ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಹಬ್ಬ ಎಂದೇ ಗುರುತಿಸಿಕೊಂಡಿರುವ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್-2026’ರ (Zee Kannada Kutumba Awards 2026) ಸಂಭ್ರಮಕ್ಕೆ ದಿನಗಣನೆ ಮುಗಿದಿದೆ. ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಒಟ್ಟು ಮೂರು ದಿನಗಳ ಕಾಲ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಪ್ರತಿದಿನ ಸಂಜೆ 5:30ಕ್ಕೆ ತಾರೆಯರ ವೈಭವದ ‘ರೆಡ್ ಕಾರ್ಪೆಟ್’ ದೃಶ್ಯ ಪ್ರಸಾರವಾಗಲಿದೆ. ಆ ಬಳಿಕ ಸಂಜೆ 6:30ರಿಂದ ರಾತ್ರಿ 10:30ರವರೆಗೆ ಪ್ರಶಸ್ತಿ ಪ್ರದಾನ ಸಂಭ್ರಮ ಪ್ರೇಕ್ಷಕರ ಮನೆಮನ ತಲುಪಲಿದೆ.
ಕಿರುತೆರೆ ಹಾಗೂ ಬೆಳ್ಳಿ ಪರದೆಯ ಪ್ರಮುಖ ತಾರೆಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳ್ಳುತ್ತಿರುವುದು ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 80ಕ್ಕೂ ಹೆಚ್ಚಿನ ವಿವಿಧ ವಿಭಾಗಗಳಲ್ಲಿ ಸಾಧಕರನ್ನು ಗೌರವಿಸಲಾಗುತ್ತಿದೆ.
80ಕ್ಕೂ ಹೆಚ್ಚು ವಿಭಾಗಗಳಲ್ಲಿ ಸನ್ಮಾನ; ತಾರಾ ಮೆರುಗು
ನೆಚ್ಚಿನ ನಟ, ನಟಿ, ಜೋಡಿ, ಶೋ ಹಾಗೂ ನಿರೂಪಕರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತದೆ. ಇದರ ಜೊತೆಗೆ ತೆರೆಮರೆಯಲ್ಲಿ ಶ್ರಮಿಸುವ ತಂತ್ರಜ್ಞರು ಹಾಗೂ ಸಮಾಜದ ಸಾಮಾನ್ಯ ಸಾಧಕರನ್ನೂ ಸನ್ಮಾನಿಸಲಾಗುತ್ತಿದೆ.
ಈ ಸಂಭ್ರಮಕ್ಕೆ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ಶ್ರೀಮುರಳಿ, ಶರಣ್, ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಅನೇಕ ದಿಗ್ಗಜ ನಟ-ನಟಿಯರು ಆಗಮಿಸಲಿದ್ದಾರೆ. ಪ್ರಸಿದ್ಧ ನಿರೂಪಕರಾದ ಅಕುಲ್ ಬಾಲಾಜಿ, ಅನುಶ್ರೀ, ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ತಮ್ಮ ಶೈಲಿಯಲ್ಲಿ ವೀಕ್ಷಕರನ್ನು ರಂಜಿಸಲಿದ್ದಾರೆ.
ರಾಜ್ಯಾದ್ಯಂತ ಇರುವ ವೀಕ್ಷಕರನ್ನು ಭಾಗವಾಗಿಸಲು ಜೀ ಕನ್ನಡ ವಾಹಿನಿಯು ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ವಿಶೇಷ ‘ಕ್ಯಾಂಟರ್ ಅಭಿಯಾನ’ ನಡೆಸಿತ್ತು. ಈ ಮೂಲಕ ಲಕ್ಷಾಂತರ ವೀಕ್ಷಕರು ತಮ್ಮ ನೆಚ್ಚಿನ ಕಲಾವಿದರಿಗೆ ವೋಟ್ ಮಾಡುವ ಅವಕಾಶ ಪಡೆದುಕೊಂಡಿದ್ದರು.
Zee Kannada Kutumba Awards 2026: ಪ್ರೇಕ್ಷಕರ ಪ್ರೀತಿಯೇ ನಮ್ಮ ಬೆಳವಣಿಗೆಯ ಶಕ್ತಿ
‘ನಮ್ಮ ವಾಹಿನಿಗೆ ವೀಕ್ಷಕರು ನೀಡುತ್ತಿರುವ ನಿರಂತರ ಪ್ರೀತಿಯೇ ನಮ್ಮ ಬೆಳವಣಿಗೆಯ ಶಕ್ತಿ’ ಎಂದು ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ತಿಳಿಸಿದ್ದಾರೆ. ಇದು ಕೇವಲ ಪ್ರಶಸ್ತಿ ನೀಡುವ ಕಾರ್ಯಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ಪ್ರೇಕ್ಷಕರ ಮನೆಗೆದ್ದ ಕಲಾವಿದರು, ತಂತ್ರಜ್ಞರು ಹಾಗೂ ಅವರ ಪರಿಶ್ರಮವನ್ನು ಕೊಂಡಾಡುವ ವೇದಿಕೆ ಇದಾಗಿದೆ. ಈ ಬಾರಿಯೂ ಬೆಳ್ಳಿಪರದೆ ಹಾಗೂ ಕಿರುತೆರೆಯ ತಾರೆಗಳು ಒಂದಾಗಿ ಅದ್ಧೂರಿ ಮನರಂಜನೆ ನೀಡಲಿದ್ದಾರೆ ಎಂದು ಅವರು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪ್ರತಿದಿನ ಸಂಜೆ 6:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಅದ್ಧೂರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವೀಕ್ಷಿಸಬಹುದು. ವೀಕ್ಷಕರು ಈ ಮನರಂಜನಾ ಹಬ್ಬಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.




