ಓಂ ಪ್ರಕಾಶ್ ರಾವ್ ಜೀವನದ ಕ್ಲೈಮ್ಯಾಕ್ಸ್ ಎಕ್ಸ್‌ಟ್ರಾಆರ್ಡಿನರಿ; ವೇದಿಕೆಯಲ್ಲೇ ಕಾಲೆಳೆದ ಕಿಚ್ಚ

ಜೀವನದ ಕ್ಲೈಮ್ಯಾಕ್ಸ್ ಎಕ್ಸ್ಟ್ರಾಆರ್ಡಿನರಿ: ಸುದೀಪ್ ಮಾಸ್ ಕಾಮೆಂಟ್

@colorskannadaofficial (Instagram)

ಕನ್ನಡ ಕಿರುತೆರೆಯ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ 13ರ ರಿಯಾಲಿಟಿ ಶೋಗೆ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಮನೆ ಒಳಗೆ ಹೋಗುವ ಮುನ್ನ ನಿರೂಪಕ ಕಿಚ್ಚ ಸುದೀಪ್ ಅವರು ಓಂ ಪ್ರಕಾಶ್ ರಾವ್ ಜೊತೆಗಿನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ತಮ್ಮ ಸೂಪರ್ ಹಿಟ್ ‘ಹುಚ್ಚ’ ಚಿತ್ರದ ನಿರ್ದೇಶನದ ದಿನಗಳನ್ನು ನೆನಪಿಸಿಕೊಂಡ ಸುದೀಪ್, ಓಂ ಪ್ರಕಾಶ್ ರಾವ್ ಅವರ ಪತ್ನಿಗೂ ಹಾಗೂ ಈ ಸಿನಿಮಾಗೂ ಇರುವ ಸೀಕ್ರೆಟ್ ಲಿಂಕ್ ಒಂದನ್ನು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ.

‘ಹುಚ್ಚ’ ಸಿನಿಮಾದಲ್ಲಿ ನಾಯಕಿ ರೇಖಾ ಅವರ ಅಕ್ಕನ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಡೆನಿಸಾ ಅವರೇ, ಕಾಲಕ್ರಮೇಣ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಬಾಳಸಂಗಾತಿಯಾಗಿದ್ದಾರೆ ಎಂದು ಸುದೀಪ್ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಜೀವನದ ಕ್ಲೈಮ್ಯಾಕ್ಸ್ ಎಕ್ಸ್‌ಟ್ರಾಆರ್ಡಿನರಿ: ಸುದೀಪ್ ಮಾಸ್‌ ಕಾಮೆಂಟ್

ಓಂ ಪ್ರಕಾಶ್ ರಾವ್ ಅವರ ಪ್ರೇಮಕಥೆಯನ್ನು ನೆನಪಿಸಿದ ಕಿಚ್ಚ ಸುದೀಪ್, ವೇದಿಕೆಯಲ್ಲಿಯೇ ನಿರ್ದೇಶಕರ ಕಾಲನ್ನು ಮುದ್ದಾಗಿ ಎಳೆದಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಸ್ಯದ ಚಟಾಕಿ ಹಾರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

“ನನ್ನ ಹುಚ್ಚ ಸಿನಿಮಾದ ಕ್ಲೈಮ್ಯಾಕ್ಸ್ ಏನಾಯ್ತೋ ಗೊತ್ತಿಲ್ಲ, ಆದರೆ ಇವರ ಜೀವನದ ಕ್ಲೈಮ್ಯಾಕ್ಸ್ ಮಾತ್ರ ಎಕ್ಸ್‌ಟ್ರಾಆರ್ಡಿನರಿ” ಎಂದು ಕಿಚ್ಚ ಹೇಳುತ್ತಿದ್ದಂತೆ ಇಡೀ ವೇದಿಕೆಯಲ್ಲಿ ನಗುವಿನ ಅಲೆ ಎದ್ದಿದೆ.

ಇದೇ ವೇಳೆ ಓಂ ಪ್ರಕಾಶ್ ರಾವ್ ಅವರ ಪತ್ನಿ ಡೆನಿಸಾ ಅವರು ವೇದಿಕೆಗೆ ಆಗಮಿಸಿದ್ದು, ಪ್ರೇಕ್ಷಕರ ಸಾಕ್ಷಿಯಾಗಿ ಇಬ್ಬರ ನಡುವಿನ ಸುಂದರ ಬಾಂಧವ್ಯ ಅನಾವರಣಗೊಂಡಿದೆ.

ವೇದಿಕೆಯಲ್ಲೇ ಪತ್ನಿಯ ಬರ್ತ್‌ಡೇ ಆಚರಣೆ: ರೋಮ್ಯಾಂಟಿಕ್ ಡ್ಯಾನ್ಸ್

ಡೆನಿಸಾ ಅವರ ಜನ್ಮದಿನದ ಪ್ರಯುಕ್ತ ಓಂ ಪ್ರಕಾಶ್ ರಾವ್ ಅವರು ವೇದಿಕೆಯಲ್ಲೇ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ. “ನನ್ನ ಆಯುಸ್ಸಿನ ಅರ್ಧ ಭಾಗ ನಿನಗೆ ಸಿಗಲಿ, ನಮ್ಮ ಸಂಸಾರವನ್ನು ಗಟ್ಟಿಯಾಗಿ ನಿಲ್ಲಿಸಿದ್ದೀಯ” ಎಂದು ಪ್ರೀತಿಯಿಂದ ಹಾರೈಸಿದ್ದಾರೆ.

ಬಳಿಕ ಕಿಚ್ಚ ಸುದೀಪ್ ನೀಡಿದ ವಿಶೇಷ ಟಾಸ್ಕ್ ಪ್ರಕಾರ ‘ಹುಚ್ಚ’ ಚಿತ್ರದ ‘ಉಸಿರೇ ಉಸಿರೇ’ ಹಾಡಿಗೆ ಓಂ ಪ್ರಕಾಶ್ ರಾವ್ ತಮ್ಮ ಪತ್ನಿಯ ಸುತ್ತಲೂ ಹೆಜ್ಜೆ ಹಾಕಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಈ ಮೂಲಕ ಓಂ ಪ್ರಕಾಶ್ ರಾವ್ ಅವರ ಪತ್ನಿಯನ್ನು ಪರಿಚಯಿಸಿದ ಕಿಚ್ಚ ಸುದೀಪ್, ಶೋ ಆರಂಭಕ್ಕೂ ಮುನ್ನವೇ ಬಿಗ್ ಬಾಸ್ ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಿದ್ದಾರೆ.