ಬೆಂಗಳೂರು: ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಬ್ಯೂಟಿ ಅನು ಪ್ರಭಾಕರ್, ರಿತ್ವಿಕ್, ಮಹತಿ ಭಟ್ ಕಾಂಬಿನೇಷನ್‌ನಲ್ಲಿ ಹೊಸ ಧಾರಾವಾಹಿ ಆರಂಭವಾಗಿದೆ. ಅದುವೇ ‘ಗೌರಿಪುತ್ರ’ (Gowri Putra). ಜೀ ಕನ್ನಡದಲ್ಲಿ ಮೊದಲ ಸಂಚಿಕೆ ನವೆಂಬರ್ 16ರಿಂದ ಪ್ರಸಾರ ಆಗುತ್ತಿದೆ.
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನ ಕೌಟುಂಬಿಕ ಧಾರಾವಾಹಿಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿ ‘ಗೌರಿಪುತ್ರ’ವನ್ನು ವೀಕ್ಷಕರ ಮುಂದಿಟ್ಟಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿರೋ ಈ ಧಾರಾವಾಹಿ ತನ್ನ ತಾಯಿಗೆ ತಪ್ಪಿ ಹೋದ ತವರನ್ನು ಕೊಡಿಸುವುದಕ್ಕೆ ಹೋರಾಡುವ ಮಗನ ಕಥೆಯನ್ನು ಹೇಳುತ್ತಿದೆ.
ಕುಟುಂಬದ ಸಂಬಂಧಗಳು, ಪ್ರೀತಿ, ಭಾವನೆಗಳು ಮತ್ತು ಅನಿರೀಕ್ಷಿತ ತಿರುವುಗಳೊಂದಿಗೆ ಸಾಗುವ ಈ ‘ಗೌರಿಪುತ್ರ’ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಅಮ್ಮನನ್ನು ಅತಿಯಾಗಿ ಪ್ರೀತಿಸೋ ಕಾರ್ತಿಕ್‌ಗೆ (ರಿತ್ವಿಕ್) ತನ್ನ ತಾಯಿ ಗೌರಿ (ಅನು ಪ್ರಭಾಕರ್) ಅಂದರೆ ಪಂಚ ಪ್ರಾಣ. ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ತುಂಬು ಕುಟುಂಬದಲ್ಲಿ ಬೆಳೆದಿರುವ ಕಾರ್ತಿಕ್‌ಗೆ ತನ್ನ ತಾಯಿಯೇ ಪ್ರಪಂಚ. ಎಲ್ಲಾ ಐಶ್ವರ್ಯ, ಆಸ್ತಿ, ಅಂತಸ್ತು, ದೊಡ್ಡ ಕುಟುಂಬ ಹಾಗೂ ಹಲವು ಕಂಪನಿಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಗೌರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆದರೆ, ಇಷ್ಟೆಲ್ಲಾ ಇದ್ದರೂ ಆಕೆಯ ಮನಸ್ಸಿನಲ್ಲಿ ಸದಾ ಕಾಡುವ ವಿಷಯವೊಂದಿದೆ. ಅದು ಆಕೆಯ ತವರು ಮನೆ. ಅಣ್ಣನ ಪ್ರೀತಿ ಮತ್ತು ಒಡನಾಟ. ಮದುವೆಯಾಗಿ ವರ್ಷಗಳೇ ಕಳೆದರೂ ತವರಿನಿಂದ ದೂರವಾದ ನೋವು ಆಕೆಯ ಮನಸ್ಸಿನಲ್ಲಿದೆ. ಹೆಣ್ಣೊಬ್ಬಳಿಗೆ ಜೀವನದಲ್ಲಿ ಎಲ್ಲವೂ ಇದ್ದರೂ, ತನ್ನ ತವರು ಮನೆ ಮತ್ತು ಅಲ್ಲಿನ ಸಂಬಂಧಗಳ ಪ್ರೀತಿ ಇಲ್ಲದಿದ್ದಾಗ ಆಗುವ ಭಾವನಾತ್ಮಕ ತೊಳಲಾಟವನ್ನು ಈ ಕಥೆ ತೆರೆದಿಡುತ್ತದೆ.
ಈಗಾಗಲೇ ಮೊದಲ ಸಂಚಿಕೆ ಕಂಡಿರೋ ‘ಗೌರಿಪುತ್ರ’ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ಸಂಚಿಕೆಯಲ್ಲಿಯೇ ‘ಗೌರಿ’ (ಅನು ಪ್ರಭಾಕರ್) ಎಷ್ಟು ಪವರ್‌ಫುಲ್ ಅನ್ನೋದನ್ನು ತೋರಿಸಿಕೊಟ್ಟಿದ್ದಾಗಿದೆ. ಆಕೆಯ ಧೈರ್ಯ, ಖಡಕ್ ಸ್ವಭಾವವನ್ನು ಪರಿಚಯಿಸಿದ್ದಾಗಿದೆ. ಇನ್ನು ಗೌರಿಯ ಪುತ್ರ (ರಿತ್ವಿಕ್) ತಾಯಿಗೋಸ್ಕರ ಎಂತಹವ್ರನ್ನೂ ಎದುರಾಕಿಕೊಳ್ಳುತ್ತಾನೆ ಅನ್ನೋದು ಮಾಸ್ ಎಂಟ್ರಿ ಮೂಲಕ ವೀಕ್ಷಕರ ಮುಂದೆ ತರಲಾಗಿದೆ. ಮೊದಲ ಸಂಚಿಕೆಗೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಗೌರಿಯ ಜೊತೆಗೆ ಆಕೆಯ ಪುತ್ರ ಟ್ರ್ಯಾಕ್ ಕೂಡ ಇಂಟ್ರೆಸ್ಟಿಂಗ್ ಆಗಿದೆ. ತಾಯಿಯ ಈ ಅಂತರಾಳದ ನೋವನ್ನು ಅರಿತು, ಆಕೆಗೆ ಮತ್ತೆ ತವರಿನ ಪ್ರೀತಿ ಮತ್ತು ಸಂಬಂಧಗಳನ್ನು ಮರಳಿ ಕೊಡಿಸಬೇಕೆಂಬ ಹಂಬಲದಿಂದ ಮಗ ಕಾರ್ತಿಕ್ ಹೊರಡುತ್ತಾನೆ. ಆದರೆ, ಅಮ್ಮನಿಗೆ ತವರನ್ನು ಕೊಡಿಸುವ ಈ ಪ್ರಯಾಣದಲ್ಲಿ ‘ಮದುವೆ’ ಎಂಬ ಅನಿರೀಕ್ಷಿತ ಕವಲುದಾರಿ ಕಾರ್ತಿಕ್‌ನ ಬದುಕಿಗೆ ಅಡ್ಡಿಯಾಗುತ್ತದೆ. ಈ ಅಡ್ಡಿಗಳನ್ನು ಆತ ಹೇಗೆ ಎದುರಿಸುತ್ತಾನೆ? ತನ್ನ ತಾಯಿಯ ಬಹುದಿನಗಳ ಆಸೆಯನ್ನು ಈಡೇರಿಸಿ ಆಕೆಗೆ ತವರಿನ ಪ್ರೀತಿಯನ್ನು ಮರಳಿ ಕೊಡಿಸಲು ಸಾಧ್ಯವಾಗುತ್ತದೆಯೇ? ಎಂಬುದೇ ‘ಗೌರಿಪುತ್ರ’ ಧಾರಾವಾಹಿಯ ಕಥಾಸಾರ.
ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ಕಲಾವಿದರ ದೊಡ್ಡ ತಾರಾಗಣವೇ ಇದೆ. ಕನ್ನಡ ಚಿತ್ರರಂಗದ ಅನುಭವಿ ನಟಿ ಅನು ಪ್ರಭಾಕರ್, ರಿತ್ವಿಕ್ ಮತ್ತು ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಹಿರಿಯ ನಟ ರಮೇಶ್ ಭಟ್, ರಾಜೇಂದ್ರ ಕಾರಂತ್ ಜೊತೆ ಕಿರುತೆರೆಯ ಹಲವು ಜನಪ್ರಿಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
“ಕೌಟುಂಬಿಕ ಕಥೆಗಳು ಯಾವಾಗಲೂ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿವೆ. ಕುಟುಂಬದ ಭಾವನೆಗಳು, ಸಂಬಂಧಗಳ ಬೆಸುಗೆ ಇಂತಹ ಕಥೆಗಳಲ್ಲಿ ಪ್ರೇಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಕಾಣುತ್ತಾರೆ. ‘ಗೌರಿಪುತ್ರ’ ಕೂಡ ಅಂತಹದ್ದೇ ಒಂದು ಭಾವನಾತ್ಮಕ ಕಥೆ. ಅದರಲ್ಲೂ ತಾಯಿ ಮತ್ತು ಮಗನ ನಡುವಿನ ಬಾಂಧವ್ಯ, ತಾಯಿಯ ಆಸೆಯನ್ನು ಈಡೇರಿಸಲು ಮಗ ಪಡುವ ಪ್ರಯತ್ನ ಹಾಗೂ ಅದರ ಸುತ್ತ ಹೆಣೆದಿರುವ ಕುಟುಂಬದ ಭಾವನೆಗಳು ಈ ಧಾರಾವಾಹಿಯ ವಿಶೇಷತೆ.” ಎಂದು ದೀಪಕ್ ಶ್ರೀರಾಮುಲು, ಬಿಸಿನೆಸ್ ಹೆಡ್, ಜೀ ಕನ್ನಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




