ಬೆಂಗಳೂರು: ಸಿದ್ದರಾಮಯ್ಯ (Siddaramaiah) ವಿರುದ್ಧದ ಸ್ಟಿಂಗ್ ವೀಡಿಯೋ ಕಟ್ಟುಕಥೆ, ಮಾರುವೇಷದ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆತಿದೆ. ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗ ತನಿಖೆ ಪೂರ್ಣಗೊಳಿಸಿ ಮಾಜಿ ಮುಖ್ಯಮಂತ್ರಿಗಳ ಮೇಲಿನ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದ್ದ ಆ ವಿಡಿಯೋದಲ್ಲಿ ಮಾಡಲಾಗಿದ್ದ ಲೈಂಗಿಕ ದೌರ್ಜನ್ಯದ ಆರೋಪ ಸಂಪೂರ್ಣ ಕಲ್ಪಿತ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೋಚರವಾಗಿದೆ. ಪ್ರಭಾವಿ ವ್ಯಕ್ತಿಗಳ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಪೂರ್ವ ಸಿದ್ಧತೆಯೊಂದಿಗೆ ಆ ಕಥೆಯನ್ನು ರೂಪಿಸಲಾಗಿತ್ತು ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.
ಮಹಿಳೆಯ ಆರೋಪಗಳು ಸುಳ್ಳು & ದುರುದ್ದೇಶದಿಂದ ಕೂಡಿವೆ
ವಿಡಿಯೋದಲ್ಲಿ ಕಂಡುಬಂದ ಎಲ್ಲರನ್ನೂ ಗುರುತಿಸಿ ವಿಶೇಷ ತನಿಖಾ ತಂಡ ಸುದೀರ್ಘ ವಿಚಾರಣೆ ನಡೆಸಿದೆ. ಕೆಲವರನ್ನು ಪದೇ ಪದೇ ಕರೆದು ಹೇಳಿಕೆ ಪಡೆದಿದೆ. ಸಿಕ್ಕಿದ ಸಾಕ್ಷ್ಯ ಹಾಗೂ ಹೇಳಿಕೆಗಳ ಆಧಾರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಹೆಸರಿಸಲಾಗಿದ್ದ ಪ್ರಮುಖರ ಮೇಲಿನ ಆರೋಪಗಳು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿವೆ ಎಂದು ತಂಡ ಖಚಿತಪಡಿಸಿದೆ. 2011ರಲ್ಲಿ ನಡೆದಿದೆ ಎಂದು ಹೇಳಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ಸುಮಾರು ಹನ್ನೆರಡು ವರ್ಷಗಳ ಬಳಿಕ 2023ರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿರುವುದು ಗಮನಾರ್ಹ ಸಂಗತಿ. ಚಿತ್ರೀಕರಣಕ್ಕೆ ಬಳಸಿದ ಮೂಲ ಮೊಬೈಲನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವಿಡಿಯೋ ತಿದ್ದಲಾಗಿದೆಯೇ ಅಥವಾ ಕೃತಕವಾಗಿ ಸೃಷ್ಟಿಸಲಾಗಿದೆಯೇ ಎಂಬುದರ ವರದಿ ನಿರೀಕ್ಷೆಯಲ್ಲಿದೆ. 2023ರಿಂದ 2026ರ ಸೆಪ್ಟೆಂಬರ್ ಅಕ್ಟೋಬರ್ ವರೆಗೆ ವಿಡಿಯೋ ಯಾರ ಬಳಿ ಇತ್ತು, ಹೇಗೆ ಹರಡಿತು ಎಂಬ ಸರಪಳಿಯನ್ನು ತಂಡ ಪರಿಶೀಲಿಸುತ್ತಿದೆ. ಆರೋಪಿಗಳು ಗುರುತು ಮರೆಮಾಚಲು ವಿ.ಪಿ.ಎನ್, ಸುಳ್ಳು ಐ.ಪಿ ವಿಳಾಸ ಮತ್ತು ನಕಲಿ ಮೊಬೈಲ್ ಸಂಖ್ಯೆ ಬಳಸಿದ್ದರು ಎನ್ನಲಾಗಿದೆ. ಬಂಧಿತ ವ್ಯಕ್ತಿ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಆಗಿದ್ದು ನವದೆಹಲಿಯಲ್ಲಿ ನೆಲೆಸಿದ್ದು ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ಶಂಕೆ ಇದೆ.
ಇದನ್ನೂ ಓದಿ : ಎಸ್‌ಐಆರ್ ಸರಿಯಾಗಿದೆ ಎಂದ ಸತೀಶ್ ಜಾರಕಿಹೊಳಿ – ಕಾಂಗ್ರೆಸ್‌ನಲ್ಲಿ ಭಿನ್ನಧ್ವನಿ
ಈ ಪ್ರಕರಣ ಕೇವಲ ಒಬ್ಬ ನಾಯಕನ ಮೇಲಿನ ಆರೋಪವಾಗಿ ಉಳಿಯದೆ ರಾಜಕೀಯ ಹೋರಾಟದಲ್ಲಿ ಸುಳ್ಳು ಸ್ಟಿಂಗ್ ಗಳನ್ನು ಅಸ್ತ್ರವನ್ನಾಗಿ ಬಳಸುವ ಅಪಾಯಕಾರಿ ಪ್ರವೃತ್ತಿಯನ್ನು ಬಿಚ್ಚಿಟ್ಟಿದೆ. ಸತ್ಯಾಂಶ ಪರಿಶೀಲನೆಗೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಇಂತಹ ದೃಶ್ಯಗಳು ಸಾರ್ವಜನಿಕ ಅಭಿಪ್ರಾಯವನ್ನು ತಪ್ಪು ದಿಕ್ಕಿಗೆ ಎಳೆಯುತ್ತವೆ. ತನಿಖಾ ಸಂಸ್ಥೆಗಳು ತಡವಾಗಿಯಾದರೂ ಸ್ಪಷ್ಟತೆ ನೀಡಿರುವುದು ರಾಜಕೀಯ ವಾತಾವರಣಕ್ಕೆ ಸಮಾಧಾನ ತಂದಿದೆ. ಆದರೆ ಈ ಹಿಂದೆ ಈ ವಿಡಿಯೋ ಹಂಚಿದವರು, ಹಬ್ಬಿಸಿದವರು ಹಾಗೂ ಅದರ ಹಿಂದಿನ ಸೂತ್ರಧಾರರ ವಿರುದ್ಧ ಕಠಿಣ ಕ್ರಮವಾಗದಿದ್ದರೆ ಇಂತಹ ಷಡ್ಯಂತ್ರಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಕಾನೂನು ಹಾಗೂ ತಂತ್ರಜ್ಞಾನದ ನೆರವಿನಿಂದ ಡಿಜಿಟಲ್ ಕುತಂತ್ರಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ವ್ಯವಸ್ಥೆ ಬಲಗೊಳ್ಳಬೇಕಾದ ಅಗತ್ಯ ಈ ಪ್ರಕರಣ ಮತ್ತೊಮ್ಮೆ ತೋರಿಸಿದೆ.




