ದರ್ಶನ್ ಕೇಸ್ ಸೆಪ್ಟೆಂಬರ್ 16ಕ್ಕೆ ಮುಂದೂಡಿಕೆ; ಕೋರ್ಟ್ ಕಲಾಪದಲ್ಲಿ ನಡೆದ್ದೇನು?

ದರ್ಶನ್ ಕೇಸ್‌ನಲ್ಲಿ ಹೈಕೋರ್ಟ್ ಮಹತ್ವದ ಸಲಹೆ

Photo Credits: @dboss_cults_official (Instagram)

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶನ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ನ್ಯಾ. ವಿ. ಶ್ರೀಶಾನಂದ ಅವರಿದ್ದ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು.

ದರ್ಶನ್ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ದರ್ಶನ್ ಜೈಲಿನಲ್ಲಿರುವುದರಿಂದ ಅವರ ಪತ್ನಿಯ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವಿಚಾರಣೆ ವೇಳೆ ದರ್ಶನ್ ಅವರ ಖುದ್ದು ಹಾಜರಿ ಅತ್ಯಗತ್ಯ ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ವಿಡಿಯೋ ಕಾನ್ಫರೆನ್ಸ್‌ನಲ್ಲೇ ಕಲಾಪಕ್ಕೆ 15 ನಿಮಿಷ ಮುನ್ನ ವಕೀಲರು ಮತ್ತು ಕಕ್ಷಿದಾರರು ಖಾಸಗಿಯಾಗಿ ಮಾತನಾಡಲು ಅವಕಾಶ ಮಾಡಿಕೊಡಲಾಗುವುದು. ಹೆಡ್‌ಫೋನ್ ಹಾಗೂ ಲ್ಯಾಪ್‌ಟಾಪ್ ಬಳಸಿ ಸಂವಹನ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪರಪ್ಪನ ಅಗ್ರಹಾರದಲ್ಲೇ ವಿಚಾರಣೆ ನಡೆಸಿ’: ಹಲವು ಆಯ್ಕೆಗಳನ್ನು ನೀಡಿದ ಪೀಠ

ದರ್ಶನ್ ಅವರನ್ನು ಪ್ರತಿದಿನ ಕೋರ್ಟ್‌ಗೆ ಕರೆತರಬೇಕೆಂದರೆ ಭಾರಿ ಪೊಲೀಸ್ ಭದ್ರತೆ ಬೇಕಾಗುತ್ತದೆ ಮತ್ತು ಜನದಟ್ಟಣೆ ತಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ಬೇಕಿದ್ದರೆ ಜಯಲಲಿತಾ ಪ್ರಕರಣದ ಮಾದರಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕೋರ್ಟ್ ವ್ಯವಸ್ಥೆ ಮಾಡಬಹುದು ಎಂದು ಪೀಠ ಹೇಳಿದೆ.

ಆದರೆ ಜೈಲಿನಲ್ಲಿ ಕಲಾಪ ನಡೆದರೆ ಎರಡೂ ಕಡೆಯ ವಕೀಲರಿಗೆ ತೊಂದರೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ತಿಳಿಸಿದರು. ದರ್ಶನ್ ಪರ ವಕೀಲರು ಮಾತ್ರ ಖುದ್ದಾಗಿ ಹಾಜರಾಗಲು ಅವಕಾಶ ಕೋರಿ ಪಟ್ಟು ಹಿಡಿದರು.

ನ್ಯಾಯಾಧೀಶರು ತಂತ್ರಜ್ಞಾನ ಬಳಕೆಯ ಮಹತ್ವವನ್ನು ವಿವರಿಸಿ, “ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬಳಸುವುದು ಉತ್ತಮ. ನನ್ನ 91 ವರ್ಷದ ತಂದೆಯವರೇ ಜೂಮ್ ಹಾಗೂ ಗೂಗಲ್ ಮೀಟ್ ಬಳಸುತ್ತಾರೆ. ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲಗಳಿವೆ” ಎಂದು ಉದಾಹರಣೆ ನೀಡಿದರು.

ಸೆಪ್ಟೆಂಬರ್ 16ಕ್ಕೆ ವಿಚಾರಣೆ ಮುಂದೂಡಿಕೆ: ವಕೀಲರಿಗೆ ಸೌಹಾರ್ದಯುತ ಸಲಹೆ

“ಆರೋಪಿಯು ಅಪರಾಧಿ ಎಂದು ಸಾಬೀತಾಗುವವರೆಗೂ ಅವರ ಹಿತರಕ್ಷಣೆ ಕಾಯುವುದು ಕೋರ್ಟ್ ಹೊಣೆ. ಅಭಿಮಾನಿಗಳಿದ್ದಾರೆ ಆದರೆ ಅನಿರೀಕ್ಷಿತ ಘಟನೆಗಳು ನಡೆಯದಂತೆ ತಡೆಯುವುದು ಅಗತ್ಯ” ಎಂದು ನ್ಯಾಯಾಧೀಶರು ಕೋರ್ಟ್ ಮತ್ತು ಆರೋಪಿಯ ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದರು.

ಮುಖ್ಯ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಅಥವಾ ಅಡ್ಡವಿಚಾರಣೆ ವೇಳೆ ಮಾತ್ರ ಆರೋಪಿಗಳನ್ನು ಹಾಜರಿಡಲು ಸೂಚಿಸಬಹುದು. ನಾಲ್ಕೈದು ಮುಖ್ಯ ಸಾಕ್ಷಿಗಳಿದ್ದು, ಕ್ರಾಸ್ ಎಕ್ಸಾಮಿನೇಷನ್‌ಗೆ ಮೂರು ದಿನಗಳು ಸಾಕಾಗುತ್ತವೆ ಎಂದು ಪೀಠ ತಿಳಿಸಿದೆ.

ಎರಡೂ ಕಡೆಯ ವಕೀಲರು ಚರ್ಚಿಸಿ, ಸೌಹಾರ್ದಯುತವಾಗಿ ಒಂದು ತೀರ್ಮಾನಕ್ಕೆ ಬನ್ನಿ ಎಂದು ಸಲಹೆ ನೀಡಿದ ಹೈಕೋರ್ಟ್, ಕ್ರಾಸ್ ಎಕ್ಸಾಮಿನೇಷನ್ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ.