ಟಾಸ್ಕ್ ವಿಚಾರಕ್ಕೆ ಶುರುವಾಯ್ತು ಕಿತ್ತಾಟ; ಕಾವೇರಿದ ಬಿಗ್ ಬಾಸ್ ದೊಡ್ಮನೆ

ಆಸಿಯಾ-ಸೌಂದರ್ಯ ನಡುವೆ ಬಿರುಸಿನ ವಾಗ್ವಾದ

@colorskannadaofficial (Instagram)

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಅತ್ಯಂತ ಆಸಕ್ತಿದಾಯಕವಾಗಿ ಮೂಡಿಬರುತ್ತಿದೆ. ಈ ಬಾರಿ ಪ್ರಸಿದ್ಧ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಅವಕಾಶ ಕಲ್ಪಿಸಲಾಗಿದ್ದು, ಮನೆಯ ವಾತಾವರಣ ಕ್ಷಣಕ್ಷಣಕ್ಕೂ ಕಾವು ಪಡೆದುಕೊಳ್ಳುತ್ತಿದೆ.

ವಾಹಿನಿಯು ಇದೀಗ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಸ್ಪರ್ಧಿಗಳ ನಡುವಿನ ಹೈ-ಡ್ರಾಮಾ ಅನಾವರಣಗೊಂಡಿದೆ. ಟಾಸ್ಕ್ ಆಡುವ ವಿಷಯವಾಗಿ ಸ್ಪರ್ಧಿ ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ನಡುವೆ ತೀವ್ರ ಸ್ವರೂಪದ ಜಗಳ ನಡೆದಿದೆ.

ತಮ್ಮ ತಂಡದ ಮೂವರನ್ನು ರಕ್ಷಿಸುವ ಮೊದಲ ತಂಡ ಈ ಸವಾಲಿನಲ್ಲಿ ಗೆಲುವು ಸಾಧಿಸುತ್ತದೆ ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಾರೆ. ಈ ಹಂತದಲ್ಲಿ ಟಾಸ್ಕ್‌ನಲ್ಲಿ ಭಾಗವಹಿಸುವ ಕುರಿತು ಇಬ್ಬರ ನಡುವೆ ಜಗಳ ಎದ್ದಿದೆ.

‘ಹಠ ಹಿಡಿಯಬೇಡಿ’: ಆಸಿಯಾ-ಸೌಂದರ್ಯ ನಡುವೆ ಬಿರುಸಿನ ವಾಗ್ವಾದ

“ಇವತ್ತಿನವರೆಗೆ ನಾನು ಯಾವುದೇ ಟಾಸ್ಕ್ ಆಡಿಲ್ಲ, ಹಾಗಾಗಿ ಈ ಬಾರಿ ನಾನೇ ಆಡುತ್ತೇನೆ” ಎಂದು ಆಸಿಯಾ ಪಟ್ಟು ಹಿಡಿಯುತ್ತಾರೆ. ಇದಕ್ಕೆ ಪ್ರತಿಯಾಗಿ “ನಾನು ನಿಮಗಾಗಿ ಅವಕಾಶ ಬಿಟ್ಟುಕೊಟ್ಟಿಲ್ವಾ?” ಎಂದು ಸೌಂದರ್ಯ ಶೆಟ್ಟಿ ಪ್ರಶ್ನಿಸಿದ್ದಾರೆ.

ಯಾರನ್ನು ಆಡಿಸಬೇಕು ಎಂದು ವೋಟ್ ಹಾಕೋಣ ಎಂಬ ಸಲಹೆ ಬಂದಾಗ, “ವೋಟ್ ಹಾಕಲು ನಾನು ಖಂಡಿತ ಬಿಡುವುದಿಲ್ಲ, ನೀವು ಹಠ ಹಿಡಿಯಬೇಡಿ” ಎಂದು ಆಸಿಯಾ ಗರಂ ಆಗಿ ಕೂಗಾಡಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಇಬ್ಬರ ನಡುವಿನ ಮಾತಿಗೆ ಮಾತು ಬೆಳೆದು, ವಾತಾವರಣ ಉದ್ವಿಗ್ನಗೊಂಡಿದೆ. ಮನೆಯ ಇತರ ಸದಸ್ಯರು ಇವರ ಜಗಳವನ್ನು ಶಮನಗೊಳಿಸಲು ಪ್ರಯತ್ನಿಸಿದರೂ ಸಹ ಇಬ್ಬರೂ ತಮ್ಮ ಪಟ್ಟಿನಿಂದ ಹಿಂದೆ ಸರಿದಿಲ್ಲ.

ನಿಜವಾಗಿ ಅತ್ತಿದ್ದಾ ಅಥವಾ ಅಣಕಿಸಿದ್ದಾ? ರಹಸ್ಯ ಬಿಚ್ಚಿಟ್ಟ ಪ್ರೋಮೋ

ಜಗಳದ ಕೊನೆಯಲ್ಲಿ ಸೌಂದರ್ಯ ಶೆಟ್ಟಿ, “ನಮ್ಮನ್ನು ಈ ಫ್ಲೈಟ್ ಒಳಗೆ ಕಾರ್ನರ್ ಮಾಡುತ್ತಿದ್ದಾರೆ, ನನಗೆ ಟಾಸ್ಕ್ ಕೊಡುತ್ತಿಲ್ಲ” ಎಂದು ಕಣ್ಣೀರಿಡುತ್ತಾ ಬಿಗ್ ಬಾಸ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸತ್ಯ ಬೇರೆಯೇ ಇದೆ.

ಸೌಂದರ್ಯ ಇಲ್ಲಿ ನಿಜವಾಗಿ ಕಣ್ಣೀರು ಹಾಕಿಲ್ಲ, ಬದಲಾಗಿ ಆಸಿಯಾ ಅವರ ಮಾತು ಹಾಗೂ ವರ್ತನೆಯನ್ನು ಅಣಕಿಸಿದ್ದಾರೆ. ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಆಸಿಯಾ ಅಲವತ್ತುಕೊಂಡಿದ್ದನ್ನು ನಟಿಸಿ ತೋರಿಸುವ ಮೂಲಕ ಅವರಿಗೆ ಟಾಂಗ್ ನೀಡಿದ್ದಾರೆ.

ಈ ಸೀಸನ್ ಆರಂಭದಿಂದಲೂ ಸಣ್ಣ ಸಣ್ಣ ವಿಚಾರಗಳಿಗೂ ತೀವ್ರ ಸ್ಪರ್ಧೆ ಏರ್ಪಡುತ್ತಿದ್ದು, ಸೌಂದರ್ಯ ಅವರ ಈ ಹೊಸ ತಂತ್ರ ಆಟಕ್ಕೆ ಯಾವ ತಿರುವು ನೀಡಲಿದೆ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.