Darshan: ದರ್ಶನ್ ವಿರುದ್ಧ ಭಾರೀ ಷಡ್ಯಂತ್ರ; ಪ್ರದೋಷ್ ಜೈಲು ಫೋನ್ ವಿವಾದದಿಂದ ನಟನಿಗೆ ಸಿಕ್ತಾ ಹೊಸ ಅಸ್ತ್ರ?

Darshan- Renukaswamy case lawyer alleges conspiracy involving Pradosh's phone controversy

Photo Credits: @ra_nagaravani (Instagram)

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ (Darshan) ಹಾಗೂ ಅವರ ತಂಡದ ನಡುವೆ ಈಗ ಮುಸುಕಿನ ಗುದ್ದಾಟ ಭಾರಿ ಜೋರಾಗಿದೆ. ದರ್ಶನ್ ಜೊತೆಯಲ್ಲಿದ್ದವರೇ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಇದೇ ಸಮಯದಲ್ಲಿ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದ ಪ್ರದೋಷ್ (Pradosh) ಜೈಲಿನಲ್ಲಿ ಅಕ್ರಮವಾಗಿ ಫೋನ್ ಬಳಸಿ ಸಿಕ್ಕಿಬಿದ್ದಿರುವುದು ದರ್ಶನ್ ಪರ ವಕೀಲರಿಗೆ ಭಾರಿ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಪ್ರದೋಷ್ ವಿರುದ್ಧ ಎನ್‌ಸಿಆರ್ ದಾಖಲು; ದರ್ಶನ್‌ಗೆ ವರವಾಗುತ್ತಾ?

ರೇಣುಕಾಸ್ವಾಮಿ ಪ್ರಕರಣದಲ್ಲಿ ನಡೆದಿದ್ದನ್ನೆಲ್ಲಾ ಕೋರ್ಟ್‌ಗೆ ಹೇಳಿ ಮಾಫಿ ಸಾಕ್ಷಿಯಾಗುತ್ತೇನೆ ಎಂದು ಆರೋಪಿ ಪ್ರದೋಷ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ದರ್ಶನ್ ಪರ ವಕೀಲರು ಇದನ್ನು ಮೊದಲಿನಿಂದಲೂ ತೀವ್ರವಾಗಿ ವಿರೋಧಿಸುತ್ತಿದ್ದರು. ಈ ನಡುವೆ ಪ್ರದೋಷ್ ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಸಿಬ್ಬಂದಿ ಮೌನೇಶ್ ಸಹಾಯದಿಂದ ಪತ್ನಿ ಜೊತೆ ಫೋನ್‌ನಲ್ಲಿ ಮಾತನಾಡಿದ್ದು ಸಿಸಿಟಿವಿಯಲ್ಲಿ ಧೃಡಪಟ್ಟಿದೆ.

ಈ ಅಕ್ರಮ ಕರೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರದೋಷ್ ವಿರುದ್ಧ ಈಗಾಗಲೇ ಎನ್‌ಸಿಆರ್ (NCR) ದಾಖಲಾಗಿದೆ. ಈ ಘಟನೆಯು ಪ್ರದೋಷ್‌ಗೆ ಹೊಸ ಸಂಕಷ್ಟ ತಂದೊಡ್ಡಿದ್ದು, ಅವರ ಮಾಫಿ ಸಾಕ್ಷಿ ಅರ್ಜಿಯ ವಿಶ್ವಾಸಾರ್ಹತೆಯನ್ನೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನಾಗಿ ಮಾಡಿದೆ.

ಕೋರ್ಟ್ ಮೆಟ್ಟಿಲೇರಿದ ದರ್ಶನ್ ಪರ ವಕೀಲ ಹಷ್ಮಾತ್ ಪಾಷಾ

ಪ್ರದೋಷ್ ಕೈಗೊಂಡ ಈ ಫೋನ್ ಕಳ್ಳಾಟವನ್ನೇ ದರ್ಶನ್ ಪರ ಹಿರಿಯ ವಕೀಲ ಹಷ್ಮಾತ್ ಪಾಷಾ ಅವರು 59 ನೇ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ದರ್ಶನ್ ಅವರ ವೃತ್ತಿಜೀವನ ಹಾಗೂ ಜೀವನವನ್ನು ಹಾಳುಮಾಡಲು ಕಾಣದ ಕೈಗಳು ಪ್ರದೋಷ್ ಅವರನ್ನು ದಾಳವಾಗಿ ಬಳಸಿಕೊಂಡು ಷಡ್ಯಂತ್ರ ರೂಪಿಸಿವೆ ಎಂದು ವಕೀಲರು ಅರ್ಜಿಯಲ್ಲಿ ನೇರವಾಗಿ ಆರೋಪಿಸಿದ್ದಾರೆ.

ಪ್ರದೋಷ್ ಅಕ್ರಮವಾಗಿ ಮೊಬೈಲ್ ಬಳಸಿದ ಪ್ರಕರಣದ ಸಂಪೂರ್ಣ ಪೊಲೀಸ್ ವಿಚಾರಣೆ ಮುಗಿಯುವವರೆಗೆ ಮಾಫಿ ಸಾಕ್ಷಿ ಆದೇಶವನ್ನು ಅಮಾನತಿನಲ್ಲಿಡಲು ಮನವಿ ಮಾಡಲಾಗಿದೆ. ಈ ಹೊಸ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಮತ್ತಷ್ಟು ಕುತೂಹಲಕಾರಿ ಹಂತ ತಲುಪಿದ್ದು, ಕೋರ್ಟ್ ನೀಡುವ ಮುಂದಿನ ಆದೇಶದತ್ತ ಎಲ್ಲರ ಕಣ್ಣು ನೆಟ್ಟಿದೆ.