D2M: ಈಗ ಟಿವಿ ವೀಕ್ಷಣೆ ಮಾಡಬೇಕೆಂದರೆ ಅದರಲ್ಲೂ ಮೊಬೈಲ್‌ನಲ್ಲಿ ಟಿವಿ ಚಾನೆಲ್ ವೀಕ್ಷಣೆ ಮಾಡಬೇಕೆಂದರೆ ಇಂಟರ್ನೆಟ್ ಇರಬೇಕು, ವೈ-ಫೈ ಕನೆಕ್ಷನ್ ಇರುವುದು ಕಡ್ಡಾಯ ಆದರೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆಯು ಹೊಸ ಸೌಲಭ್ಯವೊಂದನ್ನು ದೇಶಕ್ಕೆ ಪರಿಚಯಿಸಲು ಮುಂದಾಗಿದ್ದು, ಅದರ ಮೂಲಕ ಭಾರತದ ನಾಗರೀಕರು ಯಾವುದೇ ಇಂಟರ್ನೆಟ್ ಅಥವಾ ವೈಫೈ ಸೌಲಭ್ಯ ಇಲ್ಲದೆ ನೇರವಾಗಿ ಮತ್ತು ಉಚಿತವಾಗಿ ಮೊಬೈಲ್‌ಗಳಲ್ಲಿ ಟಿವಿ ಚಾನೆಲ್ ವೀಕ್ಷಿಸಬಹುದಾಗಿರುತ್ತದೆ ಮಾತ್ರವಲ್ಲದೆ ಕೆಲವು ಟಿವಿಗಳಲ್ಲಿಯೂ ಸಹ ಟಿವಿ ಚಾನೆಲ್ಲುಗಳನ್ನು ವೀಕ್ಷಿಸಬಹುದಾಗಿರುತ್ತದೆ.
ಡಿ2ಎಂ (D2M) ತಂತ್ರಜ್ಙಾನದ ಮೂಲಕ ಯಾವುದೇ ಇಂಟರ್ನೆಟ್ ಸೌಲಭ್ಯ ಇಲ್ಲದೆ ಇನ್ನು ಮುಂದೆ ಮೊಬೈಲ್‌ಗಳಲ್ಲಿ ನೇರವಾಗಿ ಟಿವಿ ಚಾನೆಲ್ಲುಗಳನ್ನು ವೀಕ್ಷಿಸಬಹುದಾಗಿರುತ್ತದೆ. ಪ್ರಸಾರ ಭಾರತಿಯು ಈ ಕುರಿತು “ರಿಕ್ವೆಸ್ಟ್ ಟು ಪ್ರಪೋಸಲ್”ಗೆ ಹೊರಿಸಲಿದ್ದು. ಕೆಲವೇ ವಾರಗಳಲ್ಲಿ ಈ ಡಿ2ಎಂ ಬ್ರಾಡ್‌ಕಾಸ್ಟಿಂಗ್ ಜಾರಿಗೆ ಬರಲಿದೆ. ‘ಎಕ್ಸ್‌ಚೇಂಜ್‌ಫೋರ್‌ಮೀಡಿಯಾ’ ವರದಿಯ ಪ್ರಕಾರ, ಪ್ರಸಾರ ಭಾರತಿಯು ಮುಂದಿನ ತಿಂಗಳು ಆರ್‌ಎಫ್‌ಪಿ (RFP)ಯನ್ನು ಹೊರಡಿಸುವ ಸಾಧ್ಯತೆಯಿದೆ. ಇದು ಡಿ2ಎಂ (D2M) ತಂತ್ರಜ್ಞಾನವನ್ನು ಪ್ರಾಯೋಗಿಕ ಹಂತದಿಂದ ವ್ಯಾಪಕ ಬಳಕೆಗೆ ತರುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಲಿದೆ. ಯಾವಾಗಿನಿಂದ ಡಿ2ಎಂ ಕಾರ್ಯ ನಿರ್ವಹಿಸಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ತೇಜಸ್ ನೆಟ್‌ವರ್ಕ್ಸ್ ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಬಳಸಿಕೊಂಡು ನಡೆಸಲಾದ ತಂತ್ರಜ್ಞಾನ ಪರಿಶೀಲನಾ ಪರೀಕ್ಷೆಗಳು ಸರ್ಕಾರದ ಪರಿಶೀಲನೆಯಲ್ಲಿ ಯಶಸ್ವಿಯಾದ ನಂತರ, ಈ ಯೋಜನೆಯು ವೇಗ ಪಡೆದುಕೊಂಳ್ಳಲಿದೆ.
ಡಿ2ಎಂ ಹೇಗೆ ಕೆಲಸ ಮಾಡುತ್ತದೆ?
ಡಿ2ಎಂ ಮೂಲಕ ಮೊಬೈಲ್ ಬಳಕೆದಾರರು ಟಿವಿ ಚಾನೆಲ್ಲುಗಳನ್ನು ನೇರವಾಗಿ ಯಾವುದೇ ಇಂಟರ್ನೆಟ್ ಅಗತ್ಯ ಇಲ್ಲದೆ ವೀಕ್ಷಿಸಬಹುದಾಗಿರುತ್ತದೆ. ಜೊತೆಗೆ ಅಲರ್ಟ್‌ಗಳನ್ನು ಪಡೆಯಬಹುದಾಗಿರುತ್ತದೆ. ಸುದ್ದಿಗಳನ್ನು, ಮಾಹಿತಿಗಳನ್ನು ಸಹ ಇಂಟರ್ನೆಟ್ ಅಗತ್ಯ ಇಲ್ಲದೆ ಪಡೆಯಬಹುದಾಗಿರುತ್ತದೆ. ಹೇಗೆ ಎಫ್‌ಎಂ ರೇಡಿಯೋ ಚಾನೆಲ್ಲುಗಳು ಕೆಲಸ ಮಾಡುತ್ತವೆಯೋ ಅದೇ ರೀತಿ ಡಿ2ಎಂ ಸಹ ಕೆಲಸ ಮಾಡುತ್ತದೆ. ನೇರವಾಗಿ ಫ್ರೀಕ್ವೆನ್ಸಿಗಳನ್ನು ಗ್ರಹಿಸಿ ಅದನ್ನು ಅಗತ್ಯ ರೂಪದಲ್ಲಿ ಗ್ರಾಹಕನಿಗೆ ಅಥವಾ ಬಳಕೆದಾರನಿಗೆ ತೋರಿಸುತ್ತದೆ.
ಈಗಾಗಲೇ ಈ ಡಿ2ಎಂ ತಂತ್ರಜ್ಙಾನವನ್ನು ಬಳಸಲಾಗುತ್ತಿದೆ. ಆದರೆ ಕೇವಲ ಪ್ರಮುಖವಾದ ಅಲರ್ಟ್‌ಗಳನ್ನು ಜನರಿಗೆ ತಲುಪಿಸಲು ಮಾತ್ರವೇ ಇದನ್ನು ಬಳಸಲಾಗುತ್ತಿದ್ದು, ಇದನ್ನು ವಾಣಿಜ್ಯ ಕಾರಣಕ್ಕೆ ಅಂದರೆ ಟಿವಿ ಪ್ರಸಾರಕ್ಕೆ ಬಳಸಲು ಯೋಜಿಸಲಾಗಿದೆ. ಒಂದೊಮ್ಮೆ ಡಿ2ಎಂ ಅನುಷ್ಠಾನಗೊಂಡರೆ ಮೊಬೈಲ್ ಡಾಟಾ ಮೇಲಿರುವ ಅವಲಂಬನೆ ತುಸುವಾದರೂ ಕಡಿಮೆ ಆಗುತ್ತದೆ. ಆದರ ಈ ಡಿ2ಎಂ ಇಂದ ತಮ್ಮ ಉದ್ಯಮಕ್ಕೆ ಹೊಡೆತ ಬೀಳುತ್ತದೆಂದು ಮೊಬೈಲ್ ಡಾಟಾ ಸಂಸ್ಥೆಗಳು ತಕರಾರು ತೆಗೆಯುವ ಸಾಧ್ಯತೆಯೂ ಸಹ ಇದೆ.
ಪ್ರಸಾರ ಭಾರತಿಯು ಐಐಟಿ ಕಾನ್ಪುರ ಸಹಯೋಗದೊಂದಿಗೆ ಡಿ2ಎಂ ಅನ್ನು ಅಭಿವೃದ್ಧಿಪಡಿಸಿದ್ದು, ದೆಹಲಿ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ಪ್ರಯೋಗಗಳು ಯಶಸ್ವಿ ಆಗಿವೆ. ಒಟ್ಟು 19 ನಗರಗಳಲ್ಲಿ ಈ ಪ್ರಯೋಗಗಳನ್ನು ಪ್ರಸಾರ ಭಾರತಿ ನಡೆಸಲಿದೆ. ಈ ವರ್ಷದ ಅಂತ್ಯಕ್ಕೆ ಡಿ2ಎಂ ಮೂಲಕ ಭರತದ ಮೊಬೈಲ್ ಬಳಕೆದಾರರು ಇಂಟರ್ನೆಟ್ ಇಲ್ಲದೆ ಮೊಬೈಲ್‌ಗಳಲ್ಲಿ ಟಿವಿ ವೀಕ್ಷಿಸಲು ಸಾಧ್ಯವಾಗುವ ಸಾಧ್ಯತೆ ಇದೆ.




