Ananth Nag: ಚಂದನವನದ ಹಿರಿಯ ಹಾಗೂ ದಿಗ್ಗಜ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ (Dadasaheb Phalke Award) ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸರ್ಕಾರವು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ 2024ರ ಈ ಪ್ರತಿಷ್ಠಿತ ಪ್ರಶಸ್ತಿಗೆ ನಟ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಿದೆ. ಸೆಪ್ಟೆಂಬರ್ 22, 2026 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ನೀಡಲಾಗುವುದು.
ಅನಂತ್ ನಾಗ್‌ಗೆ ಪ್ರಧಾನಿ ಮೋದಿ ಹಾಗೂ ಸಿಎಂ ಡಿಕೆಶಿ ಅಭಿನಂದನೆ
ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ. ಅನಂತ್ ನಾಗ್ ಅವರ ಸಹಜ ಅಭಿನಯ ಹಾಗೂ ಬಹುಮುಖಿ ಪ್ರತಿಭೆಯು ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಇದನ್ನೂ ಓದಿ:DEEWANA MOVIE: SRK ‘ದೀವಾನಾ’ ಚಿತ್ರದ ಸೂಪರ್ ಹಿಟ್ ಹಾಡಿನ ಹಿಂದಿದೆ ಕನ್ನಡದ ಲಿಂಕ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅಭಿನಂದನೆ ಸಲ್ಲಿಸಿದ್ದು, “ಕನ್ನಡ ಚಿತ್ರರಂಗದ ಗರಿಮೆ, ಮೇರು ನಟ ಶ್ರೀ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ -2024’ ಲಭಿಸಿರುವುದು ಸಮಸ್ತ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ಕ್ಷಣ. ತಮ್ಮ ನೈಜ ನಟನೆ, ಸಂಯಮ ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಭಾರತೀಯ ಕಲಾರಂಗವನ್ನು ಶ್ರೀಮಂತಗೊಳಿಸಿದ ಅನಂತ್ ನಾಗ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮಹಾನ್ ಮನ್ನಣೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರ್ಷಗಳ ನಂತರ ಕನ್ನಡದ ನಟನೊಬ್ಬನಿಗೆ ಈ ಗೌರವ ಸಿಕ್ಕಿರುವುದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಬರೆದಿಡುವಂತಹ ಮೈಲಿಗಲ್ಲಾಗಿದೆ.
300ಕ್ಕೂ ಹೆಚ್ಚು ಸಿನಿಮಾಗಳು, ಪದ್ಮಭೂಷಣ ಗೌರವ: ಡಾ. ರಾಜ್‌ಕುಮಾರ್ ನಂತರ ಮತ್ತೊಬ್ಬ ಕನ್ನಡಿಗ
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನಂತ್ ನಾಗ್ ಅವರು 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಖ್ಯಾತ ‘ಮಾಲ್ಗುಡಿ ಡೇಸ್’ ಧಾರಾವಾಹಿ ಸೇರಿದಂತೆ ರಂಗಭೂಮಿ ಹಾಗೂ ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ಇವರಿಗೆ 5 ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಒಲಿದಿದೆ.
2025ರಲ್ಲಿ ಕೇಂದ್ರ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸುಮಾರು 30 ವರ್ಷಗಳ ಹಿಂದೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರಿಗೆ ಲಭಿಸಿದ್ದ ಈ ಅತ್ಯುನ್ನತ ಫಾಲ್ಕೆ ಗೌರವ, ಇದೀಗ ಅನಂತ್ ನಾಗ್ ಅವರ ಪಾಲಾಗಿದೆ.




