ಪ್ಯಾನ್-ಇಂಡಿಯಾ ಫ್ರಾಂಚೈಸಿಗಿರುವ ಅಸಾಧಾರಣ ಜನಪ್ರಿಯತೆಯನ್ನು ಇದು ಎತ್ತಿ ತೋರಿಸುತ್ತದೆ. ಈ ವರ್ಷ ಆರಂಭಗೊಂಡಿರುವ ‘ಬಿಗ್ ಬಾಸ್ ಸೌತ್ ಕಾರ್ನಿವಲ್’ ದಕ್ಷಿಣ ಭಾರತದ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸುತ್ತಿದೆ. ವಿಶೇಷವೆಂದರೆ, ನಾಲ್ಕು ಭಾಷೆಯಲ್ಲಿಯೂ ‘ಬಿಗ್ ಬಾಸ್’ ಕಾರ್ಯಕ್ರಮಗಳು ಒಂದೇ ದಿನ ಆರಂಭಗೊಂಡಿರೋದು ಕುತೂಹಲವನ್ನು ಮೂಡಿಸಿದೆ.
ಆಯಾ ಭಾಷೆಗಳ ‘ಬಿಗ್ ಬಾಸ್’ ಕಾರ್ಯಕ್ರಮಗಳ ಜನಪ್ರಿಯ ನಿರೂಪಕರಾದ ಕಿಚ್ಚ ಸುದೀಪ್ (ಕನ್ನಡ), ಮೋಹನ್‌ಲಾಲ್ (ಮಲಯಾಳಂ), ನಾಗಾರ್ಜುನ (ತೆಲುಗು) ಹಾಗೂ ವಿಜಯ್ ಸೇತುಪತಿ (ತಮಿಳು) ಇವರು ತಮ್ಮದೇ ವಿಭಿನ್ನ ಶೈಲಿಯ ಮೂಲಕ ಒಟ್ಟಿಗೆ ಕಾಣಿಸಿಕೊಂಡು, ಪರಸ್ಪರ ಶುಭಾಶಯ ಹೇಳಿದ್ದು, ‘ಬಿಗ್ ಬಾಸ್ ಸೌತ್ ಕಾರ್ನಿವಲ್’ನ ಭರ್ಜರಿ ಯಶಸ್ಸಿಗೆ ಕಾರಣವಾಗಿದೆ.




