☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ‘ವಾರದ ಕಥೆ ಕಿಚ್ಚನ ಜೊತೆ’ ಬದಲು ‘ವಾರದ ಜಗಳ, ಸ್ಪರ್ಧಿಗಳ ಜೊತೆ’ ಆಗುತ್ತಿದೆಯೇ? ಕಿಚ್ಚನ ಮಾತಿಗೂ ಬೆಲೆ ಇಲ್ಲವೇ?

Audience criticizing BBK 13 Varada Kathe should be called as Varda Jagala

ಬೆಂಗಳೂರು: ಕನ್ನಡ ಕಿರುತೆರೆಯ ದುಬಾರಿ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ಸೀಸನ್ 13 (BBK 13) ಇದೀಗ ಮತ್ತೊಮ್ಮೆ ವೀಕ್ಷಕರ ಚರ್ಚೆಗೆ ಗ್ರಾಸವಾಗಿದೆ. ಪ್ರತಿವಾರ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರ್ತಿರೋ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಾರೆ. ಆದರೆ, ಈ ಬಾರಿ ಕಾರ್ಯಕ್ರಮದ ಸ್ವರೂಪವೇ ಬದಲಾಗುತ್ತಿದೆಯೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡುತ್ತಿದೆ. ಅದಕ್ಕೆ ಕಾರಣಗಳೇನು ಅಂತ ನೋಡುವುದಾದರೇ.

ಮೊನ್ನೆ ಮಂಜು Vs ಯಶಸ್, ಇಂದು ಗಗನ್ Vs ಘನವಿ!

ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ, ವಾದ-ವಿವಾದಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಮಂಜು ಮತ್ತು ಯಶಸ್ ನಡುವೆ ಜೋರಾಗಿಯೇ ಸಂಘರ್ಷ ನಡೆದಿತ್ತು. ಇಂದು ಗಗನ್ ಮತ್ತು ಘನವಿ ನಡುವಿನ ಮಾತಿನ ಚಕಮಕಿ ವೀಕ್ಷಕರ ಗಮನ ಸೆಳೆಯುತ್ತಿದೆ.ಇದನ್ನು ನೋಡಿದರೆ ‘ವಾರದ ಕಥೆ ಕಿಚ್ಚನ ಜೊತೆ’ ಎನ್ನುವುದಕ್ಕಿಂತ ‘ವಾರದ ಕಥೆ ಸ್ಟರ್ಧಿಗಳ ಜೊತೆ’ ಅಂತ ಮಾಡೋದು ಒಳ್ಳೇದು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

2 ಗಂಟೆ ಅಲ್ಲ, 4 ಗಂಟೆ ಮಾಡಿದರೂ ಸಾಲಲ್ಲ!

ಬಿಗ್ ಬಾಸ್ ಮನೆಯಲ್ಲಿ ವಾರವಿಡೀ ನಡೆಯುವ ಜಗಳಗಳು, ಆರೋಪ-ಪ್ರತ್ಯಾರೋಪಗಳು, ವೈಯಕ್ತಿಕ ಟೀಕೆಗಳು ಹಾಗೂ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಚರ್ಚಿಸಲು ಎರಡು ಗಂಟೆಯ ಕಾರ್ಯಕ್ರಮ ಸಾಕಾಗುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ವಾರದ ಪಂಚಾಯಿತಿಯನ್ನು ನಾಲ್ಕು ಗಂಟೆ ಮಾಡಿದರೂ ಎಲ್ಲ ವಿಚಾರಗಳಿಗೂ ಉತ್ತರ ಸಿಗುವುದು ಕಷ್ಟ ಎಂಬುದು ವೀಕ್ಷಕರ ಅಭಿಪ್ರಾಯ.

ಆದರೆ ಇಲ್ಲಿ ಮುಖ್ಯವಾದ ಪ್ರಶ್ನೆ ಏನಪ್ಪ ಅಂದ್ರೆ, ಬಿಗ್ ಬಾಸ್ ಕಾರ್ಯಕ್ರಮ ಕೇವಲ ಜಗಳಗಳಿಗಾಗಿ ಮಾತ್ರವೇ? ಮನರಂಜನೆ, ಸ್ನೇಹ, ಮಾನವೀಯತೆ, ಒಗ್ಗಟ್ಟು ಮತ್ತು ಉತ್ತಮ ವ್ಯಕ್ತಿತ್ವ ಪ್ರದರ್ಶನಕ್ಕೆ ಇಲ್ಲಿ ಅವಕಾಶವಿಲ್ಲವೇ? ಎಂಬುವ ಗೊಂದಲದಲ್ಲಿ ವೀಕ್ಷಕರು ಇದ್ದಂತಿದೆ.

ಕಿಚ್ಚ ಬುದ್ಧಿಮಾತು ಯಾರಿಗೂ ಅರ್ಥವಾಗುತ್ತಿಲ್ಲವೇ?

ಕಿಚ್ಚ ಸುದೀಪ್ ಅವರು ಪ್ರತಿವಾರ ಸ್ಪರ್ಧಿಗಳ ತಪ್ಪುಗಳನ್ನು ಗುರುತಿಸಿ, ಅವರಿಗೆ ಸೂಕ್ತ ಸಲಹೆ ನೀಡುವ ಮೂಲಕ ಕಾರ್ಯಕ್ರಮವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಯಾವುದೇ ಸ್ಪರ್ಧಿಯಾಗಿರಲಿ, ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸುವುದು, ಸರಿಯಾದ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದು ಹಾಗೂ ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನಿಸುವುದು ಅವರ ನಿರೂಪಣೆಯ ವಿಶೇಷತೆ.
ಆದರೆ ಸುದೀಪ್ ಎಷ್ಟೇ ಬುದ್ಧಿಮಾತು ಹೇಳಿದರೂ ಮುಂದಿನ ವಾರ ಮತ್ತೆ ಅದೇ ರೀತಿಯ ವಾದ-ವಿವಾದಗಳು ನಡೆಯುತ್ತಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಸುದೀಪ್ ಹೇಳುವ ಮಾತುಗಳನ್ನು ಸ್ಪರ್ಧಿಗಳು ಕೇವಲ ಆ ಕ್ಷಣಕ್ಕೆ ಕೇಳಿ ಮರೆತುಬಿಡುತ್ತಿದ್ದಾರೆಯೇ? ಅಥವಾ ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರ ನೀಡಬೇಕಾದವರು ಸ್ಪರ್ಧಿಗಳೇ.

ಬಿಗ್ ಬಾಸ್ ಕನ್ನಡ ಎಂದರೆ ಕಿಚ್ಚ ಸುದೀಪ್!

ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ ಜನಪ್ರಿಯತೆಯಲ್ಲಿ ಕಿಚ್ಚ ಸುದೀಪ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಮಾತಿನ ಶೈಲಿ, ಸ್ಪರ್ಧಿಗಳನ್ನು ಪ್ರಶ್ನಿಸುವ ರೀತಿ, ಹಾಸ್ಯಪ್ರಜ್ಞೆ, ಗಂಭೀರ ಸಂದರ್ಭಗಳಲ್ಲಿ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹಾಗೂ ನಿರೂಪಣೆಯಲ್ಲಿನ ವಿಶೇಷ ವ್ಯಕ್ತಿತ್ವ ಕಾರ್ಯಕ್ರಮಕ್ಕೆ ತನ್ನದೇ ಆದ ಗುರುತನ್ನು ನೀಡಿದೆ. ಬಿಗ್ ಬಾಸ್ ಕನ್ನಡ ಎಂದರೆ ಸುದೀಪ್, ಸುದೀಪ್ ಎಂದರೆ ‘ವಾರದ ಕಥೆ ಕಿಚ್ಚನ ಜೊತೆ’ ಅನ್ನೋ ಮಟ್ಟಿಗೆ ಕಾರ್ಯಕ್ರಮ ಬೆಳೆದು ನಿಂತಿದೆ.

ಕೊನೆಯದಾಗಿ ವೀಕ್ಷಕರ ಪರವಾಗಿ ಒಂದಿಷ್ಟು ಪ್ರಶ್ನೆಗಳು

ಬಿಗ್ ಬಾಸ್ ಕನ್ನಡ 13ರಲ್ಲಿ ಕಿಚ್ಚ ಸುದೀಪ್ ಮಾತುಗಳು ಸ್ಪರ್ಧಿಗಳಿಗೆ ಯಾವಾಗ ಅರ್ಥ ಆಗುತ್ತೆ?

ಪ್ರತಿವಾರ ಜಗಳಗಳನ್ನೇ ನೋಡಬೇಕೇ? ಅಥವಾ ಮನರಂಜನೆಯನ್ನೂ ನಿರೀಕ್ಷಿಸಬಹುದೇ?

‘ವಾರದ ಕಥೆ ಕಿಚ್ಚನ ಜೊತೆ’ ತನ್ನ ನೈಜತೆಯನ್ನು ಉಳಿಸಿಕೊಳ್ಳುತ್ತದೆಯೇ?