H1N1 Virus: ಕರ್ನಾಟಕದಲ್ಲಿ H1N1 ಭೀತಿ; ಮಂಗಳೂರು-ಉಡುಪಿ ಭಾಗಗಳಲ್ಲಿ ಎಷ್ಟು ಕೇಸ್?

Mangaluru and Udupi records highest number of H1N1 cases amid changing weather

ಮಂಗಳೂರು: ಈ ಬಾರಿ ಕರ್ನಾಟಕದಾದ್ಯಂತ ಮಳೆಯ ಅಭಾವ ಎದ್ದು ಕಾಣುತ್ತಿದೆ. ಎಲ್ಲಾ ಭಾಗಗಳಲ್ಲಿಯೂ ಸರಿಯಾದ ಸಮಯಕ್ಕೆ ಮಳೆ ಬಾರದೆ ಜನರು ಅದರ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಈ ಮಧ್ಯೆ ಮಂಗಳೂರು ಹಾಗೂ ಉಡುಪಿ ಭಾಗಗಳಲ್ಲಿ H1N1 (ಹಂದಿ ಜ್ವರ) ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿದೆ.

ಬದಲಾದ ಹವಾಮಾನ ಹಾಗೂ ಋತುಮಾನದ ವೈಪರೀತ್ಯದಿಂದಾಗಿ ಸೀಸನಲ್ ಫ್ಲೂ ಸೇರಿದಂತೆ H1N1 (ಹಂದಿ ಜ್ವರ) ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಳೆದ ಕೆಲವು ವಾರಗಳಿಂದ ಕರಾವಳಿ ಭಾಗದಲ್ಲಿ ವಾತಾವರಣವು ದಿಢೀರನೇ ಬದಲಾಗುತ್ತಿದೆ. ಹೀಗಾಗಿ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ರೋಗಾಣುಗಳು ವೇಗವಾಗಿ ಹರಡುತ್ತಿದೆ. ಇದು ದಕ್ಷಿಣ ಕನ್ನಡ ಭಾಗಗಳಲ್ಲಿ H1N1 ಹಬ್ಬುವುದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡದಾದ್ಯಂತ H1N1 ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಉಡುಪಿಯಲ್ಲಿ 300, ಮಂಗಳೂರಿನಲ್ಲಿ 87 ಕೇಸ್ ದಾಖಲಾಗಿದೆ. ಒಣ ಕೆಮ್ಮು, ಗಂಟಲು ನೋವು, ವೀಪರೀತ ಜ್ವರ, ತಲೆ ನೋವು, ಮೈಕೈ ನೋವಿನ ರೋಗ ಲಕ್ಷಣಗಳು ಕರಾವಳಿ ಭಾಗದ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಸಣ್ಣ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆ, ಮಧುಮೇಹದಿಂದ ಬಳಲುತ್ತಿರುವವರಿಗೆ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಕರ್ನಾಟಕದಲ್ಲಿ 4 ಸಾವಿರ ಪ್ರಕರಣಗಳು

ಕರ್ನಾಟಕದಾದ್ಯಂತ ಇಲ್ಲಿವರೆಗೂ ಸೀಸನಲ್ ಫ್ಲ್ಯೂನಿಂದ ಬಳಸುತ್ತಿರುವ ಸಂಖ್ಯೆ 4 ಸಾವಿರ ದಾಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್‌1ಎನ್1 (H1N1) ಪ್ರಕರಣಗಳು ಪತ್ತೆಯಾಗುತ್ತಿವೆ. ಸದ್ಯಕ್ಕೆ ಉಡುಪಿ ಜಿಲ್ಲೆಯಲ್ಲಿಯೇ ಸುಮಾರು 300 ಪ್ರಕರಣಗಳು ದಾಖಲಾಗಿವೆ. ಮಂಗಳೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜೊತೆಗೆ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳಲ್ಲೂ ಪ್ರಕರಣಗಳು ದಾಖಲಾಗಿವೆ.

ಈ ಸಂಬಂಧ ಮಂಗಳೂರು, ಉಡುಪಿ ಭಾಗಗಳ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಮಾಡಲಾಗಿದೆ. ಹಾಗೇ ಗಂಟಲು ದ್ರವ ಪರೀಕ್ಷೆಗಳನ್ನು ಉಚಿತವಾಗಿ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಏನಿದೆ ಮಾರ್ಗದರ್ಶಿ ಸೂತ್ರಗಳು?

ಎಚ್‌1ಎನ್1 ನಂತಹ ಲಕ್ಷಣಗಳು ಕಂಡು ಬಂದರೆ, ಭೀತಿಗೆ ಒಳಗಾಗದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಹಾಗೇ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ.

ಕುದಿಸಿ ಆರಿಸಿದ ನೀರಿನ ಬಳಕೆ: ವಾತಾವರಣ ನಿರಂತರವಾಗಿ ಬದಲಾಗುತ್ತಿರುವ ಬೆನ್ನಲ್ಲಿ ನೀರನ್ನು ಚೆನ್ನಾಗಿ ಕುದಿಸಿ, ಆರಿದ ಬಳಿಕ ಕುಡಿಯಬೇಕು.

ಮಾಸ್ಕ್ ಬಳಸಿ: ರೋಗ ಲಕ್ಷಣಗಳು ಇರುವವರು ಕೆಮ್ಮುವಾಗ ಅಥವಾ ಸೀನುವಾಗ ಜನರಿಂದ ದೂರ ಹೋಗಬೇಕು. ಅಲ್ಲದೇ ಮಾಸ್ಕ್ ಧರಿಸುವುದು ಉತ್ತಮ. ಹಾಗೇ ಸಾರ್ವಜನಿಕ ಸ್ಥಳಗಳಿಂದ ಮರಳಿದ ಬಳಿಕ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು.

ಸ್ವಚ್ಚ ಆಹಾರ ಸೇವನೆ: ಬಿಸಿ ಮತ್ತು ಸ್ವಚ್ಚವಾದ ಆಹಾರವನ್ನು ಸೇವಿಸಬೇಕು. ತೆರದಿಟ್ಟ ತಿನಿಸುಗಳನ್ನು ಸೇವಿಸಬಾರದು.

ಮನೆ ಮದ್ದು ಬೇಡ : ಜ್ವರ, ಶೀತದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಮನೆ ಮದ್ದು ಮಾಡುವುದು ಸಹಜ. ಇಲ್ಲವೇ ಮೆಡಿಕಲ್‌ಗೆ ಹೋಗಿ ಆಂಟಿಬಯೋಟಿಕ್ ಮಾತ್ರೆಗಳನ್ನು ತಂದು ಸೇವಿಸುತ್ತಾರೆ. ಇದನ್ನು ಮಾಡದೇ ವೈದ್ಯರನ್ನು ಭೇಟಿಯಾಗಿ ಔಷಧ ತೆಗೆದುಕೊಳ್ಳುವುದು ಸೂಕ್ತ.

ಅಂತರ ಕಾಯ್ದುಕೊಳ್ಳುವುದು: ಜ್ವರದ ಲಕ್ಷಣ ಇರುವವರು ಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ಪಡೆಯಬೇಕು. ಹಾಗೇ ಇತರರಿಗೆ ರೋಗಗಳು ಹರಡದಂತೆ ಸಾರ್ವಜನಿಕವಾಗಿ ಸಮಾರಂಭಗಳಿಂದ ದೂರವಿರುವುದು ಉತ್ತಮ.