ಶಿವಣ್ಣ – ಅಭಿಶನ್ ಜೀವಿಂತ್ ‘ಪಿಕಾಸೊ’ ಫಸ್ಟ್ ಲುಕ್ ರಿಲೀಸ್

ಶಿವಣ್ಣ - ಅಭಿಶನ್ ಜೀವಿಂತ್ 'ಪಿಕಾಸೊ' ಫಸ್ಟ್ ಲುಕ್ ರಿಲೀಸ್

@filmy_corner_ (Instagram)

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಹಾಗೂ ಯುವ ನಟ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾಗೆ ‘ಪಿಕಾಸೊ’ ಎಂದು ಹೆಸರಿಡಲಾಗಿದೆ. ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಚಿತ್ರದ ಶೀರ್ಷಿಕೆ ಮತ್ತು ರಂಗುರಂಗಿನ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

‘ಡ್ರಾಮಾ ಕಂಪನಿ’ ಸಂಸ್ಥೆ ಅರ್ಪಿಸುವ ಈ ಚಿತ್ರದ ಮೂಲಕ ನಟ ಶಿವರಾಜ್‌ಕುಮಾರ್ ಅವರ ಗಂಭೀರ ನಟನೆ ಹಾಗೂ ಹೊಸ ತಲೆಮಾರಿನ ನಟ ಅಭಿಶನ್ ಅವರ ಉತ್ಸಾಹ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳುತ್ತಿದೆ. ಗೌತಮ್ ಶಿವರಾಮನ್ ಈ ವಿಭಿನ್ನ ಕಥಾಹಂದರದ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಈ ಪೋಸ್ಟರ್‌ನಲ್ಲಿ ಇಬ್ಬರೂ ನಟರು ಬಿಳಿ ಉಡುಪಿನಲ್ಲಿ, ಸುಟ್ಟ ಪಟಾಕಿಗಳ ನಡುವೆ ಕೂಲ್ ಆಗಿ ಕುಳಿತಿರುವ ತಮಾಷೆಯ ಭಂಗಿ ಗಮನ ಸೆಳೆಯುತ್ತಿದೆ. ಕನ್ನಡ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಎರಡು ತಲೆಮಾರಿನ ನಟರ ಸಮ್ಮಿಲನ: ಕುತೂಹಲ ಮೂಡಿಸಿದ ಪೋಸ್ಟರ್

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್‌ಕುಮಾರ್ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ, ಅತ್ತ ‘ಟೂರಿಸ್ಟ್ ಫ್ಯಾಮಿಲಿ’ ಹಾಗೂ ‘ವಿತ್ ಲವ್’ ಚಿತ್ರಗಳ ಮೂಲಕ ಯುವಜನರ ಮನಗೆದ್ದಿರುವ ಅಭಿಶನ್ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಎರಡು ವಿಭಿನ್ನ ಶೈಲಿಯ ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಈ ಚಿತ್ರಕ್ಕೆ ಗೌತಮ್ ಶಿವರಾಮನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಲಿಯೋನ್ ಜೇಮ್ಸ್ ಅವರ ಸಂಗೀತ ಸಂಯೋಜನೆ ಹಾಗೂ ಪ್ರಗದೀಶ್ ಪ್ರಭು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುರೇಶ್ ಸಂಕಲನ ಮತ್ತು ವಿಜು ವಿಜಯನ್ ಅವರ ಕಲಾ ನಿರ್ದೇಶನ ಈ ಸಿನಿಮಾವನ್ನು ಮತ್ತಷ್ಟು ರಂಗಾಗಿಸಿದೆ.

ಚಿತ್ರದಲ್ಲಿ ಶಿವಾನಿ ನಗರಂ ನಾಯಕಿಯಾಗಿ ನಟಿಸುತ್ತಿದ್ದು, ಯೋಗಲಕ್ಷ್ಮಿ ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ಖ್ಯಾತ ಗಾಯಕ ಗಾನಾ ವಿನೋದ್ ಅವರು ಈ ಚಿತ್ರದ ಮೂಲಕ ನಟರಾಗಿ ಬೆಳ್ಳಿತೆರೆಗೆ ಮೊದಲ ಬಾರಿಗೆ ಹೆಜ್ಜೆ ಇಡುತ್ತಿದ್ದಾರೆ.

ಚಿತ್ರೀಕರಣ ಪೂರ್ಣ: ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ

‘ಡ್ರಾಮಾ ಕಂಪನಿ’ ಬ್ಯಾನರ್‌ನಡಿ ಎ.ಬಾಲಮುರುಗನ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಆರ್. ಕಾರ್ತಿಕೇಯನ್, ದಿನೇಶ್ ಬಾಲಚಂದ್ರನ್ ಹಾಗೂ ಆರ್.ಆರ್.ದೀಪನ್ ರಾಜ್ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಗ್ರೀನ್ ಗಾಡ್ ಮತ್ತು ಡಿ ಪಿಕ್ಚರ್ಸ್ ಸಂಸ್ಥೆಗಳು ನಿರ್ಮಾಣದಲ್ಲಿ ಕೈಜೋಡಿಸಿವೆ.

ಈಗಾಗಲೇ ಚಿತ್ರದ ಪೂರ್ಣಪ್ರಮಾಣದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ತಾಂತ್ರಿಕವಾಗಿ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಭಿನ್ನ ಪೋಸ್ಟರ್ ಮೂಲಕ ಗಮನ ಸೆಳೆದಿರುವ ‘ಪಿಕಾಸೊ’ ಬಳಗವು ಮುಂದಿನ ದಿನಗಳಲ್ಲಿ ಟೀಸರ್ ಹಾಗೂ ಹಾಡುಗಳ ಅಪ್ಡೇಟ್ ನೀಡಲು ಸಜ್ಜಾಗಿದೆ. ಶಿವಣ್ಣ ಅಭಿಮಾನಿಗಳಲ್ಲಿ ಈ ಹೊಸ ಲುಕ್ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.