America America 2 Review: ಅಂದಿನ ‘ಭೂಮಿ-ಸೂರ್ಯ-ಶಶಾಂಕ್’ರನ್ನ ನೆನಪಿಸಿದರೇ ‘ನುಡಿ-ನೀಲ್-ನಿನಾದ್’?

Nagathihalli Chandrashekar America America 2 Kannada movie review and rating

ಚಿತ್ರ: ಅಮೆರಿಕಾ ಅಮೆರಿಕಾ ೨

ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್

ತಾರಾಗಣ: ಶಾನ್ವಿ ಶ್ರೀವಾಸ್ತವ, ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ, ಮಂಡ್ಯ ರಮೇಶ್, ಮಾನಸಿ ಸುಧೀರ್ ಮುಂತಾದವರು

ಸಂಗೀತ: ಮನೋಮೂರ್ತಿ

ರೇಟಿಂಗ್: (3/5)

‘ಅಮೆರಿಕಾ ಅಮೆರಿಕಾ’ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ. ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಸೃಷ್ಟಿಸಿದ ಮಾಸ್ಟರ್ ಪೀಸ್. ಈಗ ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಇದೇ ಸಿನಿಮಾ 2ನೇ ಅಧ್ಯಾಯವನ್ನು ತೆರೆಮೇಲೆ ತಂದಿದ್ದಾರೆ. ಆದರೆ, ಇಲ್ಲಿ ‘ಭೂಮಿ-ಸೂರ್ಯ-ಶಶಾಂಕ್’ ಇಲ್ಲ. ಅಂದರೆ, ಇದು ‘ಅಮೆರಿಕಾ ಅಮೆರಿಕಾ’ದ ಮುಂದುವರೆದ ಭಾಗ ಅಲ್ಲ ಅನ್ನೋದು ಸ್ಪಷ್ಟ.

ಹೆಚ್ಚು ಕಡಿಮೆ ಮೂರು ದಶಕಗಳ ಬಳಿಕ ಮತ್ತೆ ‘ಅಮೆರಿಕಾ’ಗೆ ಹೋಗಿ ಬಂದಿರೋ ಮೇಷ್ಟ್ರು ಮತ್ತೊಂದು ಮಾಸ್ಟರ್ ಪೀಸ್ ಅನ್ನು ಸೃಷ್ಟಿಸಿದರೇ? ಮತ್ತೆ ‘ಭೂಮಿ-ಸೂರ್ಯ-ಶಶಾಂಕ್’ರನ್ನು ನೆನಪಿಸಿದರೇ? ‘ಅಮೆರಿಕಾ ಅಮೆರಿಕಾ 2’ ಕನ್ನಡಿಗರ ಮನಗೆಲ್ಲುವ ಸಿನಿಮಾ ಆಗುತ್ತಾ? ಸಿನಿಮಾ ಕಥೆ, ನಿರೂಪಣೆ ಹೇಗಿದೆ? ಪ್ಲಸ್‌ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ಇಲ್ಲಿದೆ ಒಂದು ವಿಮರ್ಶೆ.

‘ಅಮೆರಿಕಾ ಅಮೆರಿಕಾ 2’ ಕಥೆಯೇನು?

ಕನ್ನಡದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾ ‘ಅಮೆರಿಕಾ ಅಮೆರಿಕಾ’ದ ಮುಂದುವರೆದ ಭಾಗ ಅಲ್ಲ. ಈ ಬಾರಿ ಮೇಷ್ಟ್ರು ಸಹನಾ ವಿಜಯ್‌ಕುಮಾರ್ ಅವರ ‘ಕ್ಷಮೆ’ ಎಂಬ ಕಾದಂಬರಿಯನ್ನು ಆಧರಿಸಿ, ಇಂದಿನ ಪೀಳಿಗೆಗೆ ದಾಂಪತ್ಯ ಹಾಗೂ ಬಾಂಧವ್ಯಗಳ ಪಾಠ ಮಾಡುವುದಕ್ಕೆ ಹೊರಟಿದ್ದಾರೆ.

‘ಅಮೆರಿಕಾ ಅಮೆರಿಕಾ 2’ ಕಥೆಯ ಕೇಂದ್ರಬಿಂದು ‘ನುಡಿ’ (ಶಾನ್ವಿ ಶ್ರೀವಾಸ್ತವ). ನುಡಿ ವೃತ್ತಿಯಲ್ಲಿ AI ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಆಕೆಯ ದಾಂಪತ್ಯದಲ್ಲಿ ಅವಳು ಅಂದುಕೊಂಡಷ್ಟು ಉತ್ತಮವಾಗಿಲ್ಲ. ಪತಿ ನಿನಾದ್ (ನಿರೂಪ್ ಭಂಡಾರಿ) ಸ್ವಲ್ಪ ಒರಟು. ಹೀಗಿದ್ದರೂ, ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮಗಳು ಸಿರಿ ಇದ್ದಾಳೆ. ಹೀಗಾಗಿ ಖಿನ್ನತೆಯಲ್ಲಿದ್ದ ನುಡಿ ತನ್ನ ಕೆಲಸಕ್ಕಾಗಿ ಅಮೆರಿಕಗೆ ಹೋಗುತ್ತಾಳೆ. ಅಲ್ಲಿ ಆಕೆಗೆ ಕಾಲೇಜ್‌ನಲ್ಲಿ ಪ್ರೀತಿಸುತ್ತಿದ್ದ ನೀಲ್ (ಪೃಥ್ವಿ ಅಂಬಾರ್) ಸಿಗುತ್ತಾನೆ. ಇಲ್ಲಿಂದ ನುಡಿಯ ಬದುಕು ಇನ್ನಷ್ಟು ಗೊಂದಲವಾಗುತ್ತೆ. ಹಳೆ ಪ್ರೀತಿನಾ? ಮಗಳು-ಗಂಡನಾ? ಅನ್ನೋ ಭಾವನಾತ್ಮಕ ಸುಳಿಯಲ್ಲಿ ಸಿಲುಕುವ ನುಡಿ ಕೊನೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಅನ್ನೋದೇ ಕಥೆ.

ಪ್ರಮುಖ ಪಾತ್ರಗಳ ನಟನೆ?

ಶಾನ್ವಿ ಶ್ರೀವಾಸ್ತವ /ನುಡಿ: ‘ಅಮೆರಿಕಾ ಅಮೆರಿಕಾ 2’ ಸಿನಿಮಾ ‘ನುಡಿ’ ಪಾತ್ರವನ್ನು ಹೆಚ್ಚಾಗಿ ಆವರಿಸಿಕೊಂಡಿದೆ. ಇದು ಅವರ ವೃತ್ತಿನ ಬದುಕಿನಲ್ಲಿ ಸಿಕ್ಕಿರೋ ಚಾಲೆಂಜಿಂಗ್ ಪಾತ್ರ. ಮಾಡ್ರನ್ ಮಹಿಳೆಯಾಗಿ, ತಾಯಿಯಾಗಿ, ಭಾವನೆಗಳ ಗೊಂದಲಕ್ಕೆ ಸಿಲುಕುವ ಗೃಹಿಣಿಯಾಗಿ ಉತ್ತಮ ನಟನೆ ನೀಡಿದ್ದಾರೆ. ಭಾವನಾತ್ಮಕ ಸನ್ನಿವೇಶಗಳನ್ನು ಕಣ್ಣುಗಳಲ್ಲೇ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೃಥ್ವಿ ಅಂಬಾರ್ /ನೀಲ್: ಇಲ್ಲಿ ಪೃಥ್ವಿ ಅಂಬಾರ್‌ಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ನುಡಿಯ ಪ್ರೇಮಿಯಾಗಿ ಪೃಥ್ವಿ ಇಷ್ಟ ಆಗುತ್ತಾರೆ. ಎಂದಿನಂತೆ ಅವರ ನಟನೆ ಸಹಜ ಎನಿಸುತ್ತೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಶಾನ್ವಿ ಹಾಗೂ ಪೃಥ್ವಿ ನಡುವಿನ ಭಾವನಾತ್ಮಕ ಸನ್ನಿವೇಶ ಹಾಗೂ ಸಂಭಾಷಣೆಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.

ನಿರೂಪ್ ಭಂಡಾರಿ/ನಿನಾದ್: ನಿರೂಪ್ ಭಂಡಾರಿಗೆ ಸ್ಕ್ರೀನ್‌ ಸ್ಪೇಸ್ ಕಮ್ಮಿದ್ದರೂ ಗಮನ ಸೆಳೆಯುತ್ತಾರೆ. ಒರಟು ಸ್ವಭಾವದ ಪತಿಯಾಗಿ ತಮ್ಮ ಪಾತ್ರದಲ್ಲಿ ಗಾಂಭೀರ್ಯವನ್ನು ತುಂಬಿದ್ದಾರೆ. ಕಥೆಯ ಆರಂಭದಲ್ಲಿ ಇವರ ಪಾತ್ರ ನೆಗೆಟಿವ್ ಎನಿಸುತ್ತೆ. ಆದರೂ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುವಂತೆ ಮಾಡುತ್ತಾರೆ.

ಪೋಷಕ ನಟರು: ಮೂರು ಪ್ರಮುಖ ಪಾತ್ರಗಳನ್ನು ಬಿಟ್ಟು ಮಂಡ್ಯ ರಮೇಶ್, ಮಾನಸಿ ಸುಧೀರ್, ರೀತು ಸಿಂಗ್ ಸಿನಿಮಾ ಹೈಲೈಟ್ ಎನ್ನಬಹುದು.

ತಾಂತ್ರಿಕವಾಗಿ ಹೇಗಿದೆ?

‘ಅಮೆರಿಕಾ ಅಮೆರಿಕಾ 2’ ಸಿನಿಮಾ ಹೈಲೈಟ್ ಛಾಯಾಗ್ರಹಣ. ಎಸ್.ಕೆ. ರಾವ್ ಅವರ ಕ್ಯಾಮರಾವರ್ಕ್ ಗಮನ ಸೆಳೆಯುತ್ತೆ. ಸಿಯಾಟಲ್ ನಗರದ ದೃಶ್ಯಾವಳಿಗಳು ಪ್ರೇಕ್ಷಕರ ಕಣ್ಣುಗಳನ್ನು ಬೆರಗುಗೊಳಿಸುತ್ತವೆ. ನಾಗತಿಹಳ್ಳಿ ಶೈಲಿಯ ಕಾವ್ಯಾತ್ಮಕ ಸಂಭಾಷಣೆಗಳು ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ.

ಮೈನಸ್ ಏನು?

ಚಿತ್ರಕಥೆ: ನಾಗತಿಹಳ್ಳಿ ಚಂದ್ರಶೇಖರ್ ಕಥೆ ಹೇಳುವುದರಲ್ಲಿ ನಿಪೂಣರು. ಹೀಗಾಗಿ ‘ಅಮೆರಿಕಾ ಅಮೆರಿಕಾ 2’ ಮೇಲೂ ನಿರೀಕ್ಷೆಯಿತ್ತು. ಆದರೆ, ಮೊದಲಾರ್ಧದ ನಿರೂಪಣೆಯಲ್ಲಿ ವೇಗವಿಲ್ಲ. ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಫಸ್ಟ್ ಹಾಫ್‌ ಸ್ಕ್ರೀನ್ ಪ್ಲೇ ಕಡೆಗೆ ಗಮನ ಹರಿಸಬೇಕಿತ್ತು. ಕೆಲವು ಸನ್ನಿವೇಶಗಳಿಗೆ ಮತ್ತಷ್ಟು ಸ್ಪಷ್ಟತೆ ಬೇಕಿತ್ತು. ನುಡಿಯ ಖಿನ್ನತೆ, ಹಳೆಯ ಪ್ರೀತಿ ಬಾಂಧವ್ಯದ ಫ್ಲ್ಯಾಶ್‌ಬ್ಯಾಕ್ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ನಿನಾದ್ ಪಾತ್ರಕ್ಕೆ ಇನ್ನಷ್ಟು ಉತ್ತಮವಾಗಿ ತೋರಿಸಬಹುದಿತ್ತು.

ಸಂಗೀತ ಮ್ಯಾಜಿಕ್ ಮಾಡಿಲ್ಲ: ನಾಗತಿಹಳ್ಳಿ ಚಂದ್ರಶೇಖರ್ – ಮನೋಮೂರ್ತಿ ಕಾಂಬಿನೇಷನ್‌ ಅಂದ್ಮೇಲೆ ಹಾಡುಗಳ ಮೇಲೆ ನಿರೀಕ್ಷೆ ಇದ್ದೇ ಇರುತ್ತೆ. ಆದೆ, ಈ ಬಾರಿ ಸಂಗೀತ ಮೋಡಿ ಮಾಡಿಲ್ಲ. ಹೀಗಾಗಿ ಸಿನಿಮಾ ನೀರಸ ಅಂತ ಅನಿಸುತ್ತೆ.

ಕ್ಲೈಮ್ಯಾಕ್ಸ್

‘ಅಮೆರಿಕಾ ಅಮೆರಿಕಾ 2’ ನೋಡ್ಬೇಕಾ? ಬೇಡ್ವಾ? ಈ ಪ್ರಶ್ನೆ ಕೊನೆಯಲ್ಲಿ ಮೂಡುವುದು ಸಹಜ. ಚಿತ್ರಕಥೆಯಲ್ಲಿ ವೇಗದ ಕೊರತೆ ಇದ್ದರೂ, ಕುಟುಂಬ ಕೂತು ನೋಡಬಹುದಾದ ಸಿನಿಮಾ. ಆಧುನಿಕ ಸಂಬಂಧಗಳು, ಗೊಂದಲ, ಭಾವನೆಗಳ ಹೊಯ್ದಾಟಕ್ಕೆ ಈ ಸಿನಿಮಾ ಕನ್ನಡಿ ಹಿಡಿದಿದೆ. 29 ವರ್ಷಗಳ ಹಿಂದಿನ ಭೂಮಿ-ಸೂರ್ಯ-ಶಶಾಂಕ್ ಅವರಷ್ಟು ನುಡಿ-ನೀಲ್-ನಿನಾದ್ ಕಾಡದೇ ಹೋದರೂ ಇಷ್ಟ ಅಂತೂ ಆಗ್ತಾರೆ.