Anirudh Ravichander Kavya Maran Wedding: ಭಾರತೀಯ ಚಿತ್ರರಂಗದ ಸ್ಟಾರ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಹಾಗೂ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಗ್ರೀಸ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಚಿತ್ರರಂಗದಲ್ಲಿ ಗುಸುಗುಸು ಎದ್ದಿತ್ತು. ಆದರೆ, ಇಬ್ಬರೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೂ ಈ ಸುದ್ದಿ ನಿಜವಾಗಿದ್ದು, ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಜೋಡಿ ತಮಿಳು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿತ್ತು. ಇವರ ಆಮಂತ್ರಣ ಪತ್ರಿಕೆ ಕೂಡ ಗಮನ ಸೆಳೆದಿತ್ತು. ಇಂದು (ನವೆಂಬರ್ 11) ಗ್ರೀಸ್ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ವತ: ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅನಿರುದ್ಧ್-ಕಾವ್ಯಾ ಮದುವೆಯಲ್ಲಿ ರಜನಿಕಾಂತ್
ಐಪಿಎಲ್ ತಂಡ ಸನ್ ರೈಸರ್ಸ್ ಹೈದರಾಬಾದ್ನ ಒಡತಿಯಾಗಿರುವ ಕಾವ್ಯಾ ಮಾರನ್ಗೂ ಅಪಾರ ಅಭಿಮಾನಿಗಳಿದ್ದಾರೆ. ಐಪಿಎಲ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಾಗಲೆಲ್ಲ ಟ್ರೆಂಡಿಂಗ್ನಲ್ಲಿ ಇರುತ್ತಿದ್ದರು. ಹಾಗೇ ಅನಿರುದ್ಧ್ ರವಿಚಂದರ್ ಅವರ ಟ್ಯೂನ್ಗಳಿಗೆ ಫಿದಾ ಆಗದವರೇ ಇಲ್ಲ. ಈ ಜೋಡಿ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈ ವಿಷಯ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು.
ಇದನ್ನೂ ಓದಿ: Jailer 2 OTT: ಥಿಯೇಟರ್ ಅಬ್ಬರದ ಬೆನ್ನಲ್ಲೇ ಒಟಿಟಿಗೆ ‘ಜೈಲರ್ 2’; ರಜನಿ ಅಭಿಮಾನಿಗಳಿಗೆ ಸರ್ಪ್ರೈಸ್
ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ವಿವಾಹ ಸಮಾರಂಭದಲ್ಲಿ ತಮಿಳುನಾಡಿನ ಗಣ್ಯರು ಹಾಜರಿ ಹಾಕಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್, ಪತ್ನಿ ಲತಾ ರಜನಿಕಾಂತ್ ಗ್ರೀಸ್ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಗಣ್ಯರು ಬಂದಿದ್ದು, ಪಕ್ಕಾ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
https://www.instagram.com/p/Dfm6Au4DWer/?img_index=4
ಚೆನ್ನೈನಲ್ಲಿ ಆರತಕ್ಷತೆ
ಗ್ರೀಸ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿರುವ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಆರತಕ್ಷತೆ ಚೆನ್ನೈನಲ್ಲಿ ನಡೆಯಲಿದೆ. ಎನ್ಡಿಟಿವಿ ವರದಿ ಮಾಡಿದಂತೆ ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ರಿಸೆಪ್ಷನ್ಗೆ ವೇದಿಕೆ ಸಜ್ಜಾಗಿದೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. ಹಾಗೇ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಇವರೊಂದಿಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಗೂ ಆಹ್ವಾನ ನೀಡಿದ್ದು, ಆರತಕ್ಷತೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೇ ತಮಿಳು ಚಿತ್ರರಂಗ ಗಣ್ಯರು ಈ ಅದ್ಧೂರಿ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಾಶಯ ಕೋರಲಿದ್ದಾರೆ.




