@colorskannadaofficial (Instagram)
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಪ್ರಸಾರವಾಗುತ್ತಿದ್ದು, ಪ್ರೇಕ್ಷಕರಲ್ಲಿ ಭಾರಿ ಸದ್ದು ಮಾಡುತ್ತಿದೆ. ದೊಡ್ಮನೆಯ ಪ್ರತಿಯೊಂದು ಸಂಚಿಕೆಯಲ್ಲೂ ಸ್ಪರ್ಧಿಗಳ ನಡುವಿನ ಜಗಳ ಹಾಗೂ ಹೈ-ಡ್ರಾಮಾ ಹೆಚ್ಚಾಗುತ್ತಿದೆ.
ಶೋ ಆರಂಭವಾಗಿ ಹಲವು ದಿನಗಳಾಗಿದ್ದರೂ ಸಹ ಇನ್ನೂ ಎಲ್ಲಾ ಸ್ಪರ್ಧಿಗಳಿಗೂ ಮುಖ್ಯ ಮನೆಯೊಳಗೆ ಪ್ರವೇಶ ಸಿಕ್ಕಿಲ್ಲ. ಬಜೆಟ್ ಹಾಗೂ ಟಾಸ್ಕ್ ಕಟ್ಟುಪಾಡುಗಳಿಂದಾಗಿ ಹಲವು ಅಭ್ಯರ್ಥಿಗಳು ಇಂದಿಗೂ ವಿಮಾನಯಾನದಲ್ಲೇ ಕಾಲ ಕಳೆಯುತ್ತಿದ್ದಾರೆ.
ದಿನವಿಡೀ ವಿಮಾನದಲ್ಲೇ ಇರಲಾಗದೆ ಕೆಲವು ಮಹಿಳಾ ಸ್ಪರ್ಧಿಗಳು ಈಗಾಗಲೇ ಕಣ್ಣೀರಿಟ್ಟಿದ್ದಾರೆ. ಇದೀಗ ದೊಡ್ಮನೆಯ ಬೋಲ್ಡ್ ಆಂಡ್ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಕರೆಸಿಕೊಳ್ಳುತ್ತಿದ್ದ ಸೌಂದರ್ಯ ಶೆಟ್ಟಿ ಕೂಡ ವಿಮಾನದಲ್ಲಿ ಇರಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
‘ನಾನು ವಾಶ್‌ರೂಮ್‌ನಲ್ಲೇ ಮಲಗುತ್ತೇನೆ’: ಬಿಗ್ ಬಾಸ್ ಮುಂದೆ ಸೌಂದರ್ಯ ಗೋಳು
ವಿಮಾನದ ಮುಖ್ಯದ್ವಾರದ ಬಳಿ ಹೋದ ಸೌಂದರ್ಯ ಶೆಟ್ಟಿ, ನನಗೆ ಹೊರಗೆ ಹೋಗಲು ಅವಕಾಶ ಕೊಡಿ ಎಂದು ಒದ್ದಾಡಿದ್ದಾರೆ. “ನನಗೆ ತಲೆನೋವು ತಡೆಯಲು ಆಗುತ್ತಿಲ್ಲ, ನಾನು ವಾಶ್‌ರೂಮ್‌ಗೆ ಹೋಗಿ ಮಲಗುತ್ತೇನೆ” ಎಂದು ಕಣ್ಣೀರು ಸುರಿಸಿದ್ದಾರೆ.
ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸೌಂದರ್ಯ ಅವರ ಈ ಹಠಾತ್ ನಡೆ ಬಿಗ್ ಬಾಸ್ ವೀಕ್ಷಕರಿಗೆ ತೀವ್ರ ಆಶ್ಚರ್ಯ ಉಂಟುಮಾಡಿದೆ. ಸೌಂದರ್ಯ ಅವರ ಈ ಹಠಾತ್ ಅಳುವಿಗೆ ಹಾಗೂ ತಲೆನೋವಿಗೆ ನಿಜವಾದ ಕಾರಣ ‘ಮಾಡ್ರನ್ ಕವಿ’ ಮಂಜುನಾಥ್ ಎಂದು ತಿಳಿದುಬಂದಿದೆ.
ರಾತ್ರಿ ಎಲ್ಲಾ ಸ್ಪರ್ಧಿಗಳು ಮಲಗಿದ್ದ ವೇಳೆಯಲ್ಲೂ ಮಂಜುನಾಥ್ ಸುಮ್ಮನಿರದೆ ಮಾತನಾಡುತ್ತಲೇ ಇದ್ದರು. ಇದರಿಂದಾಗಿ ತಮಗೆ ತಲೆನೋವು ಬಂದಿದೆ ಎಂದು ಸೌಂದರ್ಯ ಬಿಗ್ ಬಾಸ್ ಹಾಗೂ ಮನೆಯವರ ಬಳಿ ದೂರಿಕೊಂಡಿದ್ದಾರೆ.
ಸಮಾಧಾನ ಪಡಿಸಿದ ಸ್ಪರ್ಧಿಗಳು: ಮಂಜು ಕೊಟ್ಟ ಸಮಜಾಯಿಷಿ ಏನು?
ತೀವ್ರ ತಲೆನೋವಿನಿಂದ ಜೋರಾಗಿ ಅಳುತ್ತಿದ್ದ ಸೌಂದರ್ಯ ಶೆಟ್ಟಿ ಅವರನ್ನು ಉಳಿದ ಮಹಿಳಾ ಸ್ಪರ್ಧಿಗಳು ಸಮಾಧಾನಪಡಿಸಲು ಯತ್ನಿಸಿದರು. ಆದರೆ, “ಎಷ್ಟು ಹೇಳಿದರೂ ಮಂಜು ಮಾತು ನಿಲ್ಲಿಸುತ್ತಿಲ್ಲ, ನಾನು ಇಲ್ಲಿ ಇರಲ್ಲ” ಎಂದು ಸೌಂದರ್ಯ ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ ಮಲಗಿದ್ದ ಜಾಗದಲ್ಲೇ ಇದ್ದ ಮಂಜುನಾಥ್, “ನಾನು ಅಷ್ಟು ಜೋರಾಗಿ ಮಾತನಾಡಿಲ್ಲವಲ್ಲ” ಎಂದು ಸ್ವಯಂ ಸಮಜಾಯಿಷಿ ನೀಡಿದ್ದಾರೆ. ಮಂಜು ರಾತ್ರಿ ಅವಿನಾಶ್ ಜೊತೆ ಮಾತನಾಡುತ್ತಿದ್ದುದೇ ಸೌಂದರ್ಯ ಸಿಟ್ಟಿಗೆ ಮುಖ್ಯ ಕಾರಣವಾಗಿದೆ.
ವಿಮಾನದಲ್ಲಿ ನೆಲೆಸಿರುವ ಸ್ಪರ್ಧಿಗಳಲ್ಲಿ ಜಾಗದ ಅಭಾವ ಹಾಗೂ ಮಾನಸಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಜು ಮತ್ತು ಸೌಂದರ್ಯ ನಡುವಿನ ಈ ಹೊಸ ಕಿರಿಕಿರಿ ಮುಂಬರುವ ದಿನಗಳಲ್ಲಿ ಇನ್ನಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.




