☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Sadhguru: ‘ಮೊಟ್ಟೆ ಅತ್ಯಂತ ಕೆಟ್ಟ ಆಹಾರ’ ಸದ್ಗುರು ಹೇಳಿದ್ದು ಸತ್ಯವೇ?

Sadhguru

Sadhguru: ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ಸದ್ಗುರು (Sadhguru) ತಮ್ಮ ಅದ್ಭುತ ಭಾಷಣಗಳು, ಆಧ್ಯಾತ್ಮಿಕ ವಿಚಾರಗಳಿಂದ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ. ಇಶಾ ಫೌಂಡೇಶನ್ ಮೂಲಕ ಕೇವಲ ಅಧ್ಯಾತ್ಮ ಮಾತ್ರವೇ ಅಲ್ಲದೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸದ್ಗುರು ಅವರ ಪ್ರವಚನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕೋಟ್ಯಂತರ ಜನರನ್ನು ತಲುಪುತ್ತವೆ. ಸದ್ಗುರು ಹೇಳಿದ್ದನ್ನು ಕೋಟ್ಯಂತರ ಮಂದಿ ಅನುಸರಣೆ ಮಾಡುತ್ತಾರೆ. ಸದ್ಗುರು ಅವರು ಅಧ್ಯಾತ್ಮದ ವಿಷಯಗಳನ್ನು ಮಾತ್ರವೇ ಅಲ್ಲದೆ, ಆರೋಗ್ಯ, ಮಾನಸಿಕ ಆರೋಗ್ಯ, ಆಹಾರ ಇನ್ನೂ ಹಲವಾರು ವಿಷಯಗಳ ಬಗ್ಗೆ ಅವರು ಮಾತನಾಡುತ್ತಾರೆ. ಹೀಗೆ ಒಂದು ಪ್ರವಚನ ನೀಡುತ್ತಾ ಅವರು ಮೊಟ್ಟೆಗಳ ಬಗ್ಗೆ ಮಾತನಾಡಿದ್ದರು. ‘ಮೊಟ್ಟೆಯಂಥಹಾ ಕೆಟ್ಟ ಆಹಾರ ಇನ್ನೊಂದಿಲ್ಲ’ ಎಂದಿದ್ದರು.

ಪ್ರವಚನದಲ್ಲಿ ಮಾತನಾಡಿದ್ದ ಸದ್ಗುರು, ‘ಮೊಟ್ಟೆ ಪ್ರಪಂಚದ ಅತ್ಯಂತ ಕೆಟ್ಟ ಆಹಾರ’ ಎಂದಿದ್ದರು. ಮಕ್ಕಳಿಗೆ ಮೊಟ್ಟೆಯನ್ನು ಸೇವಿಸಲು ಕೊಡುವುದು ಅತ್ಯಂತ ಕೆಟ್ಟದ್ದು ಎಂದು ಸದ್ಗುರು ಹೇಳಿದ್ದರು. ‘ಪ್ರತಿದಿನ ಮೊಟ್ಟೆ ಸೇವಿಸುವುದರಿಂದ ವ್ಯಕ್ತಿಯಲ್ಲಿ ತಮೋ ಗುಣ ಹೆಚ್ಚಾಗುತ್ತದೆ. ಮೊಟ್ಟೆ ಸೇವನೆಯಿಂದ ದೇಹ ಮತ್ತು ಮನಸ್ಸಿಗೆ ಮಂಕು ಕವಿದಂತೆ ಆಗುತ್ತದೆ. ವ್ಯಕ್ತಿ ಸಕ್ರಿಯನಾಗಿ ಇರಲಾರ. ಮೊಟ್ಟೆಯ ಸೇವನೆಯು ದೇಹದ ಕ್ರಿಯಾಶೀಲತೆಯನ್ನು ಕಡಿಮೆ ಮಾಡಿ, ಜ್ಞಾನೇಂದ್ರಿಯಗಳನ್ನು ದುರ್ಬಲಗೊಳಿಸುತ್ತದೆ’ ಎಂದಿದ್ದರು.

ಅಲ್ಲದೆ, ‘ಮೊಟ್ಟೆಯನ್ನು ನೀವು ಕೇವಲ ಮೊಟ್ಟೆ ಎಂದು ನೋಡಬೇಡಿ. ಅದನ್ನು ಜೀವವಾಗಿ ನೋಡಿ, ಅದರೊಳಗೆ ಒಂದು ಪಕ್ಷಿ ಅಡಗಿ ಕುಳಿತಿದೆ ಎಂದು ಊಹಿಸಿಕೊಳ್ಳಿ. ನೀವು ಮೊಟ್ಟೆಯನ್ನು ತಿಂದಾಗ ಆ ಪಕ್ಷಿಯನ್ನೇ ತಿಂದಂತಾಗುತ್ತದೆ. ಅದು ಪಾಪ’ ಎಂಬರ್ಥದ ಮಾತುಗಳನ್ನು ಹಿಂದೊಮ್ಮೆ ಸದ್ಗುರು ಹೇಳಿದ್ದರು. ಹಾಗಿದ್ದರೆ ಮೊಟ್ಟೆಗಳ ಬಗ್ಗೆ ಸದ್ಗುರು ಹೇಳಿದ್ದು ನಿಜವೇ? ನಿಜವಾಗಿಯೂ ಮೊಟ್ಟೆ ಸೇವಿಸುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆಯೇ? ಸರಳ ಉತ್ತರವೆಂದರೆ ಖಂಡಿತ ಇಲ್ಲ.

ಸದ್ಗುರು ಹೇಳಿದ್ದು ನಿಜವೇ?

ಮೊಟ್ಟೆಯ ಬಗ್ಗೆ ಸದ್ಗುರು ಅವರು ಹೇಳಿದ ಯಾವ ಅಂಶವೂ ಸತ್ಯವಲ್ಲ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ಡಯಟೀಶಿಯನ್​​​ಗಳು. ಮೊಟ್ಟೆ, ಅತಿ ಹೆಚ್ಚು ವೈದ್ಯಕೀಯ ಪ್ರಯೋಗಗಳು ನಡೆದ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಮೊಟ್ಟೆಯನ್ನು ಒಂದು ‘ಸಂಪೂರ್ಣ’ ಆಹಾರವನ್ನಾಗಿ ವಿಜ್ಞಾನಿಗಳು, ವೈದ್ಯರು, ಡಯಟೀಶಿಯನ್​​ಗಳು ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ, ಅದರಲ್ಲಿರೂ ಶುದ್ಧವಾದ ಪ್ರೋಟೀನ್. ಅತ್ಯಂತ ಕಡಿಮೆ ಬೆಲೆಗೆ ಶುದ್ಧವಾದ ಪ್ರೋಟೀನ್ ಸಿಗಬೇಕೆಂದರೆ ಅದು ಮೊಟ್ಟೆಗಳಿಂದ ಮಾತ್ರ. ಹಾಗಾಗಿ ವಿಶ್ವದಾದ್ಯಂತ ವೈದ್ಯರು ಮೊಟ್ಟೆಗಳನ್ನು ಸೇವಿಸಲು ರೆಕಮೆಂಡ್ ಮಾಡುತ್ತಾರೆ.

ಭಾರತ ಪ್ರೋಟೀನ್ ಕೊರತೆಯಿಂದ ಬಳಲುತ್ತಿರುವ ದೇಶ. ನಮ್ಮ ಆಹಾರದಲ್ಲಿ ಕಾರ್ಬೊಹಡ್ರೇಟ್ ಅಂಶವೇ ಹೆಚ್ಚು. ಅಲ್ಲದೆ ನಮ್ಮ ದೇಶ ಸಂಪೂರ್ಣ ಮಾಂಸಾಹಾರಿ ದೇಶವೂ ಸಹ ಅಲ್ಲ. ಮಾಂಸಾಹಾರಿಗಳು ಸಹ ವಾರದ ಎಲ್ಲ ದಿನ, ಎಲ್ಲ ಸಮಯದಲ್ಲಿಯೂ ಮಾಂಸಾಹಾರ ಸೇವಿಸುವುದಿಲ್ಲ. ಹಾಗಾಗಿ ಮೊಟ್ಟೆಗಳು ಒಂದು ಅದ್ಭುತವಾದ ಪ್ರೋಟೀನ್ ಸೋರ್ಸ್ ಆಗಿವೆ. ದಿನಕ್ಕೆ ಎರಡು ಮೊಟ್ಟೆ ಸೇವಿಸುವುದರಿಂದ ಸುಮಾರು 12 ರಿಂದ 14 ಗ್ರಾಂ ಪ್ರೋಟೀನ್ ಸೇರಿದಂತಾಗುತ್ತದೆ.

ಮೊಟ್ಟೆಯೊಳಗೆ ಜೀವ?

ಇನ್ನು ಸದ್ಗುರು ಹೇಳಿದ ‘ಮೊಟ್ಟೆಯೊಳಗೆ ಜೀವ’ ಇರುವ ಕತೆಯೂ ಸಹ ಸುಳ್ಳು. ಏಕೆಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟೆಗಳಲ್ಲಿ ಜೀವ ಇರುವುದಿಲ್ಲ. ಅವುಗಳಿಗೆ ಕಾವು ಕೊಟ್ಟರೆ, ಇನ್​​ಕ್ಯುಬೇಟರ್​​ನಲ್ಲಿ ಇಟ್ಟರೂ ಸಹ ಅವುಗಳಿಂದ ಮರಿಗಳು ಹೊರಗೆ ಬರುವುದಿಲ್ಲ. ಏಕೆಂದರೆ ಆ ಮೊಟ್ಟೆಗಳು ಹುಂಜದ ಸಹಾಯ ಇಲ್ಲದೆ ಹುಟ್ಟಿದ ‘ಅನ್​​ಫರ್ಟಿಲೈಜ್ಡ್’ ಮೊಟ್ಟೆಗಳಾಗಿರುತ್ತವೆ. ಹುಂಜದ ‘ನೆರವು’ ಇಲ್ಲದೇ ಹುಟ್ಟಿದ ಮೊಟ್ಟೆಗಳಾದ್ದರಿಂದ ಅವುಗಳಲ್ಲಿ ‘ಎಂಬ್ರಿಯೊ’ ಇರುವುದಿಲ್ಲ. ಹಾಗಾಗಿ ಆ ಮೊಟ್ಟೆಗಳನ್ನು ಎಷ್ಟೇ ದಿನ ಇಟ್ಟರು, ಕಾವು ಕೊಟ್ಟರೂ ಸಹ ಅವುಗಳಿಂದ ಕೋಳಿ ಮರಿಗಳು ಹೊರಗೆ ಬರುವುದಿಲ್ಲ. ಹಾಗಾಗಿ ಯಾವುದೇ ಭಯ ಅಥವಾ ಪಾಪಪ್ರಜ್ಞೆ ಇಲ್ಲದೆ ಪ್ರತಿದಿನ ಮೊಟ್ಟೆ ಸೇವಿಸಿ. ಆರೋಗ್ಯವಾಗಿರಿ.