☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Premada Oorali: ತುಮಕೂರು ಮಾರುತಿ ಚಿತ್ರಮಂದಿರದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ‘ಪ್ರೇಮದ ಊರಲಿ’!

Due heavy demand Tumkur Maruthi theater organised Premada Oorali special show on Sunday

ತುಮಕೂರು: ಓಟಿಟಿ (OTT) ಮುನ್ನೆಲೆಗೆ ಬಂದ ದಿನಗಳಿಂದ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಇಂತಹದ್ದೊಂದು ಆರೋಪವನ್ನು ಸಿನಿಮಾ ಮಂದಿ ಮಾಡುತ್ತಲೇ ಇದ್ದಾರೆ. ಆದರೆ, ಇಂತಹ ಸಮಯದಲ್ಲಿಯೂ ಸಿನಿ ಪ್ರಿಯರನ್ನು ಚಿತ್ರಮಂದಿರಕ್ಕೆ ಎಳೆಯುತ್ತಿರುವ ಸಿನಿಮಾ ‘ಪ್ರೇಮದ ಊರಲಿ’ (Premada Oorali). ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯುತ್ತಿರುವ ಸಿನಿಮಾಗಳ ಸಾಲಿನಲ್ಲಿ ‘ಪ್ರೇಮದ ಊರಲಿ’ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಕುಟುಂಬ ಸಮೇತ ಬಂದು ವೀಕ್ಷಿಸಬಹುದಾದ ಸದಭಿರುಚಿಯ ಕಥೆ, ಮನಮುಟ್ಟುವ ನಿರೂಪಣೆ ಹಾಗೂ ಪ್ರೇಕ್ಷಕರ ಭಾವನೆಗಳಿಗೆ ಹತ್ತಿರವಾಗುವ ಅಂಶಗಳಿಂದ ಈ ಸಿನಿಮಾ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ವಿಶೇಷವಾಗಿ ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಹೊಸ ದಾಖಲೆ ಬರೆಯುವತ್ತ ಮುನ್ನಡೆಯುತ್ತಿದೆ. ಚಿತ್ರಮಂದಿರದ ಮಾಲೀಕರಾದ ಗಣೇಶ್ ಸಿನಿಮಾದ ಬಗ್ಗೆ ಮಾತನಾಡುತ್ತಾ, “ಈ ಚಿತ್ರದ ಪ್ರತಿಕ್ರಿಯೆ ತಮಗೆ ಹಿಂದಿನ ಸುವರ್ಣ ಯುಗದ ಕನ್ನಡ ಸಿನಿಮಾಗಳನ್ನು ನೆನಪಿಸುತ್ತಿದೆ” ಎಂದು ಕಲ್ಟ್ ಕನ್ನಡಕ್ಕೆ ಹೇಳಿದ್ದಾರೆ.

ಗಣೇಶ್ ಅವರ ಪ್ರಕಾರ, ಹಿಂದೆ ಡಾ.ರಾಜ್‌ಕುಮಾರ್ ಅವರ ‘ಜೀವನ ಚೈತ್ರ’, ಡಾ.ವಿಷ್ಣುವರ್ಧನ್ ಅವರ ‘ಯಜಮಾನ’, ರವಿಚಂದ್ರನ್ ಅವರ ‘ರಾಮಾಚಾರಿ’, ಡಾ.ಶಿವರಾಜ್‌ಕುಮಾರ್ ಅವರ ‘ಜನುಮದ ಜೋಡಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಟ್ರ್ಯಾಕ್ಟರ್, ಟೆಂಪೋ, ಗಾಡಿಗಳಲ್ಲಿ ಗುಂಪು ಗುಂಪಾಗಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದ ದೃಶ್ಯಗಳನ್ನು ಕಂಡಿದ್ದೇವೆ. ಅದೇ ರೀತಿಯ ಪ್ರೇಕ್ಷಕರ ಉತ್ಸಾಹವನ್ನು ‘ಪ್ರೇಮದ ಊರಲಿ’ ಮತ್ತೊಮ್ಮೆ ನೆನಪಿಸುತ್ತಿದೆ ಎಂಬುದು ವಿಶೇಷ.” ಎನ್ನುತ್ತಾರೆ.

ಈ ನಡುವೆ ಮಾರುತಿ ಚಿತ್ರಮಂದಿರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾನುವಾರ ಬೆಳಗ್ಗೆ 7 ಗಂಟೆಯ ವಿಶೇಷ ಪ್ರದರ್ಶನಗಳನ್ನು ನೀಡಲಾಗುತ್ತಿದೆ. ಇದು ಸಿನಿಮಾದ ಕ್ರೇಜ್‌ಗೆ ಮತ್ತೊಂದು ಸಾಕ್ಷಿ. ಸಾಮಾನ್ಯವಾಗಿ ಬೆಳಗಿನ ಇಂತಹ ಪ್ರದರ್ಶನಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಸವಾಲಾಗಿರುವ ಸಂದರ್ಭದಲ್ಲಿ, ‘ಪ್ರೇಮದ ಊರಲಿ’ ಚಿತ್ರಕ್ಕೆ ಬೆಳಗ್ಗೆ 7 ಗಂಟೆಯ ಶೋ ನೀಡುವ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿರುವುದು ಹೊಸ ಆಶಾಭಾವನೆಯನ್ನು ಮೂಡಿಸಿದೆ.

ಇದು ಕೇವಲ ಚಿತ್ರತಂಡದ ಯಶಸ್ಸು ಮಾತ್ರವಲ್ಲ. ಜನರು ಈ ಸಿನಿಮಾ ಮತ್ತು ಮಾರುತಿ ಚಿತ್ರಮಂದಿರದ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ ಹಾಗೂ ನಂಬಿಕೆಯ ಪ್ರತೀಕವಾಗಿದೆ. ಚಿತ್ರ ನೋಡಲು ಮುಂಜಾನೆ 7 ಗಂಟೆಗೂ ಪ್ರೇಕ್ಷಕರು ಸಿದ್ಧರಾಗಿರುವುದು, ಸಿನಿಮಾ ಇನ್ನೂ ಜನರ ನಡುವೆ ಎಷ್ಟು ಚರ್ಚೆಯಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಈ ಸಿನಿಮಾದ ಜನಪ್ರಿಯತೆಗೆ ಮತ್ತೊಂದು ದೊಡ್ಡ ಸಾಕ್ಷಿ ಎಂದರೆ ಶುಕ್ರವಾರ ಬೆಳಗ್ಗಿನಿಂದ ಇಂದಿನ ರಾತ್ರಿ ಆಟದವರೆಗೂ ನಿರಂತರವಾಗಿ ಹೌಸ್‌ಫುಲ್ ಪ್ರದರ್ಶನಗಳು ನಡೆಯುತ್ತಿರುವುದು. ಮುಂದಿನ ದಿನಗಳ ಪ್ರದರ್ಶನಗಳಿಗೂ ಬೇಡಿಕೆ ಹೆಚ್ಚಾಗಿದ್ದು, ಪ್ರೇಕ್ಷಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.

ಇದಕ್ಕಿಂತಲೂ ವಿಶೇಷವಾದ ಸಂಗತಿಯೆಂದರೆ, 70–75 ವರ್ಷದ ಹಿರಿಯ ನಾಗರಿಕರು ಕೂಡ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುತ್ತಿದ್ದಾರೆ. ಕೆಲವರು, “ಇಷ್ಟು ವರ್ಷಗಳ ನಂತರ ಮತ್ತೆ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದೇವೆ” ಎಂದು ಹೇಳುತ್ತಿರುವುದು ‘ಪ್ರೇಮದ ಊರಲಿ’ ಚಿತ್ರವು ಪ್ರೇಕ್ಷಕರ ಮನಸ್ಸಿಗೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ತೋರಿಸುತ್ತದೆ.

ಇಂದಿನ OTT ಯುಗದಲ್ಲಿ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಅವಕಾಶವಿದೆ. ಇಂತಹ ಸಮಯದಲ್ಲೂ ಪ್ರೇಕ್ಷಕರಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಹುಚ್ಚನ್ನು ಮತ್ತೆ ಹುಟ್ಟಿಸಿರುವುದು ‘ಪ್ರೇಮದ ಊರಲಿ’ ಸಿನಿಮಾದ ದೊಡ್ಡ ಗೆಲುವು. ಇದು ಕೇವಲ ಒಂದು ಸಿನಿಮಾದ ಯಶಸ್ಸಲ್ಲ; ಚಿತ್ರಮಂದಿರ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಕ್ಕೂ ದೊರೆತ ಪ್ರೇಕ್ಷಕರ ಬೆಂಬಲವಾಗಿದೆ.

ಇಂತಹ ಸದಭಿರುಚಿಯ, ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಕನ್ನಡ ಚಿತ್ರಗಳು ವರ್ಷಕ್ಕೆ ನಾಲ್ಕೈದು ಬಂದರೂ ಸಾಕು, ಕನ್ನಡ ಚಿತ್ರರಂಗ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಒಂದು ಸಿನಿಮಾ ಯಶಸ್ವಿಯಾದರೆ ಅದರೊಂದಿಗೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಜೀವನವೂ ಚಿತ್ರರಂಗದ ಮೂಲಕ ಸಾಗುತ್ತದೆ. ಚಿತ್ರಮಂದಿರಗಳು ಉಳಿಯುತ್ತವೆ, ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಕನ್ನಡ ಚಿತ್ರರಂಗದ ಮೇಲಿನ ಪ್ರೇಕ್ಷಕರ ನಂಬಿಕೆ ಮತ್ತಷ್ಟು ಹೆಚ್ಚುತ್ತದೆ.

ಹೀಗಾಗಿ ‘ಪ್ರೇಮದ ಊರಲ್ಲಿ’ ಚಿತ್ರಕ್ಕೆ ಪ್ರೇಕ್ಷಕರು ನೀಡುತ್ತಿರುವ ಈ ಪ್ರೀತಿ ನಿಜಕ್ಕೂ ಅಭಿನಂದನಾರ್ಹ. ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ 3ನೇ ಶನಿವಾರ ಮತ್ತು ಭಾನುವಾರ ಬೆಳಗ್ಗೆ 7 ಗಂಟೆಯ ಶೋ ನಡೆಯುತ್ತಿರುವುದು, ಈ ಚಿತ್ರದ ಮೇಲಿನ ಪ್ರೇಕ್ಷಕರ ಅಭಿಮಾನಕ್ಕೆ ಹೊಸ ಉದಾಹರಣೆಯಾಗಿದೆ.

ಒಟ್ಟಿನಲ್ಲಿ, ‘ಪ್ರೇಮದ ಊರಲಿ’ ಕೇವಲ ಒಂದು ಸಿನಿಮಾ ಗೆಲ್ಲುತ್ತಿರುವ ಕಥೆಯಲ್ಲ; ಪ್ರೇಕ್ಷಕರು ಮತ್ತೆ ಚಿತ್ರಮಂದಿರದತ್ತ ಮುಖ ಮಾಡುತ್ತಿರುವ ಸಂಭ್ರಮದ ಕಥೆಯಾಗಿದೆ. ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ ಈ ಚಿತ್ರ, ರಾಜ್ಯದ ಹಲವು ಚಿತ್ರಮಂದಿರಗಳಲ್ಲೂ ದಾಖಲೆಗಳನ್ನು ಮುರಿಯುವತ್ತ ಸಾಗಲಿ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳ ಆಶಯ.