☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

DONALD TRUMP : ಫ್ಲೈದುಬೈ ಕಾಕ್ ಪಿಟ್ ದಾಳಿ ಹಿಂದೆ ಇರಾನ್ ಕೈವಾಡದ – ಟ್ರಂಪ್ ಶಂಕೆ

Image of Donald trump

ಅಮೆರಿಕ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ನಡೆದ ಚಾಕು ದಾಳಿ ಹಿಂದೆ ಇರಾನ್ ಲಿಂಕ್ ಇರುವ ಶಂಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ವ್ಯಕ್ತಪಡಿಸಿದ್ದಾರೆ. ದುಬೈನಿಂದ ಇಸ್ರೇಲ್ ನ ಟೆಲ್ ಅವೀವ್ ಗೆ 174ಕ್ಕೂ ಅಧಿಕ ಪ್ರಯಾಣಿಕರೊಂದಿಗೆ ಹೊರಟಿದ್ದ ಫ್ಲೈದುಬೈ ಸಂಸ್ಥೆಯ ಎಫ್ ಝೆಡ್ 1073 ವಿಮಾನದಲ್ಲಿ ಆಕಾಶದಲ್ಲೇ ದೊಡ್ಡ ದುರಂತ ತಪ್ಪಿದೆ. ಹಾರಾಟದ ಮಧ್ಯೆ ಓಮನ್ ಮೂಲದ ಸಹ-ಪೈಲಟ್ ನಿಯಂತ್ರಣ ವ್ಯವಸ್ಥೆಯನ್ನು ಜಾಮ್ ಮಾಡಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಅದನ್ನು ತಡೆಯಲು ಬಂದ ಭಾರತೀಯ ಮೂಲದ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದ ನಡುವೆಯೂ ಕ್ಯಾಪ್ಟನ್ ಸ್ಮಿತ್ ಅವರು ಕಾಕ್ ಪಿಟ್ ಬಾಗಿಲನ್ನು ತೆರೆದು ಸಹಾಯ ಕೋರಿದಾಗ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇಬ್ಬರು ಆಫ್ ಡ್ಯೂಟಿ ಪೈಲಟ್ ಗಳು ದಾಳಿಕೋರನನ್ನು ಹಿಡಿದು ಕಟ್ಟಿಹಾಕಿದ್ದಾರೆ. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಿ ಎಲ್ಲರ ಜೀವ ಉಳಿಸಲಾಗಿದೆ.

ದೊಡ್ಡಣ್ಣನಿಗೆ ಇರಾನ್ ಮೇಲೆ ಡೌಟ್ !

ಈ ಘಟನೆಯ ನಂತರ ಮಾತನಾಡಿರುವ ಅಧ್ಯಕ್ಷ ಟ್ರಂಪ್ ಅವರು, ಲಭ್ಯವಿರುವ ಪ್ರಾಥಮಿಕ ಮಾಹಿತಿ ಈ ಕೃತ್ಯಕ್ಕೂ ಇರಾನ್ ಗೂ ಸಂಬಂಧ ಇರುವುದನ್ನು ಸೂಚಿಸುತ್ತಿದೆ, ನಮ್ಮ ತನಿಖಾ ತಂಡಗಳು ಆಳವಾಗಿ ಪರಿಶೀಲನೆ ನಡೆಸುತ್ತಿವೆ ಮತ್ತು ಶೀಘ್ರದಲ್ಲೇ ಪೂರ್ಣ ವಿವರ ನೀಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಇದರ ಹಿಂದೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಾತ್ರ ಇರುವುದು ಸಾಬೀತಾದರೆ ಅಮೆರಿಕ ತೀವ್ರ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಪಾತ್ರದ ಬಗ್ಗೆ ಈ ಕೂಡಲೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದಿದ್ದಾರೆ. ಆರೋಪಿಯ ವೈಯಕ್ತಿಕ ದಾಖಲೆಗಳು ಆತ ತೀವ್ರಗಾಮಿ ಇಸ್ಲಾಮಿಕ್ ಜಿಹಾದಿ ಸಿದ್ಧಾಂತಕ್ಕೆ ಒಳಗಾಗಿದ್ದನ್ನು ತೋರಿಸುತ್ತವೆ, ವಿಚಾರಣೆ ವೇಳೆ ಆತ ನನ್ನನ್ನು ಕೊಂದು ಹಾಕಿ ಎಂದು ಕಿರುಚಿದ್ದರಿಂದ ವಿಮಾನವನ್ನು ಅಪಘಾತಗೊಳಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಜನೆ ಇತ್ತು ಎಂಬುದು ಕಾಣುತ್ತದೆ ಎಂದು ಅವರು ತಿಳಿಸಿದ್ದಾರೆ. 13 ವರ್ಷಕ್ಕೂ ಹೆಚ್ಚು ಕಾಲ ಬೋಯಿಂಗ್ 737 ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದು ಹಿಂದೆ ಸ್ಪೈಸ್ ಜೆಟ್ ನಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಟ್ರಂಪ್, ನೆತನ್ಯಾಹು ಮತ್ತು ಯುಎಇ ನಾಯಕರು ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ : ಫ್ಲೈದುಬೈ ಪೈಲಟ್ ಸಾಹಸ – ಕ್ಯಾಪ್ಟನ್ ‌ ಸ್ಮಿತ್ ಮಚ್ಛಾರ್ ಹೀರೋ ಎಂದ ಪ್ರಧಾನಿ ಮೋದಿ

ಈ ಪ್ರಕರಣ ಆಂತರಿಕ ಬೆದರಿಕೆ ಮತ್ತು ಅಂತರರಾಷ್ಟ್ರೀಯ ರಾಜಕಾರಣದ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದೆ. ಮೊದಲನೆಯದಾಗಿ ಕಾಕ್ ಪಿಟ್ ಒಳಗಿನಿಂದಲೇ ದಾಳಿ ನಡೆದಿರುವುದು ಇನ್ ಸೈಡರ್ ಬೆದರಿಕೆ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ಪ್ರಯಾಣಿಕರ ತಪಾಸಣೆ ಎಷ್ಟೇ ಬಿಗಿಯಾಗಿದ್ದರೂ ವಿಮಾನವನ್ನು ನಿಯಂತ್ರಿಸುವ ಪೈಲಟ್ ಗಳ ಮಾನಸಿಕ ಆರೋಗ್ಯ, ಸೈದ್ಧಾಂತಿಕ ಒಲವು ಮತ್ತು ನಡವಳಿಕೆಯ ನಿರಂತರ ಮೌಲ್ಯಮಾಪನ ಇಲ್ಲದಿದ್ದರೆ ಇಂತಹ ಘಟನೆ ತಡೆಯುವುದು ಕಷ್ಟ. ಎರಡನೆಯದಾಗಿ ಟ್ರಂಪ್ ಅವರು ತಕ್ಷಣವೇ ಇರಾನ್ ಮೇಲೆ ಅನುಮಾನ ವ್ಯಕ್ತಪಡಿಸಿರುವುದು ಅಮೆರಿಕ-ಇರಾನ್ ನಡುವಿನ ದೀರ್ಘಕಾಲದ ಸಂಘರ್ಷದ ಹಿನ್ನೆಲೆಯಲ್ಲಿ ನೋಡಬೇಕು. ಇರಾನ್ ಬೆಂಬಲಿತ ಜಾಲಗಳು ನಾಗರಿಕ ವಿಮಾನಯಾನವನ್ನು ಅಸ್ತ್ರವಾಗಿ ಬಳಸುವ ಸಾಧ್ಯತೆ ಬಗ್ಗೆ ಈ ಹಿಂದೆಯೂ ಗುಪ್ತಚರ ಎಚ್ಚರಿಕೆಗಳಿವೆ. ಒಂದು ವೇಳೆ ಐಆರ್ ಜಿಸಿ ಪಾತ್ರ ದೃಢಪಟ್ಟರೆ ಅದು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಮಿಲಿಟರಿ ಸಂಘರ್ಷಕ್ಕೆ ನಾಂದಿ ಹಾಡಬಹುದು.