Photo Credits: @chitraloka (Instagram)
ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಮೂಲಕ ಬಿಗ್ ಮೂವ್ ಮಾಡಿದ್ದಾರೆ. ಈಗಾಗಲೇ ನಟ ದರ್ಶನ್ ಜೊತೆಗಿದ್ದ ಪ್ರಮುಖ ಆರೋಪಿಗಳು ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಇಡೀ ಪ್ರಕರಣಕ್ಕೆ ಭಾರಿ ದೊಡ್ಡ ತಿರುವು ನೀಡಿದೆ.
ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸೆಷನ್ಸ್ ಕೋರ್ಟ್ ಪುರಸ್ಕರಿಸಿದ್ದು, ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ದೊಡ್ಡ ಹಿನ್ನಡೆಯಾಗಿದೆ. ಈ ಮಾಫಿ ಸಾಕ್ಷಿಯ ಸಂಕಷ್ಟದ ನಡುವೆಯೇ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಜಾಮೀನು ಸಿಗುತ್ತಾ ಅಥವಾ ಬಿಗ್ ಶಾಕ್ ಕಾದಿದೆಯಾ ಎಂಬ ಕುತೂಹಲ ಮೂಡಿದೆ.
ಸೆಪ್ಟೆಂಬರ್ 21ಕ್ಕೆ ಬೇಲ್ ಭವಿಷ್ಯ ನಿರ್ಧಾರ: ಸರ್ಕಾರಿ ಅಭಿಯೋಜಕರ ಆಕ್ಷೇಪಣೆ
ಪ್ರಕರಣದ 1ನೇ ಆರೋಪಿ ಪವಿತ್ರಾ ಗೌಡ ಅವರೊಂದಿಗೆ 6ನೇ ಆರೋಪಿ ಜಗದೀಶ್ ಹಾಗೂ 7ನೇ ಆರೋಪಿ ಅನುಕುಮಾರ್ ಕೂಡ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಗಳಿಗೆ ಬಲವಾದ ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿದ ಸರ್ಕಾರಿ ಅಭಿಯೋಜಕರು, ವಿಚಾರಣೆಯನ್ನು ಮುಂದಿನ ವಾರಕ್ಕೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಅಭಿಯೋಜಕರ ಮನವಿ ಪುರಸ್ಕರಿಸಿದ ಕೋರ್ಟ್, ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿದ್ದು, ಅಂದೇ ಪವಿತ್ರಾ ಗೌಡ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ. ಇದೇ ವೇಳೆ ಪ್ರಕರಣದ 234, 235, 236 ಮತ್ತು 246ನೇ ಸಾಕ್ಷಿಗಳಿಗೆ ಸಾಕ್ಷ್ಯ ನುಡಿಯಲು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
ಪ್ರದೋಷ್‌ಗೆ ಮಾಫಿ ಸಾಕ್ಷಿ ಒಪ್ಪಿಗೆ: ದರ್ಶನ್ ಅರ್ಜಿ ವಿಚಾರಣೆ ಕೂಡ ಮುಂದೂಡಿಕೆ
ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಮಹತ್ವದ ಆದೇಶ ಹೊರಡಿಸಿದೆ. ಸಹ ಆರೋಪಿಗಳ ಜೊತೆ ಎಸಗಿರುವ ಅಪರಾಧದ ಬಗ್ಗೆ ಸಂಪೂರ್ಣ ಸತ್ಯವನ್ನು ಹೇಳಬೇಕು, ಒಂದು ವೇಳೆ ಸತ್ಯ ಮುಚ್ಚಿಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಪ್ರದೋಷ್‌ಗೆ ಎಚ್ಚರಿಕೆ ನೀಡಿದೆ.
ಇನ್ನೊಂದೆಡೆ, ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶನ ನೀಡುವಂತೆ ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ನೀಡಲಿರುವ ಹೇಳಿಕೆಗಳು ಪವಿತ್ರಾ ಗೌಡ ಹಾಗೂ ದರ್ಶನ್ ಅವರ ಕಾನೂನು ಹೋರಾಟಕ್ಕೆ ಮತ್ತಷ್ಟು ತೊಡಕಾಗುವ ಸಾಧ್ಯತೆಯಿದೆ.




