Bigg Boss 13: ಬಿಗ್ಬಾಸ್ ಕನ್ನಡ ಸೀಸನ್ 13ರ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್ಗೆ ಕ್ಷಣಗಣನೆ ಆರಂಭವಾಗಿದೆ. ಈ ವಾರದ ಹೊಸ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಪ್ರೋಮೋ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಪ್ರೋಮೋದಲ್ಲಿ ನಿರೂಪಕ ಕಿಚ್ಚ ಸುದೀಪ್ (Kiccha Sudeep) ಹಾಗೂ ಸ್ಪರ್ಧಿ ‘ಮಾಡೆರ್ನ್ ಮಹಾಕವಿ’ ಮಂಜು ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. ಮಂಜು ಕಳೆದ ವಾರ ನಡೆದುಕೊಂಡ ರೀತಿಯ ಬಗ್ಗೆ ಸುದೀಪ್ ಖಾರವಾಗಿ ಪ್ರಶ್ನಿಸಿದ್ದಾರೆ.
ಸಹ ಸ್ಪರ್ಧಿಗಳೊಂದಿಗೆ ಮಂಜು ಆಡಿದ ಮಾತುಗಳ ಬಗ್ಗೆ ಸುದೀಪ್ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರ ಈ ಖಡಕ್ ಅವತಾರ ಮನೆಮಂದಿಗೆ ದೊಡ್ಡ ಶಾಕ್ ನೀಡಿದೆ.
‘ತಮ್ಮನಿಗೆ ಒಂದಿಷ್ಟು ಬೆಲೆ ಇರಬೇಕು’
ಪ್ರೋಮೋ ಆರಂಭದಲ್ಲಿ ಸುದೀಪ್, ಮಂಜುರನ್ನು ‘ಮಾಡೆರ್ನ್ ಮಹಾಕವಿ’ (Modern Mahakavi Manju) ಎಂದು ಕರೆಯುತ್ತಾ ಅವರ ಶೈಲಿಯನ್ನು ಅನುಕರಿಸುತ್ತಾರೆ. ಈ ವೇಳೆ ಮಂಜು ಸುದೀಪ್ ಅವರನ್ನು ‘ಅಣ್ಣ’ ಎಂದು ಕರೆಯುತ್ತಾರೆ.
ಇದನ್ನು ಓದಿ: Bigg Boss 13: ದೊಡ್ಮನೆಯಲ್ಲಿ ಶುರುವಾಯ್ತಾ ಹೊಸ ಲವ್ ಸ್ಟೋರಿ?
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸುದೀಪ್, “ನನ್ನ ಅಣ್ಣಾ ಅಂತ ಕರೆಯೋದಾದ್ರೆ, ತಮ್ಮನಿಗೂ ಒಂದಿಷ್ಟು ಬೆಲೆ ಇರಬೇಕು”ಎಂದು ಖಡಕ್ ಆಗಿ ಟಾಂಗ್ ನೀಡಿದ್ದಾರೆ. ಮಂಜು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಹೋದಾಗ, ಸುದೀಪ್ ಮಧ್ಯದಲ್ಲೇ ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರೇಕ್ಷಕರ ಬೆಂಬಲವೇ ಮುಖ್ಯ
ಈ ಸಂದರ್ಭದಲ್ಲಿ ಸುದೀಪ್ ಬಿಗ್ಬಾಸ್ ಪ್ರೇಕ್ಷಕರ ಮಹತ್ವವನ್ನು ನೆನಪಿಸಿದ್ದಾರೆ. ವೀಕ್ಷಕರ ಬೆಂಬಲದಿಂದಲೇ ಸ್ಪರ್ಧಿಗಳು ಮನೆಯಲ್ಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಕಳೆದ 12 ವರ್ಷಗಳಲ್ಲಿ ನಾವು ಕೋಟ್ಯಂತರ ಪ್ರೇಕ್ಷಕರನ್ನು ಸಂಪಾದಿಸಿದ್ದೇವೆ. ಕೇವಲ ನಾಲ್ಕು ಜನರಿಗಾಗಿ ಆ ಪ್ರೇಕ್ಷಕರನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ’ ಎಂದು ಸುದೀಪ್ ಎಚ್ಚರಿಕೆ ನೀಡಿದ್ದಾರೆ.
ಈ ವಾರದ ಎಪಿಸೋಡ್ನಲ್ಲಿ ಏನಾಗಲಿದೆ?
ಸುದೀಪ್ ಅವರ ಮಾತುಗಳಿಗೆ ಮಂಜು ಹೇಗೆ ಉತ್ತರ ನೀಡಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಇತ್ತೀಚಿನ ವಿವಾದಗಳಿಗೆ ಕಿಚ್ಚ ಹೇಗೆ ತೆರೆ ಎಳೆಯಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಈ ವಾರದ ಎಪಿಸೋಡ್ ಬಿಗ್ಬಾಸ್ ಸೀಸನ್ 13ರ ಪ್ರಮುಖ ಘಟ್ಟವಾಗಲಿದೆ. ಪ್ರೇಕ್ಷಕರು ‘ವಾರದ ಕತೆ ಕಿಚ್ಚನ ಜೊತೆ’ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.




