☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115
☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115

SIR : ಸಂವಿಧಾನ ರಕ್ಷಣೆಗೆ ಬನ್ನಿ, ಲಾಠಿಗೆ ಹೆದರಬೇಡಿ: ರಾಹುಲ್ ಗಾಂಧಿ

Image of Rahul Gandhi about SIR
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ಅಕ್ರಮ ವಿರುದ್ಧ ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಚಲೋ ದೆಹಲಿ

ಮುಖ್ಯಾಂಶಗಳು

  • ದೇಶ ಉಳಿಸುವ ಕರೆಕೊಟ್ಟ ರಾಗಾ
  • ಲಾಠಿ ಏಟಿಗೆ ಹೆದರಬೇಡಿ ಎಂದಿದ್ದೇಕೆ..?

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ಅಕ್ರಮ ನಡೆದಿದೆ ಎಂಬ ಆರೋಪದ ವಿರುದ್ಧ ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಚಲೋ ದೆಹಲಿ ರಾಮಲೀಲಾ ಮಾರ್ಚ್‌ನಲ್ಲಿ ಪಾಲ್ಗೊಳ್ಳುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನರಿಗೆ ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು, ಮತಗಳ್ಳತನ ತಡೆಯಲು ಮತ್ತು ಸಂವಿಧಾನ ರಕ್ಷಿಸಲು ಈ ಮೆರವಣಿಗೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವವರು ಪೊಲೀಸರು ಅಥವಾ ಲಾಠಿ ಏಟಿನ ಬಗ್ಗೆ ಭಯಪಡಬೇಕಿಲ್ಲ, ಬಿಜೆಪಿ ಯಾವುದೇ ಅಡ್ಡಿ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ನೀಡಿರುವ ಅವರು, ಪ್ರಧಾನಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಅಸಮಾಧಾನ ಹೊಂದಿರುವವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಬಯಸುವವರು ಎಲ್ಲರೂ ಬರಬೇಕು ಎಂದು ಮನವಿ ಮಾಡಿದ್ದಾರೆ.

ಭಾರತದ ಆತ್ಮವನ್ನು ಉಳಿಸುವ ಹೋರಾಟ..?

ಇದು ಯಾವುದೇ ಒಂದು ರಾಜಕೀಯ ಪಕ್ಷದ ಮೆರವಣಿಗೆಯಲ್ಲ, ಭಾರತದ ಆತ್ಮವನ್ನು ಉಳಿಸುವ ಹೋರಾಟ, ದೇಶದ ಪ್ರತಿಭಟನೆ ಎಂದು ಅವರು ಬಣ್ಣಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ತಮ್ಮ ರಾಜಕೀಯ ನಿಲುವುಗಳನ್ನು ಬದಿಗಿಟ್ಟು, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ಆಲೋಚನೆಗಳು ಮತ್ತು ದೇಶದ ಮೇಲೆ ದಾಳಿ ನಡೆಯುತ್ತಿದೆ ಎಂದು ಅನಿಸಿದರೆ ಬಂದು ಸೇರಬೇಕು ಎಂದು ಅವರು ಕೋರಿದ್ದಾರೆ. ಈ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಮಲೀಲಾ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಸಭೆಯ ಬಳಿಕ ಪ್ರತಿಭಟನಾಕಾರರು ಜಂತರ್ ಮಂತರ್ ಸೇರಿದಂತೆ ನಿರ್ಬಂಧಿತ ಪ್ರದೇಶಗಳತ್ತ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದ ಅಧಿಕೃತ ಮಾನ್ಯತೆಯನ್ನು ಹಿಂಪಡೆಯಲಾಗಿದ್ದು, ನಗರದ ಇತರ ಮೂರು ಸ್ಥಳಗಳನ್ನು ಪ್ರತಿಭಟನೆಗೆ ನಿಗದಿಪಡಿಸಲಾಗಿದೆ. ದೆಹಲಿ ಮತ್ತು ಇತರ ರಾಜ್ಯಗಳಿಂದ 40 ಸಾವಿರದಿಂದ 50 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, 12 ಎಕರೆ ವಿಸ್ತೀರ್ಣದ ಮೈದಾನದಲ್ಲಿ ಎಂಟು ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ. ಒಂದು ದ್ವಾರವನ್ನು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರಿಗೆ, ಮತ್ತೊಂದು ದ್ವಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮೀಸಲಿಡಲಾಗಿದೆ.

ಇದನ್ನೂ ಓದಿ : ಸ್ಟಿಂಗ್ ವಿಡಿಯೋ ಕೇಸ್ ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಈ ಮೆರವಣಿಗೆ ಕೇವಲ ಎಸ್‌ಐಆರ್ ವಿರುದ್ಧದ ಪ್ರತಿಭಟನೆಯಾಗಿ ಉಳಿಯದೆ, ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಪ್ರಜಾಪ್ರಭುತ್ವದ ಮೂಲಭೂತ ವ್ಯವಸ್ಥೆಯ ಬಗ್ಗೆಯೇ ದೊಡ್ಡ ಪ್ರಶ್ನೆಯಾಗಿ ಬಿಂಬಿಸಲು ಕಾಂಗ್ರೆಸ್ ಯತ್ನವಾಗಿದೆ. ರಾಹುಲ್ ಗಾಂಧಿ ಅವರು ಲಾಠಿ ಏಟಿನ ಬಗ್ಗೆ ಚಿಂತಿಸಬೇಡಿ ಎಂದು ಹೇಳಿರುವುದು ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಪ್ರಯತ್ನವಾದರೂ, ಅದೇ ಮಾತು ಪ್ರತಿಭಟನೆ ಹಿಂಸಾತ್ಮಕವಾಗಬಹುದು ಎಂಬ ಆತಂಕಕ್ಕೂ ಕಾರಣವಾಗುತ್ತಿದೆ. ಮತ್ತೊಂದೆಡೆ ಪೊಲೀಸರು ಈಗಾಗಲೇ ಭಾರೀ ಭದ್ರತೆ ಕೈಗೊಂಡಿರುವುದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಮುಖಾಮುಖಿಯನ್ನು ಸೂಚಿಸುತ್ತಿದೆ. ವಿದ್ಯಾರ್ಥಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಿರುವುದು ಈ ಹೋರಾಟಕ್ಕೆ ಯುವ ಸಮುದಾಯದ ಬೆಂಬಲ ಪಡೆಯುವ ತಂತ್ರವಾಗಿದ್ದು, ಇದರಿಂದ ಪ್ರತಿಭಟನೆಯ ವ್ಯಾಪ್ತಿ ವಿಸ್ತರಿಸಬಹುದು. ಆದರೆ ಬೇಡಿಕೆ ಈಡೇರದಿದ್ದರೆ ಈ ಹೋರಾಟ ಕೇವಲ ಒಂದು ದಿನದ ಸಾಂಕೇತಿಕ ಪ್ರದರ್ಶನವಾಗಿ ಉಳಿಯುವ ಸಾಧ್ಯತೆಯೂ ಇದೆ. ನವೆಂಬರ್ 1ರ ಜನಸಂಖ್ಯೆ ಮತ್ತು ಪ್ರತಿಭಟನೆಯ ಶಾಂತಿಯುತ ಸ್ವರೂಪವೇ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ.