☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

DK SHIVAKUMAR: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸಿ – ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ

Image of DK Shivakumar
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಧಾನಮಂತ್ರಿ ಮೋದಿಗೆ ಅವರಿಗೆ ಪತ್ರ

ಮುಖ್ಯಾಂಶಗಳು

  • ಮೋದಿಗೆ ಎರಡನೇ ಪತ್ರ ಬರೆದ ಸಿಎಂ
  • ಕಬ್ಬು ಬೆಳೆಗಾರರ ನೆರವಿಗೆ ಬನ್ನಿ
  • ನಮೋ ಸಿಎಂ ಡಿಕೆ ಮನವಿ

ಬೆಂಗಳೂರು: ಕರ್ನಾಟಕದ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಸಿಗುವಂತೆ ಮಾಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಧಾನಮಂತ್ರಿ ಮೋದಿಗೆ ಅವರಿಗೆ ಪತ್ರ ಬರೆದು ವೈಯಕ್ತಿಕ ಮಧ್ಯಪ್ರವೇಶಕ್ಕೆ ಕೋರಿದ್ದಾರೆ. ರಾಜ್ಯದ ರೈತರು ಮತ್ತು ಸಕ್ಕರೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು 2019ರ ಫೆಬ್ರವರಿಯಿಂದ 31 ರೂಪಾಯಿಯಲ್ಲೇ ಉಳಿಸಿರುವುದನ್ನು ಪರಿಷ್ಕರಿಸುವುದು, ಎಥೆನಾಲ್ ನಿರ್ದೇಶನವನ್ನು ಮರುಪರಿಶೀಲಿಸುವುದು, ಎಫ್‌ಆರ್‌ಪಿ ಮೂಲ ಚೇತರಿಕೆ ದರವನ್ನು 9.5ಕ್ಕೆ ಮರಳಿಸುವುದು ಸೇರಿದಂತೆ ಐದು ಪ್ರಮುಖ ಬೇಡಿಕೆಗಳನ್ನು ಪತ್ರದಲ್ಲಿ ಮುಂದಿಡಲಾಗಿದೆ.

ಸಕ್ಕರೆ ಎಂ.ಎಸ್.ಬಿ ಏರಿಕೆ ಮಾಡಿ ..!

ಎಫ್‌ಆರ್‌ಪಿ 2750 ರೂಪಾಯಿಯಿಂದ 3650 ರೂಪಾಯಿಗೆ ಏರಿದ್ದರೂ ಸಕ್ಕರೆ ಬೆಲೆ ಏರಿಕೆಯಾಗಿಲ್ಲ. ಸದ್ಯ ಸಕ್ಕರೆ ಸುಮಾರು 45 ರೂಪಾಯಿಗೆ ಮಾರಾಟವಾಗುತ್ತಿರುವುದರಿಂದ ಎಂಎಸ್‌ಪಿ ಏರಿಸಿದರೂ ಗ್ರಾಹಕರಿಗೆ ಹೊರೆ ಬೀಳುವುದಿಲ್ಲ ಎಂಬುದು ರಾಜ್ಯದ ವಾದ. ಅಕ್ಟೋಬರ್ 22, 2026ರ ನಿರ್ದೇಶನದಂತೆ ಕಬ್ಬಿನ ರಸ, ಸಿರಪ್ ಮತ್ತು ಬಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್ ತಯಾರಿಗೆ ನಿರ್ಬಂಧ ವಿಧಿಸಿರುವುದನ್ನು 2027ರ ಫೆಬ್ರವರಿ ಬೆಳೆ ಅಂದಾಜಿನ ನಂತರ ಮರುಪರಿಶೀಲಿಸಬೇಕು. ಜೊತೆಗೆ 2022-23ರಿಂದ ಏರಿಕೆಯಾಗದ ಕಬ್ಬು ಆಧಾರಿತ ಎಥೆನಾಲ್ ಬೆಲೆಯನ್ನು ಪರಿಷ್ಕರಿಸಬೇಕು. 2025-26ರಲ್ಲಿ ರಾಜ್ಯದ ಕಬ್ಬು ಆಧಾರಿತ ಡಿಸ್ಟಿಲರಿಗಳು ಎಥೆನಾಲ್‌ನಿಂದ 5803.7 ಕೋಟಿ ರೂಪಾಯಿ ಗಳಿಸಿದ್ದು, ಇದರಿಂದ ಕಾರ್ಖಾನೆಗಳು 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸಲು ಸಾಧ್ಯವಾಗಿದೆ. ಗೃಹ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ಎಂಎಸ್‌ಪಿ, ಎಥೆನಾಲ್ ಮತ್ತು ಸಹ-ಉತ್ಪಾದನಾ ಆದಾಯವನ್ನು ಆದಾಯ ಹಂಚಿಕೆ ಸೂತ್ರದಲ್ಲಿ ಸೇರಿಸುವುದು ಮತ್ತು ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸುವುದು ಇತರ ಬೇಡಿಕೆಗಳಾಗಿವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 81 ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಸೇತುವೆ ಬಳಕೆಯಾಗುತ್ತಿದ್ದು, ಪ್ರಯೋಗಾಲಯಗಳನ್ನು ತಿಂಗಳಿಗೆ ಎರಡು ಬಾರಿ ಪರಿಶೀಲಿಸಲಾಗುತ್ತಿದೆ. 2025-26ರಲ್ಲಿ ಸರಾಸರಿ ಸಕ್ಕರೆ ಚೇತರಿಕೆ 11.09ಕ್ಕೆ ತಲುಪಿದ್ದು, ಶೇಕಡಾ 99.85ರಷ್ಟು ಕಬ್ಬಿನ ಬಾಕಿ ಪಾವತಿಯಾಗಿದೆ.

ಇದನ್ನೂ ಓದಿ : ಮೋದಿ ಬಳಸಿದ ಪದ ‘ದಿಮಾಗಿ ನಕ್ಸಲರ’ ಬಗ್ಗೆ ಸರ್ಕಾರದ ಬಳಿಯೇ ವ್ಯಾಖ್ಯಾನವಿಲ್ಲ

ಕಬ್ಬು ಅರೆಯುವ ಋತು ಈಗಾಗಲೇ ವಿಳಂಬವಾಗಿರುವ ಹೊತ್ತಿನಲ್ಲಿ ರಾಜ್ಯದ ಈ ಮನವಿಗೆ ವಿಶೇಷ ಮಹತ್ವ ಬಂದಿದೆ. ಕೇವಲ ಬೆಲೆ ಏರಿಕೆ ಮಾತ್ರವಲ್ಲ, ಇಡೀ ಸಕ್ಕರೆ ಉದ್ಯಮದ ಸುಸ್ಥಿರತೆಗಾಗಿ ಕೇಂದ್ರ ಸರ್ಕಾರ ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಎಥೆನಾಲ್ ನಿರ್ಬಂಧದಿಂದ ಕಾರ್ಖಾನೆಗಳ ಆದಾಯ ಕುಸಿದರೆ ಅದು ನೇರವಾಗಿ ರೈತರ ಪಾವತಿಯ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಚೇತರಿಕೆ ಇರುವ ಪ್ರದೇಶಗಳ ರೈತರು ಮಣ್ಣು ಮತ್ತು ಹವಾಮಾನದ ಕಾರಣದಿಂದ ಅನ್ಯಾಯಕ್ಕೊಳಗಾಗಬಾರದು ಎಂಬುದು ರಾಜ್ಯದ ಕಾಳಜಿ. ನೀತಿ ಆಯೋಗ್ ಮತ್ತು ಸಿಎಸಿಪಿ ಶಿಫಾರಸು ಮಾಡಿರುವಂತೆ ಆದಾಯ ಹಂಚಿಕೆ ಸೂತ್ರವನ್ನು ಬದಲಾಯಿಸಿದರೆ ಮಾತ್ರ ರೈತರಿಗೆ ಉದ್ಯಮದ ನಿಜವಾದ ಲಾಭ ಸಿಗಲು ಸಾಧ್ಯ. ಕೇಂದ್ರ ಸರ್ಕಾರ ಈ ಬೇಡಿಕೆಗಳನ್ನು ಕೇವಲ ರಾಜ್ಯದ ಬೇಡಿಕೆ ಎಂದು ನೋಡದೆ ದೇಶದ ಸಕ್ಕರೆ ನೀತಿಯ ಸುಧಾರಣೆಯ ದೃಷ್ಟಿಯಿಂದ ಪರಿಗಣಿಸಬೇಕಾಗಿದೆ ಎಂದು ಈ ಪತ್ರದಲ್ಲಿ ಸಿಎಂ ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.