SHIVARAJ TANGADAGI : ನಿಮ್ಮಪ್ಪನ್ನ ಮೇಲೆ ಫೋಕ್ಸೋ ಕೇಸ್ ಇದೆ – ನಮ್ಮಪ್ಪನ ಬಗ್ಗೆ ಮಾತಾಡಬೇಡ – ಬಿ.ವೈ.ವಿ ಗೆ ತಂಗಡಗಿ ಕ್ಲಾಸ್ !

ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ದಾಳಿ ತೀವ್ರಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ವಿಜಯೇಂದ್ರ ಅವರಿಗೆ ನೈತಿಕತೆಯ ಮಾತುಗಳನ್ನಾಡುವ ಯಾವುದೇ ಹಕ್ಕಿಲ್ಲ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೂಪರ್ ಸಿಎಂ ರೀತಿ ವರ್ತಿಸಿ, ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ನಡೆಸಿದ್ದನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ ಎಂದು ನೆನಪಿಸಿದ ಸಚಿವರು, ಸ್ವತಃ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವವರು ಇಂದು ಕಾಂಗ್ರೆಸ್ ಸರ್ಕಾರಕ್ಕೆ ನೀತಿಪಾಠ ಹೇಳ ಹೊರಟಿರುವುದು ಅವರ ಇರdetು ಹಾಗೂ ಢೋಂಗಿ ರಾಜಕಾರಣವನ್ನು ಎತ್ತಿ ತೋರಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಸಾಲು ಸಾಲು ಹಗರಣಗಳು ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯ ನಿರ್ಧಾರಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ಮುಂದುವರಿಸಿದರು. ತಮ್ಮ ಕುಟುಂಬದ ರಾಜಕೀಯ ಪ್ರಭಾವ ಬಳಸಿ ಅಧಿಕಾರ ಅನುಭವಿಸಿದ ವಿಜಯೇಂದ್ರ, ಈಗ ಪ್ರಸ್ತುತ ಸರ್ಕಾರದ ಪಾರದರ್ಶಕ ಆಡಳಿತವನ್ನು ಸಹಿಸದೇ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದ ಜನತೆಗೆ ಬಿಜೆಪಿಯ ಹಿನ್ನೆಲೆ ಹಾಗೂ ವಿಜಯೇಂದ್ರ ಅವರ ರಾಜಕೀಯ ನಡೆಗಳ ಸಂಪೂರ್ಣ ಅರಿವಿದೆ. ಅಧಿಕಾರದಲ್ಲಿದ್ದಾಗ ಧನದಾಹ ತೀರಿಸಿಕೊಂಡು, ಈಗ ವಿಪಕ್ಷದಲ್ಲಿದ್ದುಕೊಂಡು ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಿರುವ ಬಿಜೆಪಿ ನಾಯಕರ ಮುಖವಾಡವನ್ನು ಜನರೇ ಕಳಚಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯೇಂದ್ರ ಮೊದಲು ತಮ್ಮ ಹಿಂದಿನ ಇತಿಹಾಸವನ್ನು ತಿರುಗಿ ನೋಡಿಕೊಂಡು, ಆ ನಂತರ ಇತರರ ಬಗ್ಗೆ ಮಾತನಾಡಲಿ ಎಂದು ಸಚಿವ ಶಿವರಾಜ್ ತಂಗಡಗಿ ಖಾರವಾಗಿ ಸವಾಲು ಹಾಕಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ವಂಶಪಾರಂಪರ್ಯ ಹಾಗೂ ಅಧಿಕಾರ ದುರುಪಯೋಗದ ಆರೋಪಗಳು ಹೊಸದೇನಲ್ಲವಾದರೂ, ಈ ರೀತಿಯ ನೇರ ವಾಗ್ದಾಳಿಗಳು ಕಾಂಗ್ರೆಸ್ ಮತ್ತು ಬಿಜೆಪಿಯ ಆಂತರಿಕ ಕಾದಾಟವನ್ನು ಮತ್ತಷ್ಟು ಕಾವೇರಿಸಿವೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ವಿಜಯೇಂದ್ರ ವಹಿಸಿದ್ದ ಪ್ರಭಾವಿ ಪಾತ್ರವನ್ನು ಕಾಂಗ್ರೆಸ್ ನಿರಂತರವಾಗಿ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ವಿಪಕ್ಷದ ಭ್ರಷ್ಟಾಚಾರ ವಿರೋಧಿ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ತಂತ್ರವನ್ನು ಅನುಸರಿಸುತ್ತಿದೆ.

ಆದರೆ, ಈ ರೀತಿಯ ವೈಯಕ್ತಿಕ ಹಾಗೂ ಹಳೆಯ ಇತಿಹಾಸದ ವಾಗ್ದಾಳಿಗಳಿಂದ ರಾಜ್ಯ ಎದುರಿಸುತ್ತಿರುವ ನೈಜ ಅಭಿವೃದ್ಧಿ ಹಾಗೂ ಜನಪರ ಸಮಸ್ಯೆಗಳ ಚರ್ಚೆಗಳು ಮೂಲೆಗುಂಪಾಗುತ್ತದೆ. ರಾಜಕೀಯ ನಾಯಕರು ಪರಸ್ಪರ ವಯಕ್ತಿಕ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುವ ಬದಲು, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಗಮನಹರಿಸಿದ್ರೆ ಜನರಿಗೂ ಒಳಿತಾಗಲಿದೆ.